ಬೆಂಗಳೂರು
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಯಿಂದ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ಹಲವಾರು ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ವೈಜ್ಞಾನಿಕ ನೀತಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಈಗಾಗಲೇ ಭೂ ಹಂಚಿಕೆ ಮಾಡಿರುವ ಹಳೆಯ ಪ್ರಕರಣಗಳಿಗೆ ಅನ್ವಯವಾಗುವಂತ ಹಾಗೂ ಮುಂದಿನ ಹೊಸ ಹಂಚಿಕೆಗೂ ಅಗತ್ಯವಾಗಿರುವ ಪ್ರತ್ಯೇಕ ನೀತಿ ತರಲು ಪ್ರಕ್ರಿಯೆ ಪ್ರಾರಂಭಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯ ಚುರುಕುಗೊಳಿಸಬೇಕು. ಭೂ ಮಾಲೀಕರುಗಳಿಗೆ ಪರಿಹಾರ ನೀಡುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಹಲವಾರು ವರ್ಷಗಳ ಕಾಲ ಪರಿಹಾರ ಪಡೆಯಲು ಭೂ ಮಾಲೀಕರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಭೂ ಸ್ವಾಧೀನ ಪಡಿಸಿಕೊಳ್ಳುವುದು ಹಾಗೂ ಪರಿಹಾರ ನೀಡುವ ವ್ಯವಸ್ಥೆಯ ಮಾರ್ಗಸೂಚಿಗಳನ್ನು ರೂಪಿಸುವಂತೆ ಸೂಚನೆ ನೀಡಿದರು.
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ಭೂ ದರದ ಬಗ್ಗೆ ಹಲವಾರು ಗೊಂದಲಗಳಿವೆ. ಹಲವಾರು ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಘ ಸಂಸ್ಥೆಗಳು ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಇದುವರೆಗೆ ಭೂಮಿ ಹಂಚಿಕೆ ಮಾಡುವ ಸಮಯದಲ್ಲಿ ಒಂದು ದರ ಹಾಗೂ ಸೇಲ್ ಡೀಡ್ ನೀಡುವ ಸಮಯದಲ್ಲಿ ಇನ್ನೊಂದು ದರ ನಿಗದಿ ಮಾಡಲಾಗುತ್ತಿದೆ. ಹಲವಾರು ಸಂದರ್ಭಗಳಲ್ಲಿ ಇದು ಪ್ರಾಥಮಿಕ ಹಂತದ ದರಕ್ಕಿಂತಾ ಶೇಕಡಾ 50 ಕ್ಕೂ ಹೆಚ್ಚಾಗಿದೆ. ಈ ನಿಯಮಗಳಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತ ರಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಭೂ ಹಂಚಿಕೆ ಮಾಡಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ಹಾಗೂ ಹೊಸದಾಗಿ ಭೂ ಹಂಚಿಕೆ ಮಾಡಲು ಹೊಸ ನೀತಿ ಅಗತ್ಯವಿದೆ ಎಂದಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಉಪಯೋಗಿಸಿರುವ ಭೂಮಿಯ ಬಗ್ಗೆ ಸಮೀಕ್ಷೆ ನಡೆಸುವ ಅಗತ್ಯವಿದೆ. ರಾಜ್ಯದಲ್ಲಿರುವ ಒಟ್ಟು ಭೂಮಿ ಪ್ರಮಾಣ, ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ಇದುವರೆಗೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ವಿವರ, ಅದರಲ್ಲಿ ಕೈಗಾರಿಕೆಗಳಿಗೆ ಎಷ್ಟು ಹಂಚಿಕೆ ಮಾಡಲಾಗಿದೆ ಎನ್ನುವ ವಿವರ, ಹಂಚಿಕೆ ಮಾಡಿರುವ ಭೂಮಿಯಲ್ಲಿ ಕೈಗಾರಿಕೆಗಳು ಪ್ರಾರಂಭವಾಗಿರುವ ಹಾಗೂ ಆಗದೇ ಇರುವ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದರು.
ಕೈಗಾರಿಕಾ ಪ್ರದೇಶಗಳ ಬಗ್ಗೆ ಸರಿಯಾದ ಮಾಹಿತಿ: ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ರಾಜ್ಯದ ಹಲವೆಡೆ ಭೂಮಿಯ ಲಭ್ಯತೆ ಇದೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಇದರ ಅಭಿವೃದ್ದಿಯೂ ಅಗಿದೆ. ಆದರೆ, ಇದರ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಸರಿಯಾಗಿ ಇದನ್ನು ತೋರಿಸುವ ಕಾರ್ಯವನ್ನು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳ ಬಗ್ಗೆ ಛಾಯಾಚಿತ್ರಗಳು, ವಿಡಿಯೋಗಳು, ಮುಖ್ಯ ರಸ್ತೆಯಿಂದ ಅಲ್ಲಿಗೆ ಇರುವ ಸಂಪರ್ಕ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನಮೂದಿಸಿ ಎಂದು ಸೂಚನೆ ನೀಡಿದರು.
ಕೆಐಎಡಿಬಿ ಹೌಸಿಂಗ್ ಪ್ರಾಜೆಕ್ಟ್ಗಳು: ಹಲವಾರು ಸಂಘ ಸಂಸ್ಥೆಗಳು ಈ ಪ್ರದೇಶದಲ್ಲಿ ವಸತಿಗಾಗಿ ಭೂಮಿ ನೀಡುವಂತೆ ಅರ್ಜಿಯನ್ನು ಸಲ್ಲಿಸಿವೆ. ಆದರೆ, ಇದುವರೆಗೂ ಆ ಸಂಸ್ಥೆಗಳಿಗೆ ಸೈಟ್ಗಳ ಹಂಚಿಕೆ ಆಗಿರುವುದಿಲ್ಲ. ಈ ಬಗ್ಗೆ ಈಗಾಗಲೇ ಒಂದು ಸಮಿತಿಯ ರಚನೆಯಾಗಿದ್ದು, ಹಂಚಿಕೆಯ ಕ್ರಮಗಳನ್ನು ಚುರುಕುಗೊಳಿಸಿ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