ದಾವಣಗೆರೆ :
ಯುವತಿಯರು, ನರ್ಸ್, ಗರ್ಭಿಣಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರೊಬ್ಬರಿಗೆ ಕರ್ನಾಟಕ ರಾಜ್ಯ ಶ್ರೀಭುವನೇಶ್ವರಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಧರ್ಮದೇಟು ನೀಡಿರುವುದಲ್ಲದೇ, ಆಸ್ಪತ್ರೆಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಎಸ್.ಎಂ.ಕೃಷ್ಣ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರಭುಗೌಡ ಪಾಟೀಲ್ ಆಸ್ಪತ್ರೆಯ ನರ್ಸ್‍ಗಳಿಗೆ ಹಾಗೂ ಚಿಕಿತ್ಸೆಗೆ ಬಂದ ಗರ್ಭಿಣಿಯರಿಗೆ ಹಾಗೂ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದಲ್ಲದೇ, ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾಥಮಿಕ ಕೇಂದ್ರದಲ್ಲಿ ಜಮಾಯಿಸಿದ ವೇದಿಕೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವೈದ್ಯ ಬರುತ್ತಿದ್ದಂತೆ, ವಿಚಾರಣೆ ನಡೆಸಿ ಧರ್ಮದೇಟು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಆರೋಗ್ಯ ಕೇಂದ್ರಕ್ಕೆ 4 ತಿಂಗಳ ಹಿಂದಷ್ಟೇ ವೈದ್ಯನಾಗಿ ಬಂದಿರುವ ಡಾ.ಪ್ರಭುಗೌಡ ಪಾಟೀಲ್ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗುವುದಲ್ಲದೇ, ಚಿಕಿತ್ಸೆಗಾಗಿ ಗರ್ಭಿಣಿಯರು, ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
20ರಿಂದ 30 ರೂ. ಕೊಟ್ಟರಷ್ಟೇ ನರ್ಸ್ ಇಂಜೆಕ್ಷನ್ ಮಾಡುತ್ತಾರೆ. ಹಣ ಕೊಡದಿದ್ದರೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಯಾವುದೇ ರೋಗಿಗೆ ಡ್ರಿಪ್ ಹಾಕಿದರೆ 200 ರೂ.ಗಳನ್ನು ನರ್ಸ್ ಮತ್ತು ವೈದ್ಯನಿಗೆ ನೀಡಬೇಕು. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಹೋಗಿ ಬಂದ ನಂತರ ವೈದ್ಯ ಪಾನಮತ್ತನಾಗಿಯೇ ರೋಗಿಗಳ ತಪಾಸಣೆ ಮಾಡುತ್ತಾನೆಂದು ಆಕ್ರೋಶ ವ್ಯಕ್ತಪಡಿಸಿದರು.
ತನ್ನ ಮಗಳ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ವಿಚಿತ್ರವಾಗಿ ವರ್ತಿಸುತ್ತಾ, ತಪಾಸಣೆ ಹೆಸರಿನಲ್ಲಿ ಅಶ್ಲೀಲವಾಗಿ ಮಾತನಾಡುತ್ತಾ, ದೇಹದ ಎಲ್ಲಾ ಕಡೆ ಮುಟ್ಟುತ್ತಾ, ಕಾಮಚೇಷ್ಟೆ ಪ್ರದರ್ಶಿಸುತ್ತಾರೆ. ಮಹಿಳೆಯರು, ಗರ್ಭಿಣಿಯರು, ಹರೆಯದ ಹೆಣ್ಣು ಮಕ್ಕಳಿಗೆ ತನ್ನ ಮೊಬೈಲ್‍ನಿಂದ ಅಶ್ಲಿಸ ಸಿನಿಮಾ ತೋರಿಸಿ, ಅಸಭ್ಯವಾಗಿ ವರ್ತಿಸುತ್ತಿದ್ದರೂ ಡಿಎಚ್‍ಓ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಕಿಡಿಕಾರಿದರು.
ಇದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೂ ಈತನ ಕಿರುಕುಳ ತಪ್ಪಿಲ್ಲ. ನರ್ಸ್‍ವೊಬ್ಬರಿಗೆ ಅಶ್ಲೀಲ ವೀಡಿಯೋಗಳ ಸಿಡಿಗಳನ್ನು ನೀಡಿದ್ದರಿಂದ ಆಕೆ ಅದನ್ನು ಆ ವೈದ್ಯನ ಮುಖಕ್ಕೆ ಬಿಸಾಡಿ, ಉಗಿದಿದ್ದಾರೆ. ಅಷ್ಟೇ ಅಲ್ಲ, ನಿನ್ನ ಮನೆಯ ವಿಳಾಸ ಕೊಡು ಎಂದೆಲ್ಲಾ ಮೆಸ್ಸೇಜ್ ಸಹ ಹಾಕಿದ್ದಾರೆ. ಆದ್ದರಿಂದ ಕಾಮುಕ ವೈದ್ಯ ಹಾಗೂ ಭ್ರಷ್ಟ ನರ್ಸ್ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡು, ಈ ಆಸ್ಪತ್ರೆಗೆ ಮಹಿಳಾ ವೈದ್ಯರನ್ನು ನೇಮಿಸಿ, ನೆಮ್ಮದಿಯ ಬದುಕನ್ನು ಕಟ್ಟಿ ಕೊಡಬೇಕೆಂದು ಆಗ್ರಹಿಸಿದರು.ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷೆ ಹೆಚ್.ವಿ.ಪೂರ್ಣಿಮಾ, ಕೆ.ಎಸ್.ಶಿವಕುಮಾರ, ಎಂ.ಫಾತಿಮಾ ಸೇರಿದಂತೆ ಸ್ಥಳೀಯ ನಿವಾಸಿಗಳು, ಸಂತ್ರಸ್ಥ ಸಿಬ್ಬಂದಿ ಇದ್ದರು.