ಸಾರಿಗೆ ಸಂಸ್ಥೆಯ ನೂನ್ಯತೆಗಳನ್ನು ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ -ಬಿ,ಸತ್ಯನಾರಾಯಣ್

ಶಿರಾ:

      ಸಾರಿಗೆ ನಿಗಮ ಮಂಡಳಿಯ ಅಧ್ಯಕ್ಷನಾದ ನಂತರ ಹಂತಹಂತವಾಗಿ ನಿಗಮದ ಮೂಲ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದು ಗ್ರಾಮೀಣ ಸಾರಿಗೆಯ ಕಡೆ ಹೆಚ್ಚಿನ ಗಮನಹರಿಸುವ ಮೂಲಕ ಗ್ರಾಮೀಣರ ಸಾರಿಗೆ ವ್ಯವಸ್ಥೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ತಿಳಿಸಿದರು.

     ಶಿರಾ ನಗರದ ಸಾರಿಗೆ ಘಟಕದಲ್ಲಿ ಶನಿವಾರ ನಡೆದ ಸಾರಿಗೆ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ನನಗೆ ಈ ಇಲಾಖೆ ಹೊಸದಿರಬಹುದು ಆದರೆ ಸದರಿ ಇಲಾಖೆಯಲ್ಲಿ ಒಂದು ಒಳ್ಳೆಯ ಸಾಧನೆ ಮಾಡುವ ಹಂಬಲವೂ ನನಗಿದೆ. ಬರದ ನಾಡುಗಳ ಅನೇಕ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೆಂಪು ಬಸ್ಸಿನ ಮುಖ ನೋಡದ ಹಳ್ಳಿಗಳಿವೆ. ಅಂತಹ ಅಗತ್ಯವಾದ ಗ್ರಾಮೀಣ ಪ್ರದೇಶಗಳ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಕೆಲಸವಾಗಬೇಕಿದೆ ಎಂದರು.

     ಚಿತ್ರದುರ್ಗ ವಿಭಾಗಕ್ಕೆ ಶಿರಾ ಘಟಕವನ್ನು ಈ ಹಿಂದೆ ಸೇರಿಸಿದ್ದ ಪರಿಣಾಮ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು ನಾನು ನಿಗಮದ ಅಧ್ಯಕ್ಷನಾದ ಕೂಡಲೇ ಶಿರಾ ಘಟಕವನ್ನು ತುಮಕೂರಿಗೆ ಮತ್ತೆ ವರ್ಗಾಹಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ ಎಂದು ಸತ್ಯನಾರಾಯಣ್ ತಿಳಿಸಿದರು.

     ಸಾರಿಗೆ ಅದಾಲತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರೆತೆಗಳ ಬಗ್ಗೆಯೂ ಚರ್ಚಿಸಲಾಗಿ ಅನೇಕ ಸಾರ್ವಜನಿಕರು ಅಧಿಕಾರಿಗಳಿಗೆ ಸಾರಿಗೆ ನಿಗಮದ ಸಮಸ್ಯೆಗಳನ್ನು ನೀಡಿ ಗಮನ ಸೆಳೆದರು.

     ಶಿರಾ ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ಬಿ.ಗೋವಿಂದಪ್ಪ ಮಾತನಾಡಿ ಸತ್ಯನಾರಾಯಣ್ ನಿಗಮದ ಅಧ್ಯಕ್ಷರಾದ ನಂತರ ಚಿತ್ರದುರ್ಗಕ್ಕೆ ಸೇರಿದ್ದ ಶಿರಾ ಘಟಕವನ್ನು ಮತ್ತೆ ತುಮಕೂರು ವಿಭಾಗಕ್ಕೆ ಸೇರ್ಪಡೆ ಮಾಡಿಸಿದ ಬಗ್ಗೆ ನಮಗೆ ಹೆಮ್ಮೆ ಇದೆಯಾದರೂ ಈವರೆಗೂ ರಾತ್ರಿ 8 ಗಂಟೆಯ ನಂತರ ಬೆಂಗಳೂರು, ತುಮಕೂರು ಮಾರ್ಗವಾಗಿ ಬರುವ ಸಾರಿಗೆ ಬಸ್ಸಸಗಳು ಶಿರಾ ನಗರದ ಒಳಗಡೆ ಬರುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರು ನಿಡಿದರೂ ಪ್ರಯೋಜನವಿಲ್ಲ. ಚಾಲಕ, ನಿರ್ವಾಹಕರು ಪ್ರಯಾಣಿಕರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಆರೋಪಿಸಿದರು.

