ಶಿರಾ
ಕಡು ಬೇಸಿಗೆಯ ದಿನಗಳು ಆರಂಭವಾದಂತೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸತೊಡಗಿದೆ.ಶಿರಾ ತಾಲ್ಲೂಕಿನ ಹಂದಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರೆಕ್ಯಾತನಹಳ್ಳಿ ಗ್ರಾಮದಲ್ಲಿ ದಲಿತ ಕಾಲನಿ ಸೇರಿದಂತೆ, ರೈತ ಮತ್ತು ಕಾರ್ಮಿಕರ 120 ಕುಟುಂಬಗಳಿದ್ದು, 800 ಜನಸಂಖ್ಯೆ ಹೊಂದಿರುವ ಗ್ರಾಮ. ಸದರಿ ಗ್ರಾಮದಲ್ಲಿ ಹನಿ ಹನಿ ಕುಡಿಯುವ ನಿರಿಗೂ ಹಪಹಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿ ಬತ್ತಿದ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಹ ಸ್ಥಿತಿ ಇದ್ದು, ನೀರಿಲ್ಲದೆ ಶುದ್ದಕುಡಿಯುವ ನೀರಿನ ಘಟಕ ಕೂಡ ಸ್ಥಗಿತವಾಗಿದೆ. ಕಳೆದ 2 ತಿಂಗಳಿಂದ ಇದೇ ಪರಿಸ್ಥಿತಿ ಇದ್ದು ಗ್ರಾಮ ಪಂಚಾಯತಿ ಇತ್ತ ಗಮನ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದಂತೆಯೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯನ್ನು ತನ್ನ ಜಮೀನಿನ ಕೊಳವೆ ಬಾವಿಯಿಂದ ನೀರು ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ತಾತ್ಕಾಲಿಕವಾಗಿ ಕೊಳವೆಬಾವಿಯಿಂದ ಖಾಸಗಿ ವ್ಯಕ್ತಿಯೊಬ್ಬರು ನೀರು ನೀಡುತ್ತಿದ್ದಾರೆ.
3 ಫೇಸ್ ಕರೆಂಟ್ ದಿನಕ್ಕೆ 3 ಗಂಟೆ ಮಾತ್ರ ನೀಡುವ ಕಾರಣದಿಂದಾಗಿ, ಕೂಲಿ ಕೆಲಸಕ್ಕೆ ಹೋಗದೆ ನೀರಿಗಾಗಿ ಬಿಂದಿಗೆ ಇಟ್ಟು ಕಾಯುವಂತಹ ಸ್ಥಿತಿ ಸದರಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಜಿಲ್ಲಾಡಳಿತವು ಗ್ರಾಮೀಣ ಪ್ರದೇಶದಲ್ಲಿ ತುರ್ತು ಕುಡಿಯುವ ನೀರು ಅವಶ್ಯಕತೆ ಇರುವ ಗ್ರಾಮಗಳಲ್ಲಿ ನೂತನ ಕೊಳವೆ ಬಾವಿ ಕೊರೆಸಿ ಅಥವಾ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿ ಎಂಬ ಆದೇಶ ನೀಡಿದೆ. ಹಾಗಿದ್ದರೂ ಗ್ರಾಮ ಪಂಚಾಯತಿ ಮಾತ್ರ ನಿರ್ಲಕ್ಷ್ಯ ವಹಿಸಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
