ಹುಳಿಯಾರು
ಪಟ್ಟಣದ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ಶಂಕರ ಜಯಂತಿ, ಗಾಯತ್ರಿ ಜಯಂತಿ ಹಾಗೂ ರಾಮಾನುಜ ಜಯಂತಿಯನ್ನು ವಿಪ್ರ ಸಮಾಜದಿಂದ ಗುರುವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಶಂಕರ,ರಾಮಾನುಜಾ,ಗಾಯತ್ರಿ ದೇವಿಯ ಭಾವಚಿತ್ರಕ್ಕೆ ಅಭಿಷೇಕ ಸಮೇತ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ವಿಪ್ರ ಸಮಾಜದ ಹು.ಲ.ವೆಂಕಟೇಶ್ ಮಾಸ್ಟರ್ ಶ್ರೀಶಂಕರರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರಾಗಿದ್ದು, ವೇದಾಂತ ತತ್ವಕ್ಕೆ ಆದಿ ಶಂಕರರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ಶಂಕರಾಚಾರ್ಯರ ಜನ್ಮ ದಿನ ಆಚರಿಸುತ್ತಾರೆ. ಇವರನ್ನು ಆದಿ ಶಂಕರ, ಶಂಕರ ಭಗವತ್ಪಾದಾಚಾರ್ಯ ಎಂದೂ ಸಹ ಕರೆಯುತ್ತಾರೆ. ಸುಮಾರು 8ನೇ ಶತಮಾನದ ಮಹನೀಯರಲ್ಲಿ ಶಂಕರರೂ ಸಹ ಒಬ್ಬರಾಗಿದ್ದು, ಶಂಕರರು ತಮ್ಮ ಜೀವಿತದ ಕಡಿಮೆ ಅವಧಿಯಲ್ಲಿ ಮಾಡಿದ ಸಾಧನೆ ಅಪಾರವಾದದ್ದು ಎಂದರು.
ಹಿಂದೂ ಧರ್ಮದ ಪ್ರಚಾರಕ್ಕಾಗಿ ನಾಲ್ಕು ದಿಕ್ಕುಗಳಲ್ಲಿ 4 ಮಠಗಳನ್ನು ಸ್ಥಾಪಿಸಿದರು. ಕರ್ನಾಟಕದಲ್ಲಿ ಶೃಂಗೇರಿ ಶಾರದ ಪೀಠ ,ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾದ ಪೂರಿಯಲ್ಲಿ ಮತ್ತು ಉತ್ತರಾಖಾಂಡದಲ್ಲೂ ಸಹ ಮಠಗಳನ್ನು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರು ಬಹಳಷ್ಟು ರಚನೆಗಳನ್ನೂ ಮಾಡಿದ್ದು, ಭಗವದ್ಗೀತೆ, ಉಪನಿಷದ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದಿದ್ದಾರೆ. ಅದ್ವೈತ ವೇದಾಂತ ಅಧ್ಯಯನ ಮಾಡುವವರು ಈ ಭಾಷ್ಯಗಳನ್ನೇ ಇಂದಿಗೂ ಅನುಸರಿಸುತ್ತಾರೆ ಎಂದರು.
ಶ್ರೀ ಶಂಕರಭಗವತ್ಪಾದರು ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕರು ಎಂದರು. ವಿಪ್ರ ಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ, ಶಂಕರ ಅಷ್ಟೋತ್ತರ, ಗುರುವಂದನ ಸ್ತೋತ್ರ, ರಾಮ ಭುಜಂಘಾಪ್ರಯಾತ, ಹರಿಸ್ತುತಿ ಹಾಗೂ ಶಿವಾನಂದಲಹರಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು.
ಶಂಕರಭಜನೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ಸೀತಾರಾಮ ಪ್ರತಿಷ್ಠಾನದ ಉಪಾಧ್ಯಕ್ಷ ಪರಮೇಶಣ್ಣ, ಕಾರ್ಯದರ್ಶಿ ವೆಂಕಟರಾಯ, ಖಜಾಂಚಿ ರಂಗನಾಥ್ ಪ್ರಸಾದ್, ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್, ಪೋಲಿಸ್ ಗೋಪಾಲರಾವ್, ಸೂರಪ್ಪ. ಕಾರ್ಯದರ್ಶಿ ಮಂಜುನಾಥ್, ಗಣೇಶ್, ರವಿಕುಮಾರ್, ನಾಗರಾಜ್, ನಾರಾಯಣಪ್ಪ, ಸುಬ್ರಹ್ಮಣ್ಯ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