     ಶಿರಾ ಸಾರಿಗೆ ವಿಭಾಗದ ಸುಮಾರು 40 ಬಸ್‍ಗಳಲ್ಲಿ ಚಲಿಸಲು ಕೂಡಾ ಶಕ್ತಿ ಇಲ್ಲದಂತಾಗಿದೆ. ಬಸ್ ಪಾಸ್ ಇರುವ ವಿದ್ಯಾರ್ಥಿಗಳನ್ನು ನಿರ್ವಾಹಕರು ಕೇವಲವಾಗಿ ಕಾಣುವ ವ್ಯವಸ್ಥೆಯನ್ನು ತೊಡೆದು ಹಾಕಿ. ಹಳೆಯ ಹಳೆಯ ಬಸ್‍ಗಳಿಂದ ಅನಾಹುತಗಳಾಗುವ ಸಾದ್ಯತೆಯೂ ಇದ್ದು ಉತ್ತರ ಕರ್ನಾಟಕದ ಸಾರಿಗೆ ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸುವ ಅಧಿಕಾರಿಗಳು ಬರದ ನಾಡಿನ ಅದರಲ್ಲೂ ಗಡಿಭಾಗದ ಇಂತಹ ತಾಲ್ಲೂಕುಗಳ ಬಗ್ಗೆ ಸಾರಿಗೆ ಅಭಿವೃದ್ಧಿ ಕೈಗೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ನಮ್ಮದೇ ಕ್ಷೇತ್ರದ ಶಾಸಕರು ನಿಗಮದ ಅಧ್ಯಕ್ಷರಾಗಿದ್ದು ಈ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಬಿ.ಗೋವಿಂದಪ್ಪ ಮಂಡಳಿಯ ಅಧ್ಯಕ್ಷರ ಗಮನ ಸೆಳೆದರು.

       ವಿದ್ಯಾರ್ಥಿ ಪರಿಷತ್‍ನ ಅಭಿಷೇಕ್ ಮಾತನಾಡಿ ಶಿರಾ ಬಸ್ ನಿಲ್ದಾಣದಲ್ಲಿ ಪ್ರತಿ ದಿನ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಬಸ್ಸುಗಳಿಗಾಗಿ ತಾಸುಗಟ್ಟಲೆ ಕಾಯಬೇಕಿದೆ. ಬೆಳಿಗ್ಗೆ 7 ರಿಂದ 8 ಗಂಟೆಯಾದರೂ ವಾಹನ ಸೌಲಭ್ಯವೇ ಇರುವುದಿಲ್ಲ. ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದ ಶಾಲಾ-ಕಾಲೇಜುಗಳಿಗೆ ಹೋಗಲು ಹರ ಸಾಹಸ ಮಾಡಬೇಕಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ ಎಂದರು.

       ಸೀಗಲಹಳ್ಳಿ ವೀರೇಂದ್ರ ಮಾತನಾಡಿ ಪ.ನಾ.ಹಳ್ಳಿ ಸಮೀಪದ ಸೀಗಲಹಳ್ಳಿ ಒಂದು ಕುಗ್ರಾಮದಂತಾಗಿದೆ. ಈ ಗ್ರಾಮದ ಜನ ಬಸ್ಸಿನ ವ್ಯವಸ್ಥೆ ಇಲ್ಲದೆ ಗ್ರಾಮದಿಂದ ನಡೆದುಕೊಂಡು ಮುಖ್ಯ ರಸ್ತೆಗೆ ಬಂದು ಶಿರಾ ಕಡೆ ವಸ್ ಹತ್ತಬೇಕಿದ್ದು ಈ ಮಾರ್ಗವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

      ಡಿ.ಎಸ್.ಎಸ್. ಕಾರ್ಯಕರ್ತ ನರಸಿಂಹಯ್ಯ ಮಾತನಾಡಿ ದೊಡ್ಡ ಆಲದಮರದ ಮೂಲಕ ಕಾಳಾಪುರದ ಮಾರ್ಗವಾಗಿ ಬಡುವನಹಳ್ಳಿ ಕೈಮರದವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಈ ಭಾಗದ ಜನಕ್ಕೆ ಅನುಕೂಲವಾಗಲಿದೆ ಎಂದರು.ಸಾರ್ವಜಿಕರ ಅಹವಾಲುಗಳನ್ನು ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ಸ್ವೀಕರಿಸಿದ ನಂತರ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ಬಾಲಾನಾಯ್ಕ ಮಾತನಾಡಿ ಸಾರ್ವಜನಿಕರ ಅಹವಾಲುಗಳಿಗೆ ನಿಗಮವೂ ಕೂಡಲೇ ಗಮನಹರಿಸುವುದು ಎಂದು ಭರವಸೆ ನೀಡಿದರು

       ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಾಸ್, ಜಿ.ಪಂ. ಸದಸ್ಯ ರಾಮಕೃಷ್ಣ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಟಿ.ಡಿ.ಮಲ್ಲೇಶ್, ತುಮಕೂರು ವಿಬಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಮುಖ್ಯ ಇಂಜಿನಿಯರ್ ಜಗದೀಶಚಂದ್ರ, ಎಕ್ಸಿಕ್ಯುಟೀವ್ ಇಂಜಿನಿಯರ್ ನಾರಾಯಣಸ್ವಾಮಿ, ರೇಣುಕೇಶ್, ಡಿ.ಟಿ.ಓ. ಫಕೃದ್ಧೀನ್, ವಿಜಯ್‍ಕುಮಾರ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link