ತುಮಕೂರು

ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ. ಪ್ರಸ್ತುತ ದಿನಮಾನಗಳಲ್ಲಿ ಹೆತ್ತ ಮಕ್ಕಳಿಗೆ ಅವರನ್ನು ಹೆತ್ತವರೇ ಭಾರವಾಗಲಾರಂಭಿಸಿದ್ದಾರೆ. ಅವರನ್ನು ಸಲಹಲಾಗದೆ ವೃದ್ಧಾಶ್ರಮಗಳಿಗೆ ಕಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತ್ಯತೀತವಾಗಿ ವಯೋವೃದ್ಧರನ್ನು ಸಲಹುವ ನಿಟ್ಟಿನಲ್ಲಿ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಛಾರಿಟಬಲ್ ಟ್ರಸ್ಟ್ನ ವತಿಯಿಂದ ನೂತನ ಹೈಟೆಕ್ ವೃದ್ಧಾಶ್ರಮವನ್ನು ನಿರ್ಮಾಣ ಮಾಡಲಾಗಿದ್ದು, ನ.3ರ ಭಾನುವಾರದಂದು ಉದ್ಘಾಟನೆಯಾಗಲಿದೆ.
ಕೌಟುಂಬಿಕ ಜೀವನ ನಡೆಸಿ ಆಶ್ರಮ ಸೇರುವ ವಯೋವೃದ್ಧರು ಯಾವುದೇ ಚಿಂತೆಗೊಳಗಾಗದೆ ನೆಮ್ಮದಿ ಬದುಕು ಸಾಗಿಸಬೇಕೆಂಬುದು ಆಶ್ರಮ ನಿರ್ಮಾಣದ ಪ್ರಮುಖ ಉದ್ದೇಶವಾಗಿದೆ ಎನ್ನುತ್ತಾರೆ ಟ್ರಸ್ಟ್ನ ಅಧ್ಯಕ್ಷರಾದ ಎನ್.ಆರ್.ಜಗಧೀಶ್ ಅವರು.
ಬದುಕಿನ ಅನುಭವ ಕಂಡುಕೊAಡ ಹಿರಿಯ ಜೀವಗಳು ಕೊನೆ ದಿನಗಳಲ್ಲಿ ನೋವು ಅನುಭವಿಸಬಾರದು. ಆದರೆ ಮಕ್ಕಳ ಸ್ವಾರ್ಥದಿಂದ ಅವರಿಂದು ಕೌಟುಂಬಿಕ ಜೀವನದಿಂದ ದೂರಾಗುತ್ತಿದ್ದಾರೆ. ಇವರಿಗೆ ಆಶ್ರಯ ನೀಡಬೇಕು ಎಂಬ ಉದ್ದೇಶದಿಂದ ವೃದ್ಧಾಶ್ರಮ ಆರಂಭಿಸಲಾಗುತ್ತಿದೆ. ಆಶ್ರಮಕ್ಕೆ ಸೇರಿಕೊಳ್ಳುವ ವಯಸ್ಸಾದವರಿಗೆ, ಅನಾರೋಗ್ಯದ ವೇಳೆಯಲ್ಲಿ ಚಿಕಿತ್ಸೆ ನೀಡಲು, ಅಂತವರ ಅನುಕೂಲಕ್ಕಾಗಿ ವಾರಕ್ಕೊಮ್ಮೆ ವೈದ್ಯರನ್ನು ಕರೆಯಿಸಲಾಗುವುದು. ಅಲ್ಲದೆ ಪ್ರತಿ ನಿತ್ಯ ಒಬ್ಬ ನರ್ಸ್ ಇಲ್ಲಿಯೇ ಇರುತ್ತಾರೆ.
