ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವರೆ ಹಿರಿಯ ಅಧಿಕಾರಿಗಳು?

ಪಾರದರ್ಶಕತೆ ಇಲ್ಲದ ಸ್ಮಾರ್ಟ್ ಕಾಮಗಾರಿಗಳು

ತುಮಕೂರು:

     ಯಾವುದೇ ಕಾಮಗಾರಿಗಳು ನಡೆಯಲಿ ಅದಕ್ಕೆ ಮೇಲುಸ್ತುವಾರಿ ಇರಬೇಕು. ದಿನನಿತ್ಯ ಅವುಗಳ ಬಗ್ಗೆ ನಿಗಾ ವಹಿಸಬೇಕು. ಇಂತಹ ಕಾಮಗಾರಿಗಳ ಉಸ್ತುವಾರಿಗಾಗಿಯೇ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಇಂಜಿನಿಯರ್‍ಗಳು ಇದ್ದಾರೆ. ಇವರ ಜೊತೆಗೆ ಸಂಸ್ಥೆಯ ನಿರ್ವಹಣೆ ಹೊಣೆ ಹೊತ್ತ ಇಂಜಿನಿಯರ್ ಇರುತ್ತಾರೆ. ಇವರಲ್ಲದೆ ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಪರಿಶೀಲನೆಯೂ ಆಗಬೇಕು. ಈ ಎಲ್ಲ ವ್ಯವಸ್ಥೆಗಳು ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅನುಷ್ಠಾನದಲ್ಲಿ ಆಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಗುಣಮಟ್ಟದ ವರದಿ ಪರಿಶೀಲಿಸದೇ ಹೋದರೆ ಈ ಕಾಮಗಾರಿಗಳ ನೈಜತೆ ತಿಳಿಯುವುದಾದರೂ ಹೇಗೆ?

ಅಧ್ಯಕ್ಷರ ಪಾತ್ರವೇನು?

      ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ಎಂಬ ಕಂಪನಿ ನಾಮಾಂಕಿತದಲ್ಲಿ ಅಧ್ಯಕ್ಷರೊಬ್ಬರನ್ನು ನೇಮಿಸಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಸ್ಥಾನದ ಐಎಎಸ್ ಅಧಿಕಾರಿಯೂ ಆಗಿರುವ ಶಾಲಿನಿ ರಜನೀಶ್ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಅಧ್ಯಕ್ಷರಾಗಿದ್ದು, ಎಲ್ಲ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬೇಕು. ಆಗಾಗ್ಗೆ ಅಧಿಕಾರಿಗಳ ಸಭೆ ನಡೆಸಬೇಕು. ಇವರಿಗೆ ವಿಶೇಷ ಅಧಿಕಾರ ನೀಡಲಾಗಿದೆ.

     ಕಳೆದ 2 ತಿಂಗಳ ಸಮಯದಲ್ಲಿ ತುಮಕೂರು ನಗರದ ಸ್ಮಾರ್ಟ್‍ಸಿಟಿ ಅಧಿಕಾರಿಗಳೊಂದಿಗೆ ಇದೇ ಅಧಿಕಾರಿ ಸಭೆ ನಡೆಸಿದರು. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಿಡಿಮಿಡಿಗೊಂಡರು. ಯಾವುದೂ ಸರಿಇಲ್ಲ ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಂದಿನ ಆ ಸಿಡಿಮಿಡಿ, ಸಿಟ್ಟು ಒಂದೇ ವಾರದಲ್ಲಿ ಮಾಯವಾಯಿತೇಕೆ? ಎಂಬುದು ಮಾತ್ರ ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ.

