ತುರುವೇಕೆರೆ:
ಪಟ್ಟಣದ ಶ್ರೀ ಗಣಪತಿ ಜಾತ್ರಾ ಮಹೋತ್ಸವದ ವೇಳೆ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮ ಕುರಿತಂತೆ ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ತಿಪಟೂರು ಗಣಪತಿ ಜಾತ್ರಾಮಹೋತ್ಸವದಲ್ಲಿ ಸಂಬವಿಸಿದ ಪಟಾಕಿ ಸಿಡಿತದ ಅನಾಹುತ ತುರುವೇಕೆರೆ ಸತ್ಯಗಣಪತಿ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಅದರಿಂದ ಆಗುವ ಅನಾಹುತದ ಬಗ್ಗೆ ವಿವರಿಸಿ ಪಟಾಕಿ ಸಿಡಿಸುವುದನ್ನು ಕಡ್ಡಾಯವಾಗಿ ನಿಷೇದಿಸುವಂತೆ ಸಿಪಿಐ ಮಹಮದ್ ಸಲೀಂ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸೋಮವಾರ 24 ರಂದು ನಡೆಯಲಿರುವ ತುರುವೇಕೆರೆ ಶ್ರೀ ಸತ್ಯ ಗಣಪತಿ ಜಾತ್ರಾಮಹೋತ್ಸವದ ವೇಳೆ ಕೈಗೊಳ್ಳಬೇಕಾದ ಮುಂಜಾಗರೂಕ ಕ್ರಮ ಕುರಿತಂತೆ ವಿವರಿಸಿದ ಅವರು ತಿಪಟೂರಿನ ಪಟಾಕಿ ಸಿಡಿತದ ಅವಘಡದಿಂದಾಗಿ ತುರುವೇಕೆರೆ ತಾಲ್ಲೂಕಿನ ಹಡವನಹಳ್ಳಿಯ ಯುವತಿ ಸಾವನ್ನಪ್ಪುವಂತಾಯಿತು. ಅಂತಹ ಅಹಿತಕರ ಘಟನೆಗಳು ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳು ಪಟಾಕಿಸಿಡಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಇದೇ ರೀತಿ ವಿಷವಿರುವ ಪ್ರಸಾದದಿಂದಾಗಿ 14 ಮಂದಿ ಸಾವಿಗೆ ಕಾರಣವಾಗಿದ್ದು, ಇನ್ನು ಸಾರ್ವಜನಿಕ ಅನ್ನದಾನ, ಪ್ರಸಾದ ವಿತರಣೆಗಳಿಗೂ ಸಹ ಧಾರ್ಮಿಕ ದತ್ತಿ ಇಲಾಖೆಯಿಂದ ಪರವಾನಗಿ ಪಡೆಯಬೇಕಾಗಿದೆ. ಈ ಕಾನೂನುಗಳನ್ನು ಪಾಲಿಸುವುದು ಸಮಾಜ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಮಹತ್ವದ್ದಾಗಿದ್ದು, ಇದನ್ನು ಗಂಬೀರವಾಗಿ ಪರಿಗಣಿಸಿ. ಹಾಗೆಯೇ ಅತಿಯಾದ ಶಬ್ದಕ್ಕೆ ಕಾರಣವಾಗುವ ಡಿಜೆ ಸೌಂಡ್ಸ್ ಸಿಸ್ಟಂ ನಿಲ್ಲಿಸಿ ಸಾಂಪ್ರದಾಯಿಕ ಹಾಗೂ ಗ್ರಾಮೀಣ ಜಾನಪದ ಕಲಾಪ್ರಕಾರಗಳೊಡಗೂಡಿ ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಜಾತ್ರೆಯನ್ನು ಯಶಸ್ವಿಗೊಳಿಸಿ ಎಂದರು,ಇದೇ ಸಂದರ್ಭದಲ್ಲಿ ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ 67 ವರ್ಷದ ಇತಿಹಾಸವಿರುವ ತುರುವೇಕೆರೆ ಗಣಪತಿ ಜಾತ್ರಾಮಹೋತ್ಸವ ಇಲ್ಲಿವರೆಗೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗಿಲ್ಲ.
ಪೋಲಿಸ್‍ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ನಡೆದುಬಂದಿದೆ, ದುಬಾರಿ ವೆಚ್ಚದ ಶಕ್ತಿಶಾಲಿ ಪಟಾಕಿಗಳಾಗಲಿ, ಸಿಡಿಮದ್ದುಗಳಾಗಲೀ ಸಿಡಿಸುವುದಿಲ್ಲ, ಆಕಾಶದಲ್ಲಿ ಬಣ್ಣ- ಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶ ನೀಡಿ ಹಾಗು ಜಾಗತಿಕ ಬದಲಾವಣೆ ನಡುವೆ ಯುವ ಜನತೆ ಆಸಕ್ತಿಯಿಂದ ಪಾಲ್ಗೊಳ್ಳುವ ಏಕೈಕ ಸಾಧನವೆಂದರೆ ಡಿಜೆ ಸೌಂಡ್ಸ್ ಸಿಸ್ಟಂ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಸ್ಪೀಕರ್‍ಒಳಗೊಂಡಂತೆ ಅಲ್ಪ ಪ್ರಮಾಣದಲ್ಲಾದರೂ ಅದಕ್ಕೆ ಅವಕಾಶ ನೀಡಿ ಇಲ್ಲದಿದ್ದರೆ ಜಾತ್ರೆಯ ಮೆರುಗು ಅರ್ಥಕಳೆದುಕೊಳ್ಳಲಿದೆ ಎಂದು ವಿನಂತಿಸಿದರು.
ತಹಶೀಲ್ದಾರ್ ನಾಗರಾಜು ಹಾಗು ಎಸ್‍ಐ ರಾಜು ಮಾತನಾಡಿ ಕಾನೂನಿನ ಹಿತಿ – ಮಿತಿ, ಬಿಗುವಿನ ಸಂಗತಿಗಳಿಂದ ಇದು ನಮ್ಮ ಪರಿಮಿತಿಯಲ್ಲಿ ಬರುವುದಿಲ್ಲ, ಇವೆರಡನ್ನೂ ನಿಷೇದಿಸಿ ಮತ್ತಷ್ಟು ಅರ್ಥಪೂರ್ಣವಾಗಿ ಜಾತ್ರೆ ಆಚರಿಸಿ. ಇವೆಲ್ಲವೂ ಬೇಕೆ- ಬೇಕು ಎಂದಾದಲ್ಲಿ ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ಲಿಖಿತ ಪರವಾನಗಿ ತಂದು ಕಾರ್ಯಕ್ರಮ ಮಾಡಿಕೊಳ್ಳಬಹುದು ಎಂದರು.
ಈ ಸಂಧರ್ಭದಲ್ಲಿ ಪಪಂ ಅಧ್ಯಕ್ಷ ಲಕ್ಷ್ಮಿನರಸಿಂಹ, ಸೇವಾ ಸಮಾಜದ ನಾಗರಾಜು, ಬಸವರಾಜು, ಮುಖಂಡರಾದ ವಿ,ಬಿ.ಸುರೇಶ್, ಮಂಜುನಾಥ್, ಸುರೇಶ್, ಸೋಮಶೇಖರ್, ಚಿದಾನಂದ್, ಜಫ್ರುಲ್ಲಾ ಸೇರಿದಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗು ಹಲವು ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