ಭಾಯಾಗಡ್‍ನಲ್ಲಿ ಇಂದಿನಿಂದ ಸೇವಾಲಾಲ್ ಜಯಂತಿ

ದಾವಣಗೆರೆ:

     ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರ ಅಬಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಬೆಂಗಳೂರು ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ (ಫೆ.13ರಿಂದ) ಫೆ.15ರ ವರೆಗೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್)ದಲ್ಲಿ ಶ್ರೀ ಸಂತ ಸೇವಾಲಾಲ್‍ರವರ 281ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷ ರುದ್ರಪ್ಪ ಎಂ ಲಮಾಣಿ, ಇಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕುಡುಚಿ ಶಾಸಕರು ಆದ ಪಿ.ರಾಜೀವ್ ಮಾತಾ ಮರಿಯಮ್ಮ ದೇವಿಯ ಕಾಟಿ ಆರೋಹಣ ನೆರವೇರಿಸಲಿದ್ದಾರೆ. ನಿಗಮದ ವ್ಯವಸ್ಥಾಪಕ ಶಿವಶಂಕರನಾಯ್ಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ನಾಳೆ ಮುಖ್ಯಮಂತ್ರಿ ಭಾಗಿ:

     ನಾಳೆ (ಫೆ.14ರಂದು) ಬೆಳಿಗ್ಗೆ ಉಭಯ ದೇಗುಲದಲ್ಲಿ ಮಾಲಾಧಾರಿಗಳ ದರ್ಶನ, ಗಂಗಾಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಉತ್ಸವಮೂರ್ತಿಗಳ ಪಲ್ಲಕಿ ಮೆರವಣಿಗೆ, ಇರು ಮುಡಿಗಳ ಸಮರ್ಪಣಕಾರ್ಯ ಮಾಲಾ ವಿಸರ್ಜನೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಸೇವಾಲಾಲ್‍ರವರ ಜಯಂತಿ ಉದ್ಘಾಟಿಸಲಿದ್ದಾರೆ. ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರು.

    ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ.ಸಿ.ಎಸ್.ಅಶ್ವತ್ ನಾರಾಯಣ, ಲಕ್ಷ್ಮಣ್ ಎಸ್. ಸವದಿ, ಜಿಲ್ಲಾ ಮಂತ್ರಿ ಕೆ.ಎಸ್.ಈಶ್ವರಪ್ಪ, ಪಶು ಸಂಗೋಪನೆ ಹಾಗೂ ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸಂಸದ ಜಿ.ಎಂ.ಸಿದ್ದೇಶ್ವರ, ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಶಾಸಕರುಗಳಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

2 ಲಕ್ಷ ಜನ ಸೇರುವ ನಿರೀಕ್ಷೆ:

   ಸಂಜೆ 6.30ಕ್ಕೆ ಬಂಜಾರ ಸಮುದಾಯದ ಮುಖಂಡರು, ಸಾಧು ಸಂತರು ಮತ್ತು ಜನಪ್ರತಿನಿಧಿಗಳ ಚಿಂತನಾ ಸಭೆ ನೆರವೇರಲಿದೆ. ಬಳಿಕ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.15ರಂದು ಬೆಳಿಗ್ಗೆ 9 ಗಂಟೆಗೆ ಮಹಾಭೋಗ್ ಹಾಗೂ ಪ್ರಸಾದ ವಿನಿಯೋಗ ಸಮಾರಂಭದೊಂದಿಗೆ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಈ ಕಾರ್ಯಕ್ರಮಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಓರಿಸ್ಸಾ, ರಾಜಸ್ತಾನ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 2 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ:

   ಭಾಯಾಗಡ್‍ನಲ್ಲಿ ಕಳೆದ ಐದಾರು ವರ್ಷಗಳಿಂದ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಇದು ಕೇವಲ ಧಾರ್ಮಿಕ ಕೇಂದ್ರವಾಗಿ ಬೆಳೆಯದೆ ಶೈಕ್ಷಣಿಕ, ಕೌಶಲ್ಯ ತರಬೇತಿ ಕೇಂದ್ರವಾಗಿಯು ಮಾನ್ಯತೆ ಪಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮದ್ಯವರ್ಜನ ಶಿಬಿರ ಸಹ ನಡೆಸಲಾಗುತ್ತಿದೆ ಎಂದರು.