     ಈ ಸಭೆಯಾದ ಬಳಿಕ ಒಂದು ವಾರಕ್ಕೆ ಮತ್ತೆ ಆಗಮಿಸಿ ಸಭೆ ನಡೆಸಿದ ಇದೇ ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಶಹಬ್ಬಾಶ್ ಗಿರಿಕೊಟ್ಟರು. ಕಾಮಗಾರಿಗಳ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು. ಇದರ ಗುಟ್ಟಾದರೂ ಏನು? ಒಮ್ಮೆ ಅಧಿಕಾರಿಗಳನ್ನು ಬೈಯ್ದು ಹೋದವರು ಮತ್ತೊಮ್ಮೆ ಬಂದು ಬೆನ್ನುತಟ್ಟಿ ಹೋಗುತ್ತಾರೆಂದರೆ ಅದಕ್ಕೆ ಅರ್ಥವೇನು? ಸ್ಮಾರ್ಟ್‍ಸಿಟಿ ಅಧ್ಯಕ್ಷರ ಈ ನಡವಳಿಕೆಗಳೇ ಈಗ ತುಮಕೂರು ನಗರದ ನಾಗರಿಕರಲ್ಲಿ ಅನುಮಾನಗಳು ಹುಟ್ಟಲು ಕಾರಣವಾಗಿದೆ. ಮೇಲುಸ್ತುವಾರಿ ವಹಿಸಿ ಕಾಮಗಾರಿಗಳ ಬಗ್ಗೆ ನಿಗಾ ವಹಿಸಬೇಕಾದವರೆ ಹೀಗೆ ನಡೆದುಕೊಂಡರೆ ಇನ್ನು ಕೆಳಸ್ತರದ ಅಧಿಕಾರಿಗಳನ್ನು ಪ್ರಶ್ನಿಸಲಾದೀತೆ?

    ಸ್ಮಾರ್ಟ್ ಸಿಟಿ ಕಾಮಗಾರಿಗಳು ಆರಂಭವಾದ ನಂತರ ಅಧ್ಯಕ್ಷ ಸ್ಥಾನದಲ್ಲಿರುವ ಶಾಲಿನಿ ರಜನೀಶ್ ಅವರು ವಿಶೇಷ ಮುತುವರ್ಜಿ ವಹಿಸಿ ಸ್ಥಳಕ್ಕೆ ಭೇಟಿ ನೀಡುವ ಕಾರ್ಯ ಮಾಡಬೇಕಿತ್ತು. ಆದರೆ ಅಂತಹ ಪ್ರಯತ್ನಗಳೇ ಕಾಣುತ್ತಿಲ್ಲ. ಬದಲಿಗೆ ರಾಜಧಾನಿಯಲ್ಲಿ ಕುಳಿತೇ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ ಎಂಬ ಮಾತುಗಳು ಈಗ ಎಲ್ಲೆಡೆ ಚರ್ಚಿತವಾಗುತ್ತಿವೆ. ಕೋಟಿ ಕೋಟಿ ರೂ.ಗಳ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅನುಷ್ಠಾನದ ಹಿಂದೆ ನಡೆದಿರುವ, ಕೆಲವು ಕಾಮಗಾರಿಗಳನ್ನು ವಹಿಸಿರುವುದರ ಹಿಂದೆ ಭ್ರಷ್ಟಾಚಾರ ನಡೆದಿರಬಹುದೆ ಎಂಬ ವ್ಯಾಖ್ಯಾನಗಳು ಇತ್ತೀಚೆಗೆ ಹೆಚ್ಚುತ್ತಿವೆ.

    ತುಮಕೂರು ನಗರದಲ್ಲಿ ಆರಂಭವಾಗಿ ಅಷ್ಟೇ ವೇಗವಾಗಿ ಸ್ಥಗಿತಗೊಂಡ ಇ-ಟಾಯ್ಲೆಟ್ ಹಾಗೂ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ 61 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾದ ದೀಪಾಲಂಕಾರ, ವಿಶ್ರಾಂತಿ ಕಲ್ಲು ಇತ್ಯಾದಿಗಳು ಉದಾಹರಣೆಯಾಗಿ ನಿಲ್ಲುತ್ತವೆ.
ಇ-ಟಾಯ್ಲೆಟ್ ಯೋಜನೆಯನ್ನೇ ತೆಗೆದುಕೊಂಡರೆ ಸ್ಮಾರ್ಟ್‍ಸಿಟಿ ಯೋಜನೆಯಡಿ 12.43 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡೂ ಕಡೆ ಇ-ಟಾಯ್ಲೆಟ್ ವ್ಯವಸ್ಥೆ ಜಾರಿಗೆ ತರಲಾಯಿತು.

