ದಾವಣಗೆರೆ
ಮಂಗಳವಾರ ನಡೆದ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಡಾ.ಶಾಮನೂರು ಶಿವಶಂರಪ್ಪ ಅವರುಗಳ ಮಧ್ಯೆ ಚರ್ಚೆಗೆ ಹಾಗೂ ಮಾತಿನ ಚಕಮಕಿಗೆ ವೇದಿಕೆಯಾಗಿ ಮಾರ್ಪಟ್ಟಿತು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಂಗಳವಾರ ಸ್ಮಾರ್ಟ್‍ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಿರೂಪಕ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬೈರೇಶ್, ನಗರದ ಅಭಿವೃದ್ಧಿಗೆ ಕಾಂಗ್ರೆಸ್ ಶಾಸಕರು 553 ಕೋಟಿ ರೂ. ಅನುದಾನ ತಂದಿದ್ದಾರೆಂಬುದಾಗಿ ಪ್ರಸ್ತಾಪಿಸಿದ್ದೇ, ಸಂಸದರು-ಶಾಸಕರು ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಸಿ, ಬಿಸಿ ಚರ್ಚೆಗೆ ನಾಂದಿ ಹಾಡಿತು.
ಭೈರೇಶ್ ಕಾಂಗ್ರೆಸ್ ಶಾಸಕರು ನಗರದ ಅಭಿವೃದ್ಧಿ 553 ಕೋಟಿ ರೂ. ಅನುದಾನ ತಂದಿದ್ದಾರೆನ್ನುತ್ತಿದ್ದಂತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಇಲ್ಲಿ ನಡೆಯುತ್ತಿರುವ ಕಾಮಗಾರಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿರುವ ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಯಾಗಿದೆ. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಳಿಂದ ಸಮಪಾಲು ಅನುದಾನ ಬಿಡುಗಡೆಯಾಗಲಿದೆ. ಹೀಗಾಗಿ ಇದು ಕೇವಲ ರಾಜ್ಯ ಸರ್ಕಾರದ್ದೋ, ಕಾಂಗ್ರೆಸ್ ಶಾಸಕರದ್ದೋ ಅನುದಾನವಲ್ಲ. ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆ ಎಂದರೆ, ಶಾಮನೂರು ಶಿವಶಂಕರಪ್ಪ ಮತ್ತು ಅವರ ಮಕ್ಕಳದ್ದು ಎಂಬಂತಾಗಿದೆ. ಪ್ರತಿ ನಿತ್ಯವೂ ನನ್ನ ಬಗ್ಗೆ ಕಾಂಗ್ರೆಸ್ ಶಾಸಕರು ಮಾಧ್ಯಮಗಳ ಮುಂದೆ ಇಲ್ಲಸಲ್ಲದ್ದನ್ನು ಮಾತನಾಡುತ್ತಾರೆ. ಅಲ್ಲದೆ, ನಾನು (ಸಿದ್ದೇಶ್ವರ್) ಮನೆಗೆ ಹೋಗುತ್ತೇನ್ನಾ ಅಂತಾ ಹೇಳಿಕೆ ನೀಡುತ್ತಾರೆ. ಯಾರು ಮನೆಗೆ ಹೋಗುತ್ತಾರೆ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಶಾಮನೂರು ಶಿವಶಂಕರಪ್ಪರವರನ್ನು ಕುಟುಕಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ದಿನೇಶ್ ಕೆ ಶೆಟ್ಟಿ ಹಾಗೂ ಸುರೇಂದ್ರ ಮೋಯ್ಲಿ ಶಾಸಕ ಶಾಮನೂರು ಶಿವಶಂಕರಪ್ಪರವನ್ನು ವಹಿಸಿಕೊಂಡು ಬಂದರೂ, ಸಿದ್ದೇಶ್ವರ್ ಇದನ್ನು ಲೆಕ್ಕಿಸದೇ ಮಾತು ಮುಂದುವರೆಸಿ, 28.53 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣ ಕಾಮಗಾರಿಗೆ ಯೋಜನೆ ಸಿದ್ಧವಾಗಿದೆ. ಈ ಕಾಮಗಾರಿಯು ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೂರ್ಣಗೊಂಡಿಲ್ಲ ಎಂದು ಕಿಡಿಕಾರಿದರು.
ಬಳಿಕ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಸ್ತುತ ನಡೆಯುತ್ತಿರುವ ಕಾಮಗಾರಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಡೆಯುತ್ತಿರುವುದೇನೋ ಸತ್ಯ. ಆದರೆ, ಈ ಕಾಮಗಾರಿಗೆ ಯೋಜನೆ ರೂಪಿಸಿದವರು ಯಾರು? ಎಂಬ ಪ್ರಶ್ನೆ ಬಂದರೆ, ಆ ಕೀರ್ತಿಯು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ ಎಂದು ತಮ್ಮ ಪುತ್ರನ ಪರವಾಗಿ ಬ್ಯಾಟಿಂಗ್ ಮಾಡಿದರು.
ಈ ಹಳೇ ಬಸ್ ನಿಲ್ದಾಣವನ್ನು ಬೇರೆ ಕಡೆಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಆಗ ಆ ಪ್ರಸ್ತಾಪವನ್ನು ನಖಾಸಗಿ ಬಸ್ ಮಾಲೀಕರು ವಿರೋಧಿಸಿದರು. ಸಾರ್ವಜನಿಕರಿಗೆ ಹಾಗೂ ಬಸ್ ಮಾಲೀಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಳೇ ಬಸ್ ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಿಸಲು ಯೋಜನೆ ರೂಪಿಸಿದರು. ಅದರ ಪರಿಣಾಮದಿಂದಾಗಿಯೇ ಇಂದು ಗುದ್ದಲಿ ಪೂಜೆ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಚಮನ್ ಸಾಬ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತ್‍ರಾವ್ ಜಾಧವ್, ಕಾಂಗ್ರೆಸ್ ಮುಖಂಡರಾದ ಹೆಚ್.ತಿಪ್ಪಣ್ಣ, ಕೆ.ಎಸ್.ಮಲ್ಲೇಶಪ್ಪ, ಕೆ.ಜಿ.ಶಿವಕುಮಾರ್, ಮಲ್ಲಿಕಾರ್ಜುನ ಎಸ್, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಬಸ್ ಏಜೆಂಟರ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.