180 ಕೋಟಿ ರೂ. ಪ್ರಾಸ್ತಾವನೆ:

    ಇಲ್ಲಿ ನಮ್ಮ ತಾಂಡಗಳ ಪರಂಪರೆಯನ್ನು ಸಾರುವ ನಾಯಕ್, ಡಾವೋ, ಕಾರಭಾರಿ ಅವರುಗಳು ನಸಾಬ್(ಪಂಚಾಯ್ತಿ) ನಡೆಸುತ್ತಿರುವ ಪ್ರಾತ್ಯಕ್ಷಿಕೆ ನಿರ್ಮಿಸಲಾಗಿದೆ. ಅಲ್ಲದೆ, ಸಪ್ತ ಮಾತೃಕೆಯರ ಕೊಳ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಈ ವರೆಗೂ ಒಟ್ಟು 35 ಕೋಟಿ ರೂ. ವೆಚ್ಚದಲ್ಲಿ ಸೂರಗೊಂಡನಕೊಪ್ಪವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ 180 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮಾತನಾಡಿ, ಸೂರಗೊಂಡನಕೊಪ್ಪವು ಬಂಜಾರರ ಕುಲ ಗುರು ಶ್ರೀ ಸಂತ ಸೇವಾಲಾಲ್ ಅವರಿಗೆ ಜ್ಞಾನೋದಯವಾದ ತಪೋ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಗಮನ ಸೆಳೆದಿದೆ ಎಂದರು.

ಸಕಲ ಸಿದ್ಧತೆ:

     ಸೇವಾಲಾಲ್ ಜಯಂತ್ಯೋತ್ಸವದಲ್ಲಿ ಹಿಂದೆ ನಡೆದಿರುವ ಅವಘಡಗಳು ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಾರಿ ವಿಶೇಷ ಬಂದೋ ಬಸ್ತ್ ಕಲ್ಪಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಜಿಲ್ಲಾಡಳಿತ ಉಚಿತ ವಸತಿ, ಊಟ, ಕುಡಿಯುವ ನೀರು ಸೇರಿದಂತೆ ಇತರೆ ಸಿದ್ಧತೆಗಳನ್ನು ಕೈಗೊಂಡಿದೆ. ಸೇವಾಲಾಲ್ ಮಾಲಾಧಾರಿಗಳು ಹಿಂದೆ ಪಾದಯಾತ್ರೆ ಬರುವ ಸಂದರ್ಭದಲ್ಲಿ ಅಪಘಾತ ಆಗಿರುವ ಉದಾಹರಣೆಗಳಿರುವುದರಿಂದ ಮಾಲಾಧಾರಿಗಳು ಜಾಗೃತೆ ವಹಿಸಿ ಪಾದಯಾತ್ರೆಯ ಮೂಲಕ ಶೀಕ್ಷೇತ್ರಕ್ಕೆ ಬರಬೇಕೆಂದು ಮನವಿ ಮಾಡಿದರು.

     ಸುದ್ದಿಗೋಷ್ಠಿಯಲ್ಲಿ ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಮಾರುತಿ ನಾಯ್ಕ, ಸವಿತಾ ಶಿವಕುಮಾರ್, ಗಿರೀಶ್ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ರಾಘವೇಂದ್ರ ನಾಯ್ಕ, ಡಿ.ಥಾವರ್ಯ ನಾಯ್ಕ, ಪಾಲಿಕೆ ಸದಸ್ಯರಾದ ಮಂಜುನಾಥ್, ಶಿವಪ್ರಕಾಶ್, ಸಮಾಜ ಮುಖಂಡರಾದ ಎಂ.ಪಿ.ನಾಯ್ಕ, ನಂಜಾ ನಾಯ್ಕ, ಲಿಂಬ್ಯಾ ನಾಯ್ಕ ಶಿವಪುರ, ಗೋಪಿ ನಾಯ್ಕ ಮತ್ತಿತರರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap