ಮಂಜಪ್ಪ ಪರ ಶಾಂತನಗೌಡ ಪ್ರಚಾರ

ಹೊನ್ನಾಳಿ:

      ರಾಜ್ಯದ ಮೈತ್ರಿ ಸರಕಾರ ಮಾಡಿದ ಸಾಲ ಮನ್ನಾ ಯೋಜನೆಯಿಂದ ರೈತರು ನೆಮ್ಮದಿಯಿಂದ ಇದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರಿಗೆ ಅಲ್ಪ ಸಂಖ್ಯಾತ, ಹಿಂದುಳಿದ, ದಲಿತ ಹಾಗೂ ಸಾಮಾನ್ಯ ವರ್ಗದವರ ಮತಗಳು ಸಿಗಲಿವೆ. ಎಚ್.ಬಿ. ಮಂಜಪ್ಪ ಅತಿ ಹೆಚ್ಚು ಮತಗಳ ಅಂತರಿಂದ ಜಯ ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ವಿಶ್ವಾಸ ವ್ಯಕ್ತಪಡಿಸಿದರು.

        ಶನಿವಾರ ತಾಲೂಕಿನ ಹೊಳೆಮಾದಾಪುರ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
ನಾವು ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ. ಯುಪಿಎ ಸರಕಾರವಿದ್ದಾಗ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು.

         ರಾಜ್ಯದ ಈ ಹಿಂದಿನ ಸಿಎಂ ಸಿದ್ಧರಾಮಯ್ಯ ಪ್ರತಿಯೊಬ್ಬ ರೈತರ 50 ಸಾವಿರ ರೂ.ಗಳಷ್ಟು ಸಾಲ ಮನ್ನಾ ಮಾಡಿದರು. ಪ್ರಸ್ತುತ ಮೈತ್ರಿ ಸರಕಾರ 45 ಸಾವಿರ ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದರು.

          ಆದರೆ, ಮೋದಿ ಕೇವಲ ವಿದೇಶ ಪ್ರವಾಸದಲ್ಲಿಯೇ ಕಾಲ ಕಳೆದರು. ಒಬ್ಬ ರೈತನನ್ನೂ ಭೇಟಿ ಮಾಡಿ ಆತನ ಕಷ್ಟ ವಿಚಾರಿಸಲಿಲ್ಲ. ಮಡಿಕೇರಿಯಲ್ಲಿ ಜಲಪ್ರಳಯವಾದಾಗ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಬಡವರ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಚಿಂತನೆ ನಡೆಸಲಿಲ್ಲ. ಕೇವಲ ಜಾತಿ, ಧರ್ಮ ವಿಚಾರ ಎತ್ತಿ ದೇಶದ ಅಭಿವೃದ್ಧಿ ಮರೆತರು ಎಂದು ಟೀಕಿಸಿದರು.

        ದಾವಣಗೆರೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ರೈತ ಕುಟುಂಬದಿಂದ ಬಂದ ಅತ್ಯಂತ ಸರಳ ವ್ಯಕ್ತಿ. ತಳಮಟ್ಟದಿಂದ ಬೆಳೆದು ಬಂದವರು. ಸಾಕಷ್ಟು ಆಡಳಿತದ ಅನುಭವವನ್ನು ಹೊಂದಿದ್ದಾರೆ. ಆದ್ದರಿಂದ, ಅವರಿಗೆ ನಿಮ್ಮ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

         ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಉಮಾಪತಿ, ಜಿಪಂ ಮಾಜಿ ಸದಸ್ಯ ಎಂ. ರಮೇಶ್, ಎಪಿಎಂಸಿ ನಿರ್ದೇಶಕ ಎಸ್.ಎಸ್. ಬೀರಪ್ಪ, ಮುಖಂಡರಾದ ಬಿ. ಸಿದ್ಧಪ್ಪ, ಎಚ್.ಬಿ. ಶಿವಯೋಗಿ, ಬಿ.ಎಚ್. ಕುಬೇರಗೌಡ, ಪಪಂ ಮಾಜಿ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ಎಚ್. ಕಡದಕಟ್ಟೆ ಗ್ರಾಪಂ ಉಪಾಧ್ಯಕ್ಷ ಮಾದಪ್ಪ, ಸದಸ್ಯ ಬಿ.ಎಚ್. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

         ತಾಲೂಕಿನ ಬಿದರಗಡ್ಡೆ, ದಿಡಗೂರು ಎ.ಕೆ. ಕಾಲೋನಿ, ಹರಳಹಳ್ಳಿ, ಗೋವಿನಕೋವಿ, ಕುರುವ ತಾಂಡ, ಕುರುವ, ಚಿ. ಕಡದಕಟ್ಟೆ, ಕೋಟೆಹಾಳ್, ವೆಂಕಟೇಶ್ ನಗರ, ಮರಿಗೊಂಡನಹಳ್ಳಿ, ತಗ್ಗಿಹಳ್ಳಿ, ಹಳೆ ಮಳಲಿ, ಹೊಸ ಮಳಲಿ, ಟಿ. ಗೋಪಗೊಂಡನಹಳ್ಳಿ, ಚೀಲೂರು ಮುಸ್ಲಿಂ ಕಾಲೋನಿ, ಕೆಂಗಟ್ಟೆ, ಒಡೆಯರಹತ್ತೂರು, ಒಡೆಯರ ಹತ್ತೂರು ತಾಂಡ, ಬೀಜೋಗಟ್ಟೆ ಮತ್ತಿತರ ಗ್ರಾಮಗಳಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತಿತರರು ಪ್ರಚಾರ ಸಭೆಗಳನ್ನು ನಡೆಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link