   ಶಾಲಿನಿ ರಜನೀಶ್ ಅವರೇ ಇದರ ರೂವಾರಿಗಳೆನ್ನಲಾಗಿದೆ. ಈ ವ್ಯವಸ್ಥೆಯಿಂದ ಸ್ಮಾರ್ಟ್ ಸಿಟಿ ಹಣ ವೃಥಾ ಪೋಲಾಗಲಿದೆ ಎಂಬ ಅನುಮಾನ ಬಂದದ್ದೇ ತಡ ಅಂದಿನ ಸಚಿವ ಯು.ಟಿ.ಖಾದರ್ ಇದರ ಸ್ಥಗಿತಕ್ಕೆ ಸೂಚಿಸಿದ್ದರು. ಸ್ಥಳೀಯ ಶಾಸಕ ಜ್ಯೋತಿಗಣೇಶ್ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಯೋಜನೆಯನ್ನು ಈಗ ಅಧಿಕಾರಿಗಳು ಪ್ರಾಯೋಗಿಕವಾಗಿ ಈ ಹಿಂದೆ ಜಾರಿಗೆ ತರಲಾಗಿತ್ತು. ಮುಂದಿನ ದಿನಗಳಲ್ಲಿ ಪಾಲಿಕೆಯವರು ನಿರ್ವಹಣೆ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ.

    ಇ-ಟಾಯ್ಲೆಟ್ ಸೇರಿದಂತೆ ಯಾವುದೇ ಯೋಜನೆಗಳಿರಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ಸುದೀರ್ಘ ಚರ್ಚೆಯಾಗಬೇಕು. ಇದಕ್ಕಾಗಿಯೇ ಸಮಿತಿ, ಸಭೆಗಳಿಲ್ಲವೆ? ಅಂತಹ ಕಡೆ ಈ ವಿಷಯಗಳು ಚರ್ಚೆಯಾಗುವುದಿಲ್ಲವೆ? ಸ್ಮಾರ್ಟ್‍ಸಿಟಿ ಯೋಜನೆಯಡಿ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಗಿದೆಯೇ? ಇಂತಹ ಹಲವು ಹತ್ತು ಪ್ರಶ್ನೆಗಳು ಈಗ ಹುಟ್ಟಿಕೊಳ್ಳುತ್ತಿವೆ.
ಬೆಂಗಳೂರಿನಲ್ಲಿ ಕುಳಿತು ಸಭೆ ಮಾಡುತ್ತಾರೆ. ಇಲ್ಲಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗುತ್ತಾರೆ.

    ಅವರು ಹಿರಿಯ ಅಧಿಕಾರಿ, ಹೇಳಿದ್ದನ್ನು ಇಲ್ಲಿನ ಅಧಿಕಾರಿಗಳು ಕೇಳಬೇಕು. ಚಾಚೂ ತಪ್ಪದೆ ಪಾಲಿಸಬೇಕು. ಹಾಗಾದರೆ ಜನಪ್ರತಿನಿಧಿಗಳ ಅಧಿಕಾರವೇನು? ಯೋಜನೆಗಳು, ಕಾಮಗಾರಿಗಳನ್ನು ಪ್ರಶ್ನಿಸುವ ಅಧಿಕಾರ ಇತರರಿಗೆ ಇಲ್ಲವೆ? ಸಾರ್ವಜನಿಕರಿಗೆ ಮಾಹಿತಿ ನೀಡಬೇಡವೆ?

