`ಚರಿತ್ರೆಯ ವಾಸ್ತವಾಂಶದಲ್ಲಿ ಟಿಪ್ಪುವನ್ನು ನೋಡಬೇಕು..

ಚಿತ್ರದುರ್ಗ:

   ಮಕ್ಕಳನ್ನು ಅಡವಿಟ್ಟು ದೇಶದ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿ ರಣರಂಗದಲ್ಲಿ ಮಡಿದ ದೇಶಪ್ರೇಮಿ, ಕನ್ನಡ ಪ್ರೇಮಿ ಟಿಪ್ಪುಸುಲ್ತಾನ್‍ನನ್ನು ಯಾವ ಕಾರಣಕ್ಕಾಗಿ ದೇಶದ್ರೋಹಿ, ಮತಾಂಧ ಎಂದು ಕರೆಯಬೇಕೆಂದು ಸಾಹಿತಿ, ಜನಪರ ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಟಿಪ್ಪುವಿರೋಧಿಗಳನ್ನು ಪ್ರಶ್ನಿಸಿದರು.

   ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಶನಿವಾರ ನಡೆದ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್‍ರವರ 270 ನೇ ಜಯಂತಿ ಹಾಗೂ 64 ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

   ಟಿಪ್ಪುಗಿಂತ ಮೊದಲು ಆಳಿದ ರಾಜರು ಸಾಕಷ್ಟಿದ್ದಾರೆ. ಆದರೆ ಟಿಪ್ಪು ಆಳ್ವಿಕೆ ತುಂಬಾ ಮುಖ್ಯವಾದುದು. ದಕ್ಷಿಣ ಭಾರತಕ್ಕೆ ದೊಡ್ಡ ಸಾಮ್ರಾಜ್ಯ ಕಟ್ಟಿದ ದೊರೆ ಟಿಪ್ಪುಸುಲ್ತಾನ್, ಅನೇಕ ಕೆರೆ, ತೋಪುಗಳನ್ನು ಕಟ್ಟಿಸಿ ರೈತರಿಗೆ ಬಡ್ಡಿಯಿಲ್ಲದೆ ಸಾಲ ನೀಡಿ ಬೆಳೆ ಬರುವತನಕ ತೆರಿಗೆ ವಿಧಿಸಲಿಲ್ಲ. ಕೈಗಾರಿಕೆ, ವಾಣಿಜ್ಯ, ರೇಷ್ಮೆಯನ್ನು ಮೊದಲು ಪರಿಚಯಿಸಿದ್ದು, ಟಿಪ್ಪು ಎನ್ನುವುದನ್ನು ಟಿಪ್ಪು ವಿರೋಧಿಗಳು ಅರ್ಥಮಾಡಿಕೊಳ್ಳಲಿ ಎಂದು ಎಚ್ಚರಿಸಿದರು.

   ತಂತ್ರಜ್ಞಾನದ ದೂರದೃಷ್ಟಿಯುಳ್ಳವರಾಗಿದ್ದ ಟಿಪ್ಪು ಮೊದಲು ರಾಕೆಟ್ ಕಂಡು ಹಿಡಿದರು. ಅಮೇರಿಕಾದ ನಾಸದಲ್ಲಿ ಈಗಲೂ ಟಿಪ್ಪು ಹೆಸರಿದೆ. ಮಾರಿಷಸ್ ಚೀನಾದಿಂದ ರೇಷ್ಮೆ ತರಿಸಿ ರೈತರಿಗೆ ನೆರವಾದರು. ದಲಿತರು, ಹಿಂದುಳಿದವರು, ಕೆಳಜಾತಿಯವರಿಗೆ ಭೂ ಒಡೆತನ ನೀಡಿದ್ದ ಟಿಪ್ಪುವನ್ನು ಒಂದು ಜಾತಿಯನ್ನಾಗಿ ನೋಡುವ ಬದಲು ಆತನ ಚರಿತ್ರೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಟಿಪ್ಪು ಮತಾಂಧನೋ ದೇಶಾಭಿಮಾನಿಯೋ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

    ಕರ್ನಾಟಕ ಒಂದು ಸರ್ಕಾರಕ್ಕೆ ಸೇರಿದ್ದು, ಜಾತಿಗೆ ಒಳಪಟ್ಟಿದ್ದಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಟಿಪ್ಪು ಜಯಂತಿಯನ್ನು ರದ್ದುಪಡಿಸಿ ಒಂದು ಪಕ್ಷದ ಸಿದ್ದಾಂತ, ತತ್ವಕ್ಕೆ ಜೋತಿ ಬಿದ್ದಿರುವುದು ಯಾವ ನ್ಯಾಯ. ವಿವಾದಕ್ಕೀಡು ಮಾಡಿರುವುದು ದೊಡ್ಡ ದುರಂತ. ಬೇರೆ ಜಾತಿಯವರು ಕನ್ನಡದಲ್ಲಿ ಸಾಹಿತ್ಯವನ್ನು ಬರೆದಿದ್ದಾರೆ.

