ಗ್ರಾಮೀಣ ಭಾಗಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಗುರುತಿಸುವ ಕಾರ್ಯಕ್ಕೆ ಚಾಲನೆ

ಚಳ್ಳಕೆರೆ

      ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸರ್ಕಾರ ವಿವಿಧ ಸೌಲಭ್ಯಗಳಿಂದ ವಂಚಿತರಾದ ವ್ಯಕ್ತಿಗಳನ್ನು ಪಟ್ಟಿ ಮಾಡಿ ನಿವೇಶನವೂ ಸೇರಿದಂತೆ ಇತರೆ ಸೌಲಭ್ಯ ನೀಡುವ ಕುರಿತು ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್ ಶುಕ್ರವಾರ ಸಾಣಿಕೆರೆ ಗ್ರಾಮಕ್ಕೆ ತೆರಳಿ ನಿವೇಶನ ನೀಡಲು ಸೂಕ್ತ ಸರ್ಕಾರ ಜಮೀನೊಂದನ್ನು ಗುರುತಿಸಿದರು.

      ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ಶಾಸಕ ಸೂಚನೆಯಂತೆ ಸಾಣೀಕೆರೆ ಗ್ರಾಮಕ್ಕೆ ತೆರಳಿ ಸರ್ಕಾರಿ ಗೋಮಾಳದಲ್ಲಿ ಇದ್ದ ಜಮೀನನ್ನು ನೋಡಿ ಅಲ್ಲಿ ನಿವೇಶನಗಳನ್ನು ವಿಂಗಡಣೆಗೆ ಅನುಕೂಲವಾಗುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಿದ್ದು, ಪ್ರಸ್ತುತ ಈ ವಿಶಾಲವಾದ ಸರ್ಕಾರ ವ್ಯಾಪ್ತಿಯ ಗೋಮಾಳದಲ್ಲಿ ನಿವೇಶನಗಳನ್ನು ವಿಂಗಡಿಸಿ ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆ ನಡೆಸಿ ಫಲಾನುಭವಿಗಳ ಆಯ್ಕೆಯನ್ನು ಮಾಡಿ ಶಾಸಕರ ಮಾರ್ಗದರ್ಶನದಂತೆ ನಿವೇಶನಗಳನ್ನು ವಿತರಣೆ ಮಾಡುವ ಯೋಜನೆ ಇದೆ ಎಂದರು.

     ಕಳೆದ ಕೆಲವಾರು ವರ್ಷಗಳಿಂದ ಸಾಣೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ನಿವೇಶನಗಳನ್ನು ನೀಡುವಂತೆ ಒತ್ತಾಯಿಸಿ ಹಲವಾರು ಬಾರಿ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಈಗ ಕೇವಲ ಸರ್ಕಾರ ಜಾಗವನ್ನು ಮಾತ್ರ ನಿಗದಿಗೊಳಿಸಿದ್ದು, ಮುಂದಿನ ದಿನಗಳಲಿ ನಿಯಮಗಳ ಅನುಸಾರ ಶಾಸಕ ನೇತೃತ್ವದ ಸಮಿತಿ ನಿರ್ಣಯದಂತೆ ನಿವೇಶನಗಳ ವಿತರಣೆ ನಡೆಯಲಿದೆ ಎಂದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಎನ್.ಆರ್.ತಿಪ್ಪೇಸ್ವಾಮಿ, ಅಭಿವೃದ್ಧಿ ಅಧಿಕಾರಿ ದೇವರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