ಹೊಂದಾಣಿಕೆಯೇ ಇಲ್ಲ

     ಕಾಮಗಾರಿಗಳನ್ನು ಗುತ್ತಿಗೆ ಪಡೆಯುವವರು ಮುಂದಿನ ಆಗುಹೋಗುಗಳನ್ನು ಅರಿತೇ ದರ ನಮೂದಿಸಿರುತ್ತಾರೆ. ಸಣ್ಣ ಸಣ್ಣ ಅಂಶಗಳನ್ನೂ ಬಿಡದೆ ಲೆಕ್ಕಹಾಕಿರುತ್ತಾರೆ. ಅದಕ್ಕೆ ತಕ್ಕಂತೆ ಬಿಲ್ ಸಿದ್ಧಪಡಿಸುತ್ತರೆ. ಇದೇ ಕೋಟ್ಯಂತರ ರೂ.ಗಳಾಗುತ್ತದೆ. ಕೋಟಿಗಟ್ಟಲೆ ರೂ.ಗಳ ಕಾಮಗಾರಿ ನಡೆಸುತ್ತಿರುವವರು ಯಾರ ಹಂಗಿಗೂ ಸಿಗದಂತೆ ಇದ್ದಾರೆ. ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಎಲ್ಲರೂ ಪರಸ್ಪರ ಚರ್ಚಿಸಿ ಹೊಂದಾಣಿಕೆಯೊಂದಿಗೆ ಕಾಮಗಾರಿ ನಿರ್ವಹಣೆ ಮಾಡುವ ವ್ಯವಸ್ಥೆಯಂತೂ ಇಲ್ಲಿ ಕಾಣುತ್ತಿಲ್ಲ. ಹೀಗಾಗಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಅಯೋಮಯ ಎನ್ನುವಂತಾಗಿದೆ.

     ಸ್ಮಾರ್ಟ್ ಹೆಸರೇ ಹೇಳುವಂತೆ ಇಡೀ ಕಾಮಗಾರಿಗಳು ಸ್ಮಾರ್ಟ್ ಆಗಿಯೇ ನಡೆಯಬೇಕು. ಅಂತಿಮವಾಗಿ ಈ ನಗರ ಸುಂದರವಾಗಬೇಕು. ಆದರೆ ಯಾವ ದೃಷ್ಟಿಕೋನದಿಂದ ನೋಡಿದರೂ ಈಗಿನ ಕಾಮಗಾರಿಗಳು ಸ್ಮಾರ್ಟ್ ಆಗಿ ಕಾಣುತ್ತಿಲ್ಲ. ಅಧಿಕಾರಿಗಳು, ನಾಯಕರು ಮತ್ತು ಫಲಾನುಭವಿಗಳು ಮಾತ್ರವೇ ಸ್ಮಾರ್ಟ್ ಆಗುತ್ತಿರಬಹುದೆ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಕಾಮಗಾರಿಗಳ ಬಗ್ಗೆ ಪ್ರಶ್ನೆ ಮಾಡಬೇಕಿರುವವರು, ಅದರ ಗುಣಮಟ್ಟ ಪ್ರಶ್ನಿಸಬೇಕಿರುವವರು ಮೌನ ವಹಿಸಿದರೆ ಅದರ ಹಿಂದಿರುವ ಕಾರಣವಾದರೂ ಏನು? ಎಂಬ ಗುಮಾನಿ ಬರುವುದು ಸಹಜವಲ್ಲವೆ?

   ಮಹಾನಗರ ಪಾಲಿಕೆಯ ಸದಸ್ಯರ ಸ್ಥಿತಿಯಂತೂ ನೆಪಮಾತ್ರ ಸದಸ್ಯರು ಎನ್ನುವಂತಾಗಿದೆ. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಸಂಪೂರ್ಣ ಚಿತ್ರಣ ಇವರಿಗೂ ತಿಳಿದಿಲ್ಲ. ನನ್ನ ವಾರ್ಡ್‍ನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೇ ಅವರಿಗೆ ಇಲ್ಲವಾದರೆ ಸದಸ್ಯರಾಗಿ ಇದ್ದುಕೊಂಡು ಪ್ರಯೋಜನವಾದರೂ ಏನು? ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಅವರೂ ಉತ್ತರಿಸಲಾಗದೆ ಹೈರಾಣಾಗಿ ಹೋಗಿದ್ದಾರೆ. ಮತದಾರರು ಇವರ ಹಿಂದೆ ಬೀಳುತ್ತಿದ್ದಾರೆ. ಕಾಮಗಾರಿಗಳ ಅವ್ಯವಸ್ಥೆಯ ಬಗ್ಗೆ ಕಾರ್ಪೋರೇಟರ್‍ಗಳನ್ನೇ ಪ್ರಶ್ನಿಸುತ್ತಿದ್ದಾರೆ. ತಾವು ಗೆಲ್ಲಿಸಿದ ಜನನಾಯಕರನ್ನಲ್ಲದೆ ಮತ್ಯಾರನ್ನು ಪ್ರಶ್ನಿಸಲು ಸಾಧ್ಯ?

