ಚಳ್ಳಕೆರೆ
ಪ್ರತಿಶಾಲೆಯಲ್ಲಿ, ಸರ್ಕಾರಿ ಕಚೇರಿಗಳ ಆವರಣ ಹಾಗೂ ಇನ್ನಿತರ ಬಯಲು ಪ್ರದೇಶಗಳಲ್ಲಿ ಹೆಚ್ಚು ಸಸಿಗಳನ್ನು ನಡೆವ ಮೂಲಕ ಹಸಿರು ಕರ್ನಾಟಕ ಅಂದೋಲನವನ್ನು ಯಶಸ್ವಿಗೊಳಿಸಬೇಕು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮ ಗಳಿಗೂ ಇನ್ನೂ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕೆಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಹಸಿರು ಕರ್ನಾಟಕ ಅಂದೋಲನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲಾ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡುವ ಶಿಕ್ಷಕರು ಸಸಿಗಳನ್ನು ನೆಟ್ಟು ಸಂರಕ್ಷಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಯಾವ ಶಾಲೆಯ ಆವರಣ ಸಸಿಗಳಿಂದ ತುಂಬಿರುತ್ತೆಯೋ ಅಲ್ಲಿನ ಮಕ್ಕಳ ಮನಸ್ಸು ವಿದ್ಯೆ ಕಲಿಯಲು ಹೆಚ್ಚು ಉತ್ಸಾಹವನ್ನು ತೋರುತ್ತದೆ ಎಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಮಾತನಾಡಿ, ಪ್ರಸ್ತುತ ವರ್ಷ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಚಾಲನೆ ದೊರಕಿದೆ. ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಎಲ್ಲರೂ ಸಾಮೂಹಿಕವಾಗಿ ಹೋರಬೇಕಿದೆ. ನಮ್ಮಲ್ಲಿರುವ ಜಾಗದಲ್ಲೇ ಹೆಚ್ಚು ಸಸಿಗಳನ್ನು ನೆಡಲು ನಾವೆಲ್ಲರೂ ಮುಂದಾಗಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸುವಂತೆ ಎಲ್ಲಾ ಶಿಕ್ಷಕರಿಗೂ ಸೂಚನೆ ನೀಡಲಾಗಿದೆ. ಇಲಾಖೆಯ ವತಿಯಿಂದಲೇ ಈ ವರ್ಷ 2 ಸಾವಿರಕ್ಕೂ ಹೆಚ್ಚು ಸಸಿ ನಡೆವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾರಾಮಣ್ಣ, ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ಎಪಿಪಿ ಜೆ.ಲಿಂಗೇಶ್ವರ್, ಆದರ್ಶ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ್, ಅರಣ್ಯ ವಲಯ ಅಧಿಕಾರಿ ಎಸ್.ಸುರೇಶ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಬಿಆರ್‍ಸಿ ಮಂಜಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.