ವೃದ್ಧಾಶ್ರಮಗಳು ಹಿರಿಯ ನಾಗರಿಕರು ಒಟ್ಟಿಗೆ ವಾಸಿಸಲು ಮಾಡಿದಂತಹ ಹೈಟೆಕ್ ಮಾದರಿಯ ಆಶ್ರಮ ಇದಾಗಿದ್ದು, ಇಲ್ಲಿ ವಯಸ್ಸಾದವರು, ಜೀವಿತಾವಧಿಯನ್ನು ಸಮೀಪಿಸುತ್ತಾ ಇರುವವರು ಇಲ್ಲಿಗೆ ಸೇರಿಕೊಳ್ಳಬಹುದಾಗಿದೆ. ಜೊತೆಗೆ ಮನೆಯಲ್ಲಿ ಪೋಷಣೆ ಮಾಡಲು ಯಾರು ಇಲ್ಲ ಎಂಬುವವರು ಇಲ್ಲಿಗೆ ಸೇರಿಕೊಳ್ಳಬಹುದಾಗಿದೆ.ಅಲ್ಲದೆ ಉನ್ನತ ದರ್ಜೆಯ ನೌಕರಿ ಮಾಡುವವರ ಪೋಷಕರನ್ನು ಮನೆಯಲ್ಲಿ ನೋಡಿಕೊಳ್ಳಲು ಯಾರು ಇಲ್ಲ ಎಂದಾಗ ಅವರ ಮೇಲೆ ಕಾಳಜಿ ತೋರಿಸಿ ಸಮಯ ಸಮಯಕ್ಕೆ ಊಟ ಉಪಚಾರ ಮಾಡುತ್ತಾ, ಅವರ ಆರೋಗ್ಯವನ್ನು ಕಾಪಾಡುವಂತಹ ಸಂಸ್ಥೆಗಳಿಗಾಗಿ ಹುಡುಕಾಟ ನಡೆಸುವವರಿಗೆ ಇದೊಂದು ಉತ್ತಮವಾದ ಆಶ್ರಮವಾಗಿದೆ.
ಸರಿಸುಮಾರು 10 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾದ ಈ ಆಶ್ರಮವು ಗುಡ್ಡದ ಕೆಳಭಾಗದಲ್ಲಿ ಸುತ್ತಮುತ್ತಲೂ ಹಚ್ಚ ಹಸಿರಿನ ನಿಸರ್ಗ ಮಾತೆಯ ಮಡಿಲಿನಲ್ಲಿದ್ದು, ಎತ್ತ ನೋಡಿದರೂ ಸೌಂದರ್ಯವೇ ಕಂಡುಬರುತ್ತದೆ. ಈ ಆಶ್ರಮವನ್ನು ನಾಲ್ಕೈದು ಮಂದಿ ಸಮಾನ ಮನಸ್ಕರು ಸೇರಿಕೊಂಡು ನಿರ್ಮಾಣ ಮಾಡಬೇಕು ಎಂದು ಆಲೋಚನೆ ಮಾಡಿದ್ದು, ಕಳೆದ 10 ವರ್ಷದ ಹಿಂದೆಯೇ ನಿರ್ಮಾಣ ಮಾಡಬೇಕಿತ್ತು. ಆದರೆ ಕೆಲ ಕಾರಣಾಂತರಗಳಿAದ ನಿರ್ಮಾಣ ಮಾಡಲಾಗಿಲ್ಲ. ಆ ಕನಸು ಇದೀನ ನನಸಾಗಿದೆ.
ಈ ಆಶ್ರಮ ನಿರ್ಮಾಣಕ್ಕೆ ಹಲವಾರು ಜನರ ಸಹಕಾರ ಇದ್ದು, ಬರೊಬ್ಬರಿ 3.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ತುಮಕೂರು ನಗರದಲ್ಲಾಗಲಿ, ಅಥವಾ ಹತ್ತಿರದಲ್ಲಿ ಯಾವುದೇ ಆಶ್ರಮಗಳಿಲ್ಲದಿರುವುದರಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಮೈದಾಳ ರಸ್ತೆಯಲ್ಲಿರುವ ಬಿಎಂ ಪಾಳ್ಯದಲ್ಲಿ 80 ಜನ ವಾಸ ಮಾಡುವಂತಹ ಬೃಹತ್ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ.
