ಅತಂತ್ರವಾದ ಸೀಟು ಹಂಚಿಕೆ …!!!

ಬೆಂಗಳೂರು

      ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವಣ ಮಾತುಕತೆ ಅತಂತ್ರ ಸ್ಥಿತಿಗೆ ತಲುಪಿದ್ದು, ಆರು ಸೀಟುಗಳ ಮೇಲೆ ಒಂದೂ ಸೀಟನ್ನು ಬಿಲ್ ಕುಲ್ ಬಿಟ್ಟು ಕೊಡುವುದಿಲ್ಲ ಎಂದು ಕಾಂಗ್ರೆಸ್ ಹಠ ಹಿಡಿದಿದೆ.

        ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನಡುವೆ ನಡೆದ ಮಾತುಕತೆ ಅಪೂರ್ಣಗೊಂಡಿದ್ದು ಮುಂದಿನ ಎರಡು ಮೂರು ದಿನಗಳ ನಂತರ ಉಭಯ ಪಕ್ಷಗಳ ನಾಯಕರಾದ ಕೆ.ಸಿ.ವೇಣುಗೋಪಾಲ್ ಹಾಗೂ ಡ್ಯಾನಿಶ್ ಅಲಿ ಪುನ: ಮಾತುಕತೆ ಆರಂಭಿಸಲಿದ್ದಾರೆ.

          ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಉಭಯ ಪಕ್ಷಗಳ ನಾಯಕರು 18:10 ಸೀಟುಗಳನ್ನು ಹಂಚಿಕೊಳ್ಳಲು ಬಹುತೇಕ ಒಪ್ಪಿದ್ದರು. ಆದರೆ ಗೊಂದಲದಲ್ಲಿರುವ ಸೀಟುಗಳ ಹಂಚಿಕೆ ಕುರಿತು ದಿಲ್ಲಿಯಲ್ಲಿಯೇ ಫೈನಲ್ ಮಾತುಕತೆ ನಡೆಸುವುದು ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಿದ್ದರು.

         ಆದರೆ ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಹಾಗೂ ದೇವೇಗೌಡರ ನಡುವೆ ಇಂದು ನಡೆದ ಮಾತುಕತೆಯ ಸಂದರ್ಭದಲ್ಲಿ,ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹತ್ತು ಮಂದಿ ಹಾಲಿ ಎಂ.ಪಿ.ಗಳ ಕ್ಷೇತ್ರಗಳನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲಾಗದು ಎಂದು ರಾಹುಲ್ ಗಾಂಧಿ ಹೇಳಿದರು.

        ವೀರಪ್ಪ ಮೊಯ್ಲಿ ಪ್ರತಿನಿಧಿಸುವ ಚಿಕ್ಕಬಳ್ಳಾಪುರ,ಕೆ.ಹೆಚ್.ಮುನಿಯಪ್ಪ ಪ್ರತಿನಿಧಿಸುವ ಕೋಲಾರ,ಮುದ್ದ ಹನುಮೇಗೌಡ ಪ್ರತಿನಿಧಿಸುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಕೇಳಿತ್ತು.ಅದೇ ರೀತಿ ಬೆಂಗಳೂರು ಉತ್ತರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರವನ್ನೂ ಬಿಟ್ಟುಕೊಡುವಂತೆ ಹೇಳಿತ್ತು. ಆದರೆ ಬೆಂಗಳೂರು ಉತ್ತರ ಕ್ಷೇತ್ರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ತಯಾರಿಲ್ಲ ಎಂದು ಕಾಂಗ್ರೆಸ್ ವರಾತ ತೆಗೆದಿದೆ.

        ಹೀಗಾಗಿ ಹಾಸನ, ಮಂಡ್ಯ, ಬಿಜಾಪುರ ಸೇರಿದಂತೆ ಆರು ಲೋಕಸಭಾ ಸೀಟುಗಳಿಗೆ ಜೆಡಿಎಸ್ ಒಪ್ಪಿಕೊಳ್ಳಬೇಕಿದೆಯಾದರೂ ಅದೀಗ ಮೈಸೂರು ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಬಿಗಿಪಟ್ಟು ಹಿಡಿದಿದೆ.ಒಂದು ವೇಳೆ ಹಾಲಿ ಎಂ.ಪಿ.ಗಳ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂದು ನೀವು ಹೇಳಿದರೂ ನಾವೇನೂ ಹೇಳುವುದಿಲ್ಲ. ಯಾಕೆಂದರೆ ನಿಮ್ಮ ಎಂ.ಪಿ.ಗಳಿರುವ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಕ್ಷೇತ್ರದಲ್ಲಿ ನೀವು ಗೆಲ್ಲುವುದು ಕಷ್ಟ.

        ಆದರೆ ಅಲ್ಲಿ ನೀವು ಸ್ಪರ್ಧಿಸಿಯೇ ಸ್ಪರ್ಧಿಸುತ್ತೀರಿ ಎಂದರೆ ನಾವೇನೂ ಹೇಳುವುದಿಲ್ಲ. ಆದರೆ ಬೆಂಗಳೂರು ಉತ್ತರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರವನ್ನುಬಿಟ್ಟುಕೊಡಿ. ಅಲ್ಲಿಗೆ 20:8 ಆಧಾರದ ಮೇಲೆ ಸೀಟು ಹಂಚಿಕೆಯಾಗಲಿ ಎಂದು ದೇವೇಗೌಡರು ಇಂದಿನ ಸಭೆಯಲ್ಲಿ ವಾದಿಸಿದರು.

       ಆದರೆ ರಾಜ್ಯ ಘಟಕದ ಸಿಗ್ನಲ್ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ 22:6 ಸೀಟುಗಳ ಹಂಚಿಕೆ ಸೂತ್ರವನ್ನು ಮುಂದಿಟ್ಟ ಹಿನ್ನೆಲೆಯಲ್ಲಿ ಉಭಯ ನಾಯಕರ ನಡುವಣ ಮಾತುಕತೆ ವಿಫಲವಾಯಿತು.ಆದರೆ ಮೈತ್ರಿಯನ್ನು ಮುಂದುವರಿಸಬೇಕಾದ ಅನಿವಾರ್ಯ ಸ್ಥಿತಿ ಇರುವುದರಿಂದ ಮರಳಿ ಮಾತುಕತೆ ನಡೆಸಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದ್ದು, ಇದಕ್ಕೂ ಮುನ್ನ ಕೆಳ ಹಂತದ ನಾಯಕರ ನಡುವೆ ಮಾತುಕತೆ ನಡೆಯಲಿದೆ.

         ಅದರನುಸಾರ ಜೆಡಿಎಸ್ ಪಕ್ಷದ ಡ್ಯಾನಿಶ್ ಆಲಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ನಡುವೆ ಮಾತುಕತೆ ನಡೆಯಲಿದ್ದು ವಾರಾಂತ್ಯದ ವೇಳೆಗೆ ನಡೆಯಲಿರುವ ಈ ಮಾತುಕತೆಯ ನಂತರ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap