ತುಮಕೂರು

ಜಿಲ್ಲಾ ಪಂಚಾಯಿತಿಯ ಸಭೆಯ ನಿಮಿತ್ತ ತುಮಕೂರಿಗೆ ಭೇಟಿ ನೀಡಿದ್ದ ತುಮಕೂರು ಸ್ಮಾರ್ಟ್ ಸಿಟಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಶನಿವಾರ ಬೆಳಗ್ಗೆ ವಿವಿಧ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಗುತ್ತಿಗೆದಾರರ ವಿರುದ್ಧ ಸಿಡಿಮಿಡಿಗೊಂಡರು.
ಅಶೋಕ ರಸ್ತೆಯಲ್ಲಿ ನಡೆದಿರುವ ಕಾಮಗಾರಿಯಲ್ಲಿಯೂ ಸಹ ಕೆಲವೊಂದು ಕಡೆ ಛೇಂಬರ್ ಕಾರ್ಯ ಪೂರ್ಣಗೊಂಡಿದ್ದರೂ ಕವರ್ ಸ್ಲಾಬ್ಸ್‍ಗಳನ್ನು ಸರಿಯಾದ ಕ್ರಮದಲ್ಲಿ ಮುಚ್ಚಿಲ್ಲದಿರುವುದನ್ನು ಗಮನಿಸಿದ ಅವರು, ಗುತ್ತಿಗೆದಾರರನ್ನು ಪ್ರಶ್ನಿಸಿದ್ದು, ಗುತ್ತಿಗೆದಾರರು ಮುಂದಿನ 10 ದಿನಗಳೊಳಗಾಗಿ ಪೂರ್ಣಗೊಳಿಸುತ್ತೇವೆಂದು ತಿಳಿಸಿದ್ದಾರೆ.
ಆದರೆ ಹೆಚ್ಚಿನ ಜನಜಂಗುಳಿಯಿಂದ ಕೂಡಿದ ರಸ್ತೆ ಇದಾಗಿದ್ದು, 3 ದಿನಗಳೊಳಗಾಗಿ ಪೂರ್ಣಗೊಳಿಸಿ ಅಗೆದಿರುವ ಮಣ್ಣನ್ನು ತೆರವುಗೊಳಿಸಿ ಈ ಕೂಡಲೇ ಮಣ್ಣನ್ನು ಸಮಗೊಳಿಸಲು ಸೂಚಿಸಿದರು.ಭಗವಾನ್ ಮಹಾವೀರ ರಸ್ತೆ, ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ಮಾಡಲಾದ ಕಾಮಗಾರಿ, ರಾಧಾಕೃಷ್ಣ ರಸ್ತೆ, ಜನರಲ್ ಕಾರಿಯಪ್ಪ ರಸ್ತೆ ಸೇರಿದಂತೆ ಮುಂತಾದ ಸ್ಮಾರ್ಟ್ ರಸ್ತೆಗಳನ್ನಾಗಿ ಆಯ್ಕೆ ಮಾಡಿಕೊಂಡ ರಸ್ತೆಗಳಲ್ಲಿ ನಡೆದ ಕಾಮಗಾರಿಯಿಂದ ಮಣ್ಣು ಗುಡ್ಡೆಗಳಾಗಿ ಹಾಕಿದ್ದು, ಆ ಮಣ್ಣನ್ನು ಸಮಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಮಣ್ಣನ್ನು ಸಮಗೊಳಿಸಲು ರೋಲರ್ ಸಮಸ್ಯೆ ಇದೆ ಎಂದು ಗುತ್ತಿಗೆದಾರರು ತಿಳಿಸಿದಾಗ ಎರಡು ರೋಲರ್‍ಗಳನ್ನು ತರಿಸಿಕೊಂಡು ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.ಅಲ್ಲದೆ ಈಗಾಗಲೇ ನಿರ್ಮಾಣ ಮಾಡಲಾದ ಛೇಂಬರ್‍ಗಳ ಜೊತೆಗೆ ಡ್ರೈನ್ ನಿರ್ಮಿಸುವ ಕಾರ್ಯವೂ ಸಹ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು. .ಪ್ರಸ್ತುತ ಅಸ್ಥಿತ್ವದಲ್ಲಿರುವ ಡ್ರೈನ್‍ಗಳ ಮೇಲೆ ಬೀದಿ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡಿದ್ದು,ಏಕಕಾಲದಲ್ಲಿ ಅವರನ್ನು ಮನವೊಲಿಸಿ ಇನ್ನೆರಡು ದಿನಗಳಲ್ಲಿ ಅವರನ್ನು ಬೇರೆಡೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿಯ ರಸ್ತೆಯ ಬದಿಯಲ್ಲಿ ಬೀದಿಯ ವ್ಯಾಪಾರಿಗಳು ರಸ್ತೆಯಲ್ಲಿಯೇ ವ್ಯಾಪಾರ ನಡೆಸುತ್ತಿದ್ದುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದ್ದು, ನಿರ್ಮಿತಿ ಕೇಂದ್ರದ ಮೂಲಕ ವ್ಯಾಪಾರಿಗಳಿಗೆ ಸೂಕ್ತ ಅಂಗಡಿಗಳನ್ನು ನಿರ್ಮಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಅಲ್ಲದೆ ಒಂದು ವಾರ ಗಡುವು ನೀಡಿ ಅಷ್ಟರೊಳಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು.