    ದೇಶಕ್ಕೆ ಬೇಕಿರುವುದು ಸಹಭಾಳ್ವೆ, ಸಹೋದರತ್ವವೇ ವಿನಃ ಮಂದಿರ ಮಸೀದಿಯಲ್ಲ. ಟಿಪ್ಪು ತನ್ನ ಆಳ್ವಿಕೆಯಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಗೌರವದಿಂದ ಕಾಣುತ್ತಿದ್ದರು. ಬ್ರಿಟಿಷರ ವಿರುದ್ದ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಕರ್ನಾಟಕದ ಬಗ್ಗೆ ಟಿಪ್ಪುಗೆ ಬಹಳಷ್ಟು ಕನಸಿತ್ತು. ಅದಕ್ಕಾಗಿಯೇ ಬ್ರಿಟೀಷರ ಎದುರು ತಲೆಬಾಗಿಸಲಿಲ್ಲ. ಟಿಪ್ಪುವನ್ನು ಮೈಸೂರು ಹುಲಿ ಎಂದು ಕರೆದಿದ್ದು, ಮೈಸೂರಿನ ಜನ ಎಂದು ಟಿಪ್ಪು ಆಡಳಿತವನ್ನು ಗುಣಗಾನ ಮಾಡಿದರು.

    ಟಿಪ್ಪು ಹುಟ್ಟಿದ್ದು, ಕರ್ನಾಟಕದಲ್ಲೇ ಯಾವ ಕಾರಣಕ್ಕಾಗಿ ಟಿಪ್ಪುವನ್ನು ದೇಶದ್ರೋಹಿ, ಕನ್ನಡ ವಿರೋಧಿಯೆಂದು ಕರೆಯಬೇಕು. ಮದ್ಯಪಾನ, ವೇಶ್ಯಾವಾಟಿಕೆಯನ್ನು ಭಾರತದಲ್ಲಿ ಮೊಟ್ಟ ಮೊದಲು ನಿಷೇಧಿಸಿದ್ದ ದೊರೆ ಟಿಪ್ಪು ಒಬ್ಬ ಮತಾಂಧ ಎನ್ನುವ ಆರೋಪ ಹೊರಿಸುವುದು ಸರಿಯಲ್ಲ. ದೇವಸ್ಥಾನ, ಮಠಗಳಿಗೆ ಕಾಣಿಕೆ ನೀಡಿದ್ದಾರೆ. ಶೃಂಗೇರಿ ಶಾರದಾಂಬೆಯ ಪರಮ ಭಕ್ತನಾಗಿದ್ದ ಟಿಪ್ಪು ಅರಮನೆಯಲ್ಲಿದ್ದ ಗ್ರಂಥ ಭಂಡಾರವನ್ನು ಬ್ರಿಟೀಷರು ಸುಟ್ಟು ಹಾಕಿದರು. ಸಾಮ್ರಾಜ್ಯವನ್ನು ಹದ್ದುಬಸ್ತಿನಲ್ಲಿಟ್ಟದ ರಾಜ ಟಿಪ್ಪು ಬ್ರಿಟೀಷರಿಗೆ ಎಂದಿಗೂ ಶರಣಗಾಗಲಿಲ್ಲ. ಚರಿತ್ರೆ ವಾಸ್ತವಾಂಶದ ಹಿನ್ನೆಲೆಯಲ್ಲಿ ಟಿಪ್ಪುವನ್ನು ನೋಡಬೇಕೆ ವಿನಃ ಆತನೊಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಅಪವಾದಿಸುವುದು ಸರಿಯಲ್ಲ ಎಂದು ಕೋಮುವಾದಿಗಳಿಗೆ ತಿರುಗೇಟು ನೀಡಿದರು.

    ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮೂರು ತಿಂಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಟಿಪ್ಪುಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡಲಿ ಬಿಡಲಿ ನಾವುಗಳು ಮಾತ್ರ ಸೂರ್ಯ ಚಂದ್ರ ಇರುವತನಕ ಟಿಪ್ಪು ಜಯಂತಿಯನ್ನು ನಾಡಿನಾದ್ಯಂತ ಮಾಡುತ್ತೇವೆಂದು ಹೇಳಿದರು.ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಸಾನಿಧ್ಯ ವಹಿಸಿದ್ದರು.

    ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ನ್ಯಾಯವಾದಿಗಳಾದ ಸಾಧಿಕ್‍ವುಲ್ಲಾ, ಬಿ.ಕೆ.ರಹಮತ್‍ವುಲ್ಲಾ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ಮುನಿರಾ ಎ.ಮಕಾಂದಾರ್, ನಜ್ಮತಾಜ್, ಶಬ್ಬಿರ್ ಅಹಮದ್, ಹೆಚ್.ಶಬ್ಬೀರ್‍ಭಾಷ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಮುರುಘರಾಜೇಂದ್ರ ಒಡೆಯರ್, ಮಾಜಿ ಶಾಸಕ ಎ.ವಿ.ಉಮಾಪತಿ, ಬಡಗಿ ಕೆಲಸಗಾರರ ಸಂಘಧ ಎ.ಜಾಕಿರ್‍ಹುಸೇನ್, ಹಾಜಿ ಅನ್ವರ್‍ಸಾಬ್ ಸೇರಿದಂತೆ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap