ಹುಳಿಯಾರು
ಹುಳಿಯಾರು ಪಪಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಫಲವಾಗಿ ಕಳೆದು 2 ಎರಡು ತಿಂಗಳಿಂದ ಪಟ್ಟಣದಲ್ಲಿ ನೀರು ಸರಬರಾಜಾಗದೆ ಇಲ್ಲಿನ ನಿವಾಸಿಗಳು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಹುಳಿಯಾರು ಪಟ್ಟಣಕ್ಕೆ ಕಳೆದ ಹತ್ತನ್ನೆರಡು ವರ್ಷಗಳಿಂದ ಸಮೀಪದ ಬೋರನಕಣಿವೆ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು.
ಸ್ವಂತ ಕೊಳವೆಬಾವಿ ಇಲ್ಲದ ನಿವಾಸಿಗಳು ಈ ನೀರನ್ನು ನೆಚ್ಚಿ ಬದುಕು ಕಟ್ಟಿಕೊಂಡಿದ್ದರು. ಜಲಾಶಯದ ನೀರನ್ನು ಹದಿನೈದು ದಿನಕ್ಕೊಮ್ಮೆ ಸರಬರಾಜು ಮಾಡಿದರೂ ಪಾತ್ರೆ, ಡ್ರಮ್, ಲೋಟ ಯಾವುದನ್ನೂ ಬಿಡದೆ ನೀರನ್ನು ಹಿಡಿದಿಟ್ಟುಕೊಂಡು ಸಂಸಾರ ನಡೆಸುತ್ತಿದ್ದರು.ಆದರೆ ಜಲಾಶಯದಿಂದ ನೀರು ಸರಬರಾಜು ಮಾಡುವ ಪೈಪ್ ಎಸ್‍ಎಲ್‍ಆರ್ ಬಂಕ್ ಬಳಿ ಹೈವೆ ಕಾಮಗಾರಿ ಮಾಡುವಾಗ ಹೊಡೆದಿದೆ. ಪೈಪ್ ಹೊಡೆದು 2 ತಿಂಗಳಾದರೂ ಪಪಂ ದುರಸ್ಥಿ ಮಾಡಿಸದೆ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರ ಮೇಲಾಕಿ ಕೈ ಕಟ್ಟಿ ಕುಳಿತಿದ್ದಾರೆ.
ಗುತ್ತಿಗೆದಾರರನ್ನು ಪ್ರಶ್ನಿಸಿದರೆ ನಮ್ಮ ಗುತ್ತಿಗೆ ಅವಧಿ ಮುಗಿದಿದ್ದು ಪಪಂ ದುರಸ್ಥಿ ಮಾಡಿಸಬೇಕಿದೆ ಎಂದೇಳುತ್ತಾರೆ. ಹೀಗೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಇವರಿಬ್ಬರ ಜಗಳದಲ್ಲಿ ನಿವಾಸಿಗಳು 2 ತಿಂಗಳಿಂದ ನೀರಿಲ್ಲದೆ ಪರಿತಪಿಸುತ್ತಿದ್ದಾರೆ.ಆಯುಧ ಪೂಜೆ ಹಬ್ಬಕ್ಕಾದರೂ ನೀರು ಬಿಡಿ ಎಂದು ಇಲ್ಲಿನ ನಿವಾಸಿಗಳು ಕೇಳಿದರಾದರೂ ಪಪಂ ನೀರು ಬಿಡಲಿಲ್ಲ. ಹೋಗಲಿ ದೀಪಾವಳಿ ಹಬ್ಬಕ್ಕಾದರೂ ನೀರು ಬಿಡಿ ಎಂದು ಗೋಗರೆದರೂ ಪಪಂ ಅಧಿಕಾರಿಗಳು ಕೇಳಿಸಿಕೊಳ್ಳಲಿಲ್ಲ. ಪರಿಣಾಮ ಬಿಂದಿಗೆಗೆ 2 ರೂ.ನಂತೆ ನೀರನ್ನು ಕೊಂಡು ಜೀನವ ನಡೆÀಸುವ ಅನಿವಾರ್ಯ ಕರ್ಮ ಇಲ್ಲಿನ ನಿವಾಸಿಗಳಿಗೆ ಬಂದೊದಗಿದೆ. ಮಹಿಳೆಯರಂತೂ ದಿನಬೆಳಗಾದರೆ ಕೈಪಂಪು, ಸಿಸ್ಟನ್ ಬಳಿ ಕ್ಯೂ ನಿಂತು ಜಗಳವಾಡಿ ನೀರು ಹಿಡಿಯುತ್ತಿದ್ದಾರೆ.
ಪಟ್ಟಣ ಪಂಚಾಯ್ತಿಯಿಂದ ನೀರಿನ ಕಂದಾಯವಾಗಿ ತಿಂಗಳಿಗೆ ಮನೆಯೊಂದಕ್ಕೆ 25 ರೂ. ಸಂಗ್ರಹ ಮಾಡುತ್ತಿದ್ದಾರೆ. ಆದರೆ ಸಮರ್ಪಕವಾಗಿ ನೀರು ಸರಬರಾಜು ಮಾಡಿರೆಂದರೆ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಾರೆ. ಟ್ರಾಂಕರ್ ಮೂಲಕವಾದರೂ ನೀರು ಕೊಟ್ಟು ಪುಣ್ಯ ಕಟ್ಟುಕೊಳ್ಳಿ ಎಂದರೂ ಜಾಣ ಕಿವುಡಾಗಿದ್ದಾರೆ. ಈ ಹಿಂದೆಯಿದ್ದ ಆಡಳಿತ ಮಂಡಳಿ ವಜವಾದ ಇನ್ನೆಲೆಯಲ್ಲಿ ಪಪಂ ಮುಖ್ಯಾಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಾಗಿದ್ದಾರೆ.
ಮೂಲಭೂತ ಸೌಲಭ್ಯಗಳಲ್ಲಿ ಅತಿ ಅವಶ್ಯಕವಾದ ಕುಡಿಯುವ ನೀರನ್ನೂ ಸಹ ಕೊಡಲು ವಿಫಲವಾಗಿರುವ ಪಪಂ ಅಧಿಕಾರಿಗಳಿಂದ ಪಟ್ಟಣ ಅಭಿವೃದ್ಧಿ ನಿರೀಕ್ಷಿಸಬಹುದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಹೊಡೆದಿರುವ ಪೈಪ್ ದುರಸ್ಥಿ ಮಾಡಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