ಸಾರ್ವಜನಿಕರ ಜವಾಬ್ದಾರಿ

    ಯೋಜನೆ ಜಾರಿಯಾಗುವ ಪ್ರದೇಶದ ಜನರ ಸಹಭಾಗಿತ್ವದಿಂದಲೇ ಕಾಮಗಾರಿಗಳು ರೂಪುಗೊಳ್ಳಬೇಕು. ಜನರ ಸಲಹೆ-ಸಹಕಾರಗಳು ಇಂತಹ ಯೋಜನೆಗಳಿಗೆ ಅತಿಮುಖ್ಯ. ಈಗಾಗಲೇ ಕಾಮಗಾರಿಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ತುಮಕೂರು ನಗರಕ್ಕೆ ಜನರ ಪ್ರತಿಕ್ರಿಯೆ ಅಷ್ಟಕ್ಕಷ್ಟೆ ಎನ್ನುವಂತಿದೆ.

     ಕಾಮಗಾರಿಗಳ ಗುಣಮಟ್ಟ ಇರಬಹುದು ಅಥವಾ ಅದರ ಆಗುಹೋಗುಗಳ ಬಗ್ಗೆ ಜನತೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮಹಾನಗರ ಪಾಲಿಕೆಯ ಸದಸ್ಯರೂ ಸ್ಪಂದಿಸದೆ ಸಾರ್ವಜನಿಕರ ಪ್ರತಿಸ್ಪಂದನವೂ ಇಲ್ಲದೆ ಕಾಮಗಾರಿಗಳು ಯದ್ವಾತದ್ವಾ ನಡೆಯಲು ಅನುಕೂಲ ಮಾಡಿಕೊಟ್ಟಂತಿದೆ. ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಮನೆಯ ಮುಂಭಾಗದಲ್ಲಿ ರಸ್ತೆ ಅಗೆದುಕೊಂಡು ಹೋಗುತ್ತಾರೆ. ಒಮ್ಮೆ ಮುಚ್ಚುತ್ತಾರೆ. ಮಗದೊಮ್ಮೆ ಅಗೆಯುತ್ತಾರೆ.

     ಹೀಗೆ ಗುಂಡಿತೋಡಿ ಅದರೊಳಗೆ ನೀರು ನಿಂತು ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿದ್ದರೂ ತಮಗೂ ಆ ಕಾಮಗಾರಿಗೂ ಸಂಬಂಧವೇ ಇಲ್ಲ ಎನ್ನುವಂತೆ ನಾಗರಿಕರು ಮೌನ ವಹಿಸುತ್ತಿದ್ದಾರೆ. ಪ್ರತಿ ನಾಗರಿಕನೂ ತೆರಿಗೆ ಕಟ್ಟುತ್ತಾನೆ. ನಾವು ಕಟ್ಟುವ ತೆರಿಗೆ ಹಣದಿಂದಲೇ ಇದೆಲ್ಲವೂ ನಡೆದು ಹೋಗುತ್ತಿದೆ. ಹಾಗಿದ್ದ ಮೇಲೆ ಪ್ರಶ್ನಿಸುವ ಹಕ್ಕು ನಾಗರಿಕನಿಗೆ ಇಲ್ಲವೆ? ಮನೆಯೊಳಗೆ ನಡೆಯುವ ಎಲ್ಲ ವಿದ್ಯಮಾನಗಳ ಬಗ್ಗೆ ಗಮನ ಹರಿಸುವ ನಾಗರಿಕರು ಮನೆಯ ಕಾಂಪೌಂಡ್ ಆಚೆಗೆ ಏನೇ ನಡೆದರೂ ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಸಿನಿಕತನ ಏತಕ್ಕೆ? ಅದರಿಂದಾಗುವ ಅನಾಹುತಗಳು ನಮ್ಮನ್ನೂ ಬಾಧಿಸಲಿವೆ ಎನ್ನುವ ಚಿಂತನೆಗಳು ಇರಬೇಕಲ್ಲವೆ? ಮನೆಯಲ್ಲಿ ಯಾವುದೇ ಕೆಲಸ ಮಾಡಿಸುವಾಗ ಪ್ರತಿ ರೂಪಾಯಿಗೂ ಲೆಕ್ಕ ಕೇಳುತ್ತೇವೆ. ಲೆಕ್ಕ ಇಡುತ್ತೇವೆ. ಸಾರ್ವಜನಿಕ ಕಾಮಗಾರಿಗಳಾದರೆ ಸರ್ಕಾರದ್ದು ಎನ್ನುವ ಧೋರಣೆ ಏಕೆ? ಸಾರ್ವಜನಿಕರ ಈ ಧೋರಣೆಯನ್ನೇ ಬಂಡವಾಳ ಮಾಡಿಕೊಳ್ಳುವ ಕಾಮಗಾರಿ ನಿರ್ವಹಣೆ ಹೊಣೆ ಹೊತ್ತವರು ಬೇಕಾಬಿಟ್ಟಿ ನಿರ್ವಹಣೆ ಮಾಡಿಕೊಂಡು ನರಳುತ್ತಿದ್ದಾರೆ.

