ಚಳ್ಳಕೆರೆ
ನಗರದ ಹಾಗೂ ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಗಮನವನ್ನು ಅರಿಸುತ್ತಿದೆ. ಸಾರ್ವಜನಿಕವಾಗಿಯೂ ಸಹ ವಿದ್ಯಾರ್ಥಿಗಳಿಗೆ ಕೊಡುಗೆ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕೆಂದು ಅಜರ್ ಪವರ್ ಸೋಲಾರ ಕಂಪನಿಯ ಹಿರಿಯ ವ್ಯವಸ್ಥಾಪಕ ಎ.ಎಚ್.ಬೀರಾದಾರ್ ತಿಳಿಸಿದರು.
ಅವರು, ಶನಿವಾರ ತಾಲ್ಲೂಕಿನ ಕಾಪರಹಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ವತಿಯಿಂದ ನೋಟ್ ಪುಸ್ತುಕ ಪೆನ್ನು ವಿತರಿಸಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ವಸ್ತುಗಳನ್ನು ನೀಡಲು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಂದೆ ಬರುತ್ತಿರಲಿಲ್ಲ. ಆದರೆ, ಈಗ ಸ್ವಯಂ ಪ್ರೇರಣೆಯಿಂದ ಕೆಲವು ಸಂಘ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೋಟ್ ಪುಸ್ತಕ, ಪೆನ್ನು ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮದಿಂದ ಅಭ್ಯಾಸ ಮಾಡುವಂತೆ ಮನವಿ ಮಾಡಿದರು.
ಮುಖ್ಯೋಪಾಧ್ಯಾಯ ಎಂ.ಹನುಮಂತರಾಯ ಮಾತನಾಡಿ, ಕಳೆದ ಏ.2019ರಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಈ ಪ್ರೌಢಶಾಲೆ ಶೇ.100ರ ಫಲಿತಾಂಶವನ್ನು ದಾಖಲಿಸಿದೆ. ಶಾಲೆಯ ಎಲ್ಲಾ ಅಧ್ಯಾಪಕರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಸಕರಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ. ವಿಶೇಷ ತರಗತಿಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುತ್ತಿದ್ಧಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿ.ರಂಗಸ್ವಾಮಿ, ಕೆ.ಗೆಜ್ಜಪ್ಪ, ಎಚ್.ಕೃಷ್ಣಾನಾಯ್ಕ, ಗೋವಿಂದರಾಜು, ಸವಿತಬೀರಾದಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.