ಕೊರಟಗೆರೆ
ಬರಗಾಲದ ಬವಣೆಗೆ ಸಿಲುಕಿ ಕಳೆದ 20 ವರ್ಷಗಳಿಂದ ನಲುಗಿರುವ ಕೊರಟಗೆರೆ ಕ್ಷೇತ್ರವು ಸತತ ಮುಂಗಾರು ಮಳೆ ಇಲ್ಲದೆ ರೈತರು ಕಂಗಾಲಾಗಿ ಜನ ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ಜಲಕ್ಷಾಮ ತಲೆದೋರುವ ಭೀತಿ ಎದುರಾಗಿದೆ.
ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದ ರೈತರು ಖುಷ್ಕಿ ಬೆಳೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಖುಷ್ಕಿ ಬೆಳೆ ಶೇ.90 ರಷ್ಟು ನಾಶವಾಗಿ ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕುಡಿಯುವ ನೀರು ಸರಬರಾಜಿಗೆ ಸರಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದರೂ, ಗ್ರಾಪಂ ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದ ಅಧಿಕಾರಿಗಳೆ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಿದ್ದಾರೆ.
ರೈತರಿಗೆ ಆರ್ಥಿಕವಾಗಿ ಲಾಭ ತಂದು ಕೊಡುವ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಅಡಕೆ ಮತ್ತು ಬಾಳೆ ಬೆಳೆ ಕೊರಟಗೆರೆ ಕ್ಷೇತ್ರದಲ್ಲಿ ಶೇ.75ರಷ್ಟು ನಾಶವಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸದೆ ದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸಿ, ತೋಟಗಾರಿಕೆ ಬೆಳೆ ನಷ್ಟವೆ ಇಲ್ಲ ಎಂಬುದಾಗಿ ಸುಳ್ಳು ಅಂಕಿ ಅಂಶವನ್ನು ಸರಕಾರಕ್ಕೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಬರಪೀಡಿತ ಕೊರಟಗೆರೆ ಕ್ಷೇತ್ರದಲ್ಲಿ 24 ಸಾವಿರ ರೈತರ 19,637 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ರಾಗಿ, ಜೋಳ, ಶೇಂಗಾ ಬೆಳೆ ಶೇ.90 ರಷ್ಟು ನಾಶವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಬರ ಅಧ್ಯಯನಕ್ಕೆ ಬಂದ ವೇಳೆ ಕೃಷಿ ಬೆಳೆಗಳಿಗೆ 13 ಕೋಟಿ 47 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ರೈತರ ಖಾತೆಗಳಿಗೆ ಇಲ್ಲಿಯವರೆಗೆ ಒಂದು ನಯಾ ಪೈಸೆಯು ಸಹ ಜಮವಾಗದೆ ರೈತರು ಕಂಗಾಲಾಗಿದ್ದಾರೆ.
ಕೊರಟಗೆರೆ ತಾಲ್ಲೂಕಿನ 4 ಹೋಬಳಿ ವ್ಯಾಪ್ತಿಯಲ್ಲಿ 236 ಜನ ವಸತಿ ಗ್ರಾಮ ಮತ್ತು 15 ವಸತಿರಹಿತ ಗ್ರಾಮಗಳಿದ್ದು 652 ಚದುರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಭೌಗೋಳಿಕ ವಿಸ್ತೀರ್ಣ-61761ಹೆಕ್ಟೇರ್, ಅರಣ್ಯ ಪ್ರದೇಶ-3486ಹೆಕ್ಟೇರ್. ಒಟ್ಟು ಸಾಗುವಳಿ ಭೂಮಿ 34,723 ಹೆಕ್ಟೇರ್, ಖುಷ್ಕಿ ಪ್ರದೇಶ-26,923 ಹೆಕ್ಟೇರ್, ನೀರಾವರಿ-7800 ಹೆಕ್ಟೇರ್ ವಿಸ್ತಿರ್ಣದ ಜೊತೆ 117 ಕೆರೆಗಳನ್ನು ಹೊಂದಿದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ರಾಜಕೀಯ ವೈಷಮ್ಯದಿಂದ ರಾಜ್ಯದ ರೈತರ ಬೆಳೆ ಪರಿಹಾರ ಹಣ ಬಿಡುಗಡೆಗೆ ಹಿನ್ನಡೆಯಾಗಿದೆ. ಕೇಂದ್ರದ ಮೇಲೆ ರಾಜ್ಯ- ರಾಜ್ಯದ ಮೇಲೆ ಕೇಂದ್ರ ಆರೋಪ ಮತ್ತು ಪ್ರತ್ಯಾರೋಪದಲ್ಲಿ ನಿರತವಾಗಿದ್ದು, ಬೆಳೆ ಪರಿಹಾರದ ಹಣದ ಚಕಾರವನ್ನು ಎಲ್ಲರೂ ಮರೆತು ಲೋಕಸಭಾ ಚುನಾವಣೆಗೆ ಸಜ್ಜಾಗಿ ಖಾಸಗಿ ಕಾರ್ಯಕ್ರಮದ ಒತ್ತಡದಲ್ಲಿ ರಾಜಕೀಯ ಪ್ರಮುಖರು ಭಾಗಿಯಾಗಿ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಕೊರಟಗೆರೆ ತಾಲ್ಲೂಕಿನ 24 ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಕಳೆದ 40 ದಿನಗಳಲ್ಲಿ 113 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 2ಕೋಟಿ 5ಲಕ್ಷ ವೆಚ್ಚದಲ್ಲಿ 113 ಬೋರ್‍ಗಳನ್ನು ಕೊರೆಸಲಾಗಿದೆ. ಸುಮಾರು 40ಕ್ಕೂ ಹೆಚ್ಚು ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಬೋರ್‍ವೆಲ್ ಕೊರೆಸುವ ವೇಳೆ ನೀರು ಸಿಗದಿರುವ ಗ್ರಾಮಗಳಿಗೆ ಗ್ರಾಪಂಯಿಂದ ಟ್ಯಾಂಕರ್ ಮೂಲಕ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ.
ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದಲ್ಲಿ ಮುಂಗಾರು ಮಳೆ ಕುಂಠಿತವಾಗಿ ಪ್ರತಿವರ್ಷ ರೈತರು ಬಿತ್ತನೆ ಮಾಡಿದ ಬೆಳೆಗಳು ನಾಶವಾಗಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಕುಡಿಯುವ ನೀರು ಮತ್ತು ಮೇವಿನ ಕೊರತೆ ಇರುವ ಹಿನ್ನಲೆ ರೈತರ ಜಾನುವಾರುಗಳಿಗೆ ಹೋಬಳಿಗೆ ಒಂದರಂತೆ ತಕ್ಷಣ ಗೋಶಾಲೆ ತೆರೆದು ನೀರು ಮತ್ತು ಮೇವು ಒದಗಿಸಬೇಕಾಗಿದೆ.