    ತೆರಿಗೆ ಕಟ್ಟುವ ನಾಗರಿಕರಿಗೆ ಕಾಮಗಾರಿಗಳ ಮಾಹಿತಿಯ ಅರಿವು ನೀಡಬೇಕು. ಯಾವ ಕಾಮಗಾರಿ ಎಷ್ಟರ ವೇಳೆಗೆ ಮುಗಿಯುತ್ತದೆ? ಅದರ ಮೊತ್ತ ಇತ್ಯಾದಿ ವಿವರಗಳನ್ನೊಳಗೊಂಡ ಸಂಪೂರ್ಣ ನೀಲನಕ್ಷೆಯನ್ನು ಎಲ್ಲರಿಗೂ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಆದರೆ ಈ ಪಾರದರ್ಶಕತೆ ಕಾಣುತ್ತಲೇ ಇಲ್ಲ.

     ಈಗ ಮಳೆ ಸುರಿಯುತ್ತಿದೆ, ಕಾಮಗಾರಿಗಳ ಅದ್ವಾನ ಏನೆಂಬುದು ಅರ್ಥವಾಗುತ್ತಿದೆ. ರಸ್ತೆಗಳಲ್ಲಿ ಬಿದ್ದು ಹೋಗುತ್ತಿರುವವರು ಹೆಚ್ಚಿದ್ದಾರೆ. ತನ್ನ ಮನೆಯ ಮುಂಭಾಗವೇ ಕಾಮಗಾರಿಗಳಿಗೆ ಸಿಲುಕಿ ನರಳುತ್ತಿರುವ ಜನರಿದ್ದಾರೆ. ಇವೆಲ್ಲವನ್ನೂ ಸಹಿಸಿಕೊಂಡೇ ಇರಬೇಕೆ? ಇದ್ದರೆ ಎಷ್ಟು ದಿನ ಮೌನ ವಹಿಸಬೇಕು? ಇಂತಹ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿದರೆ ಹೊಣೆಯಾರು? ಯಾರದ್ದೋ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸಬೇಕೆ?

ಸಂಘಟನೆಗಳ ಮೌನ ?

    ಹಲವು ಹತ್ತು ವಿಷಯಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತವೆ. ನಾಗರಿಕ ಸಂಘಟನೆಗಳ ಜವಾಬ್ದಾರಿ ಇಂತಹ ಕಾಮಗಾರಿಗಳ ವಿಷಯದಲ್ಲಿ ಅತ್ಯಂತ ಹೆಚ್ಚಿನದಿರಬೇಕು. ಆದರೆ ಬಹಳಷ್ಟು ಸಂಘಟನೆಗಳು ತಮ್ಮ ತಮ್ಮ ಅನುಕೂಲಕ್ಕೆ ಸೀಮಿತ ಆಗಿರುವಂತಿದೆ. ಅನ್ಯಾಯ ನಡೆಯುತ್ತಿದ್ದರೂ ಆ ಬಗ್ಗೆ ಪ್ರತಿಭಟಿಸದೆ ಇದ್ದರೆ ಕಾಮಗಾರಿ ನಿರ್ವಹಣೆ ಮಾಡುವವರಿಗೆ ಯಾವ ಭಯವೂ ಇಲ್ಲದಂತಾಗುತ್ತದೆ.