ಈಗಾಗಲೇ ನಿರ್ಮಾಣ ಮಾಡಲಾದ ಕಟ್ಟಡದಲ್ಲಿ 24 ಕೊಠಡಿಗಳು, ತೆರೆದ ಅಡುಗೆ ಕೊಠಡಿ, ಉತ್ತಮವಾದ ಊಟದ ಕೊಠಡಿ, ಪ್ರಾರ್ಥನ ಮಂದಿರ, ಗ್ರಂಥಾಲು, ಟಿವಿ ಸೌಲಭ್ಯಗಳು ಇವೆ. ದಿನಂಪ್ರತಿ ಬಿಸಿ ನೀರು ಬರುತ್ತವೆ. 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯವೂ ಇರುತ್ತದೆ. ಅಲ್ಲದೆ ವಿಶೇಷವಾಗಿ ಹಿರಿಯರ ಅಭಿರುಚಿಗೆ ತಕ್ಕಂತೆ ಒಬ್ಬರೇ ಇರುವಂತಹ ಕೊಠಡಿ, ಇಬ್ಬರು ಸೇರಿ ಇರುವಂತಹ ಕೊಠಡಿ, ನಾಲ್ಕು ಜನ ಒಟ್ಟಿಗೆ ಇರುವಂತಹ ಕೊಠಡಿ ಹಾಗೂ ಹತ್ತು ಜನ ಒಟ್ಟಿಗೆ ಇರುವಂತಹ ಡಾರ್ಮೆಟರಿ ಕೊಠಡಿಗಳು ಇರಲಿವೆ.
ಆಶ್ರಮಕ್ಕೆ ಸೇರುವಂತವರಿಗೆ ಅತೀ ಕಡಿಮೆ ಹಣವನ್ನು ಪಡೆಯುತ್ತಿದ್ದು, 8, 12, 16, 20ಸಾವಿರ ರೂಗಳನ್ನು ಪಡೆಯುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ಲಾಭಾಂಶವನ್ನು ಪಡೆಯದೇ ಅವರು ನೀಡಿದ ಹಣಕ್ಕೆ ಹತ್ತರಷ್ಟು ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಆಶ್ರಮದ ನಿರ್ವಹಣೆಗೆ ಸುಮಾರು 25 ಮಂದಿಯನ್ನು ನೇಮಿಸಿದ್ದು, ವ್ಯವಸ್ಥಾಪಕರು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇರಲಿದ್ದಾರೆ.
ಮನೆಯಲ್ಲಿರುವ ವಾತಾವರಣವನ್ನೇ ಇಲ್ಲಿ ನಿರ್ಮಾಣ ಮಾಡಲಾಗಿದ್ದು, ಆಶ್ರಮದ ಮುಂಭಾಗದಲ್ಲಿ ವಾಹನಗಳ ನಿಲುಗಡೆ, ಉದ್ಯಾನವನದ ರೀತಿಯಲ್ಲಿ ನೆಲಹಾಸು ಹಾಸಲಾಗಿದೆ. ಅಲ್ಲದೆ ವಾಕಿಂಗ್ ಪಾಥ್ ಮಾಡಲಾಗಿದೆ. ಕಟ್ಟಡ ಮೇಲೆ ಟರ‍್ರಸ್ ಗಾರ್ಡನ್ ಮಾಡಲಾಗಿದ್ದು, ಒಟ್ಟಾರೆ ಈ ಆಶ್ರಮ ನಿರ್ಮಾಣ ಮಾಡುವಲ್ಲಿ ಎನ್.ಆರ್.ಜಗಧೀಶ್, ಆರ್.ಜೆ.ಅನಂತರಾಜು, ದಯಾನಂದ ಸಪ್ತಗಿರಿ, ಟಿ.ಜಿ.ವಿಶ್ವನಾಥಶೆಟ್ಟಿಯವರ ಪಾತ್ರ ಪ್ರಮುಖವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