ನಂತರ ಅಮಾನಿಕೆರೆಗೆ ತೆರಳಿದ ಶಾಲಿನಿ ರಜನೀಶ್, ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ವೀಕ್ಷಿಸಿದ್ದಕ್ಕೂ ಇಂದಿಗೂ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅಮಾನಿಕೆರೆಯ ಒಂದು ಭಾಗದಲ್ಲಿ ಹಸಿರೀಕರಣ ಮಾಡಲು ಸೂಚನೆ ನೀಡಲಾಗಿತ್ತಾದರೂ ಇಲ್ಲಿಯವರೆಗೆ ಏಕೆ ಆಗಿಲ್ಲ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕರಿಗೆ ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಲು ತಡಬಡಿಸಿದ ಅಧಿಕಾರಿಗಳಿಗೆ ಕೂಡಲೇ ಗಿಡಗಳನ್ನು ನೆಡುವಂತೆ ಸೂಚನೆ ನೀಡಿದರು.
ಕೆರೆಯ ಏರಿಯ ಭಾಗದಲ್ಲಿ ವಾಕಿಂಗ್ ಪಾತ್ ಮಾಡುವ ಕಾಮಗಾರಿಯಲ್ಲಿ ಬೆಳವಣಿಗೆ ಕಾಣದೆ ಇರುವುದಕ್ಕೆ ಆಕ್ರೋಶಗೊಂಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದಾಗ, ಮಣ್ಣು ತೆಗೆದರೆ ನೀರು ಬರುತ್ತಿದೆ. ಹಾಗಾಗಿ ಕಾಮಗಾರಿ ವಿಳಂಭವಾಗುತ್ತಿದೆ ಎಂಬ ಉತ್ತರ ಬಂದಾಗ ಇನ್ನಷ್ಟು ಆಕ್ರೋಶಕ್ಕೆ ಗುರಿಯಾದರು. ಅಮಾನಿಕೆರೆಯಲ್ಲಿ ಕೂಲಿಂಗ್ ಪ್ಯಾನೆಲ್ ಅಳವಡಿಕೆ ಬಗ್ಗೆ ಕೇಳಿದಾಗಲೂ ಕೂಡ ಸರಿಯಾದ ಉತ್ತರ ಸಿಗದೇ ಇದ್ದಾಗ ಬೇಸರಗೊಂಡ ಶಾಲಿನಿ ರಜನೀಶ್ ಅವರು, ಎಂಡುದಿನಗಳೊಳಗೆ ಟೆಂಡರ್ ಕರೆದು ಕಾಮಗಾರಿ ಪೂರ್ಣ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದರು.
ಇದಕ್ಕೂ ಮುನ್ನ ಶುಕ್ರವಾರ ರಾತ್ರಿಯೇ ಕೆಲವೊಂದು ಕಾಮಗಾರಿಗಳ ವೀಕ್ಷಣೆ ಮಾಡಿದ್ದು, ಕೆಲವೊಂದು ಕಡೆ ಛೇಂಬರ್‍ಗಳನ್ನು ರಸ್ತೆಯ ತುದಿಭಾಗದಲ್ಲಿ ಮಾಡುವ ಬದಲು ಅಸ್ತವ್ಯಸ್ತವಾಗಿ ಮಾಡಿರುವುದರ ಬಗ್ಗೆ ಗುತ್ತಿಗೆದಾರರಿಗೆ ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಗುತ್ತಿಗೆದಾರ ಪಿ.ಎಂ.ಸಿ ವತಿಯಿಂದ ಸ್ವೀಕೃತವಾದ ನಕ್ಷೆಯಲ್ಲಿರುವಂತೆ ಛೇಂಬರ್‍ಗಳನ್ನು ಮಾಡಿದ್ದೇವೆ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಕ್ಕೆ ಕೋಪಗೊಂಡ ಶಾಲಿನಿ ರಜನೀಶ್ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರಲ್ಲದೆ, ಕೆಲವೊಂದು ಕಡೆ ಯು.ಜಿ.ಡಿ ಪೈಪ್‍ಲೈನ್ ಒಡೆದು ಹೋಗಿ ನೀರೆಲ್ಲಾ ಹೊರಹರಿಯುತ್ತಿದ್ದು, ಅದನ್ನು ಗಮನಿಸಿದ ಅವರು, ಸಾರ್ವಜನಿಕರಿಗೆ ವಾಹನ ಸವಾರರಿಗೆ ತೊಂದರೆಯುಂಟಾಗಬಾರದೆಂಬ ಉದ್ದೇಶದಿಂದ ಸಂಬಂಧಿಸಿದ ಪಾಲಿಕೆ ಅಭಿಯಂತರರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