    ವಿವಿಧ ಆಚರಣೆಗಳಿಗೆ ಜನರಿಂದ ವಂತಿಕೆ ಪಡೆಯುವ, ಅದ್ಧೂರಿ ಆಚರಣೆಗಳನ್ನು ಮಾಡುವ, ಕೆಲವೊಂದು ಸಂದರ್ಭಗಳಲ್ಲಿ ಕೂಗು ಹಾಕುವ ಸಂಘಟನೆಗಳು ಇಂತಹ ನಿರ್ಲಕ್ಷ್ಯದ ಯೋಜನೆಗಳ ವಿಷಯದಲ್ಲಿ ಬಾಯಿ ಬಿಡಬಾರದೇಕೆ? ನಾಗರಿಕ ಸಂಘಟನೆಗಳ ಹೊಣೆಗಾರಿಕೆಯೂ ಇರುತ್ತದೆಯಲ್ಲವೆ?

    ನಾಗರಿಕರ ತೆರಿಗೆಯಿಂದಲೇ ಸರ್ಕಾರಗಳು ನಡೆಯುತ್ತವೆ. ಕೆಲವೊಮ್ಮೆ ಸರ್ಕಾರಗಳು ಸಾಲ ಪಡೆಯುತ್ತವೆ. ಇದನ್ನು ನಿಭಾಯಿಸಲು ಮತ್ತೆ ಜನರ ತಲೆಯ ಮೇಲೆಯೇ ಹೆಚ್ಚುವರಿ ತೆರಿಗೆ ಹೊರೆಯನ್ನು ಹಾಕಲಾಗುತ್ತದೆ. ಹೀಗಿರುವಾಗ ಯಾವುದೇ ಸರ್ಕಾರವಿರಲಿ ಸರ್ವೀಸ್ ಪ್ರೋವೈಡರ್ ಎಂಬ ದೃಷ್ಟಿಕೋನ ಇರಬೇಕು. ಇಲ್ಲಿ ಭಾವನೆಗಳಿಗೆ ಅವಕಾಶ ಇರಬಾರದು. ಉದಾಹರಣೆಗೆ ಯಾವುದೇ ಒಂದು ಮೊಬೈಲ್ ಕಂಪನಿ ಸರಿಯಾದ ಸೇವೆ ಸಲ್ಲಿಸದಿದ್ದಾಗ ಅದನ್ನು ತಿರಸ್ಕರಿಸಿ ಮತ್ತೊಂದು ಕಂಪನಿಗೆ ವರ್ಗಾವಣೆಗೊಳ್ಳುವ ಹಾಗೆ ನಾವು ಖರೀದಿಸುವ ಎಲ್ಲ ವಸ್ತುಗಳಿಗೂ ಶೇ.5 ರಿಂದ ಶೇ.28ರವರೆಗೆ ಜಿ.ಎಸ್.ಟಿ. ತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆಯ ಜೊತೆ ಆದಾಯ ತೆರಿಗೆ ಸೇರಿ ಮತ್ತೆ ಹತ್ತು ಹಲವಾರು ತೆರಿಗೆಗಳು ಸುತ್ತುವರೆಯುತ್ತವೆ. ಮನೆ ಕಂದಾಯ, ನೀರಿನ ಬಿಲ್ ಇತ್ಯಾದಿ.

     ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಗಮನಿಸಿದರೆ ಇದೊಂದು ವಿಷವರ್ತುಲದ ರೀತಿಯಲ್ಲಿ ಬೆಳೆಯುತ್ತಿದೆ. ಇದರೊಳಗೆ ಇರುವವರೆಲ್ಲ ಪಾಲುದಾರರೆ ಆಗಿರುವಂತಿದೆ. ವಿಷವರ್ತುಲದ ಹೊರಗೆ ಇರುವವರು ಚಕಾರ ಎತ್ತುತ್ತಿಲ್ಲ. ಇದು ಭಾಗಿದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