ಪಟ್ಟನಾಯಕನಹಳ್ಳಿ
ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಸದರಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಗೂಸ ನೀಡಿದ ಘಟನೆ ತಾಲ್ಲೂಕಿನ ಬಂದಕುಂಟೆ ಗ್ರಾಮದಲ್ಲಿ ನಡೆದಿದೆ.
ಶಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದ ಸರ್ಕಾರಿ ಅನುದಾನಿತ ಶ್ರೀಮಣ್ಣಮ್ಮ ಪ್ರೌಢಶಾಲೆಯ ಕನ್ನಡ ಶಿಕ್ಷಕನಿಂದ ಈ ಕೃತ್ಯ ನಡೆದಿದೆ. 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಳೆದ 15 ದಿನಗಳಿಂದ ಶಾಲೆಗೆ ಹೋಗಿರಲಿಲ್ಲ.
ಅನುಮಾನಗೊಂಡ ಪೋಷಕರು ವಿದ್ಯಾರ್ಥಿನಿಯನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ ಪೋಷಕರು, ಶನಿವಾರ ಶಾಲೆಯಲ್ಲಿದ್ದ ಶಿಕ್ಷಕ ದಾದಾಪೀರ್‍ನನ್ನು ಕಿರುಕುಳದ ಬಗ್ಗೆ ಕೇಳಿದ್ದಾರೆ. ಇದಕ್ಕೆ ಪ್ರತಿರೋದ ವ್ಯಕ್ತ ಪಡಿಸಿದ ಶಿಕ್ಷಕನಿಗೆ ಗ್ರಾಮಸ್ಥರು ಹಿಗ್ಗಾ ಮುಗ್ಗ ಗೂಸ ನೀಡಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದು ತಕ್ಷಣ ಶಾಲೆಗೆ ಆಗಮಿಸಿದ ಬಿ.ಇ.ಓ. ವಿಜಯಕುಮಾರ್ ವಿದ್ಯಾರ್ಥಿನಿಯ ಹೇಳಿಕೆಯನ್ನು ಪಡೆದಿದ್ದಾರೆ. ಒಂದು ಪುಟ ಹೇಳಿಕೆ ನೀಡಿರುವ ವಿದ್ಯಾರ್ಥಿನಿ ಶಾಲೆಯಲ್ಲಿ ಶಿಕ್ಷಕ ದಾದಾಪೀರ್ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ವಿವರವಾಗಿ ಹೇಳಿಕೆ ದಾಖಲು ಮಾಡಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿಯ ಲೈಂಗಿಕ ಕಿರುಕುಳ ದೂರಿನ ಹೇಳಿಕೆ ದಾಖಲಾಗುತ್ತಿದ್ದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಬಹುದೆಂಬ ಸುಳಿವರಿತ ಶಿಕ್ಷಕ ತಕ್ಷಣ ಅಲ್ಲಿಂದ ಕಾಲ್ಕಿತ್ತು ತಲೆ ಮರೆಸಿ ಕೊಂಡಿದ್ದಾನೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