ಶಾಂತಿ ಸಾಮರಸ್ಯ ಬದುಕಿಗೆ ವೀರಶೈವ ಧರ್ಮದ ಕೊಡುಗೆ ಅಪಾರ – ಶ್ರೀ ರಂಭಾಪುರಿ ಜಗದ್ಗುರುಗಳು

ಹರಪನಹಳ್ಳಿ 

          ಸುಸಂಸ್ಕತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮದ ಅರಿವು ಮುಖ್ಯ. ಎಲ್ಲ ಸಂಪತ್ತು ಅಳಿದರೂ ಅಧ್ಯಾತ್ಮ ಸಂಪತ್ತು ಶಾಶ್ವತವಾಗಿದೆ. ಶಾಂತಿ ಮತ್ತು ಸಾಮರಸ್ಯ ಬದುಕಿಗೆ ವೀರಶೈವ ಧರ್ಮದ ಪಂಚ ಪೀಠಗಳು ಕೊಟ್ಟ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

          ಅವರು ಪಟ್ಟಣದ ತೆಗ್ಗಿನಮಠ ಸಂಸ್ಥಾನದಲ್ಲಿ ಜರುಗಿದ ಲಿಂ. ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮಿಗಳವರ 4ನೇ ವರ್ಷದ ಪುಣ್ಯ ಸ್ಮರಣೋತ್ಸವ, ಪರಮಾಚಾರ್ಯ ನಿವಾಸ ನೂತನ ಕಟ್ಟಡ ಉದ್ಘಾಟನೆ, ವರಸದ್ಯೋಜಾತ ಶ್ರೀಗಳವರ ಪಟ್ಟಾಧಿಕಾರದ ತೃತೀಯ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆ ಹೋರಾಟ ನಿರಂತರ ನಡೆಯುತ್ತಲೇ ಇರಬೇಕಾಗುತ್ತದೆ.

           ಧರ್ಮ ಸಂಸ್ಕತಿ ಆದರ್ಶ ಮೌಲ್ಯಗಳ ಪುನರುತ್ಥಾನಕ್ಕಾಗಿ ಲಿಂ. ಚಂದ್ರಮೌಳೀಶ್ವರ ಶ್ರೀಗಳು ಶ್ರಮಿಸಿದ ಸಾಧನೆ ಕೊಟ್ಟ ಕೊಡುಗೆ ಅಮೂಲ್ಯವಾದುದು. ಧಾರ್ಮಿಕ ಜಾಗೃತಿಯ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಗೈದ ಶ್ರೇಯಸ್ಸು ಅವರದು. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಏನೆಲ್ಲ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟ ಶಿವಾಚಾರ್ಯ ಶ್ರೀಗಳು. ವ್ಯಕ್ತಿ ಶಕುನಿಯಾದರೆ ಸಮಾಜ ಛಿದ್ರಗೊಳ್ಳುತ್ತದೆ. ವ್ಯಕ್ತಿ ವೀರಭದ್ರನಾಗಿ ಬಾಳಿದರೆ ಸಮಾಜ ಸುಭದ್ರಗೊಳ್ಳುತ್ತದೆ. ಲಿಂ.ಚಂದ್ರಮೌಳೀಶ್ವರ ಶ್ರೀಗಳವರ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಂದಿನ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದರು.

           ಹಿಂದಿನ ರಾಜ್ಯ ಸರಕಾರ ವೀರಶೈವ ಲಿಂಗಾಯತ ಸಮಾಜವನ್ನು ಛಿದ್ರಗೊಳಿಸಲು ಮುಂದಾಗಿತ್ತು ಆದರೆ ಕೇಂದ್ರ ಸರಕಾರ ವೀರಶೈವ-ಲಿಂಗಾಯತ ಎರಡು ಒಂದೇ ಎಂಬುದನ್ನು ದೃಡಪಡಿಸಿದೆ ಆಗಾಗಿ ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಸಮಾಜದಲ್ಲಿ ಸಾಮಾರಸ್ಯ ಮೂಡವಂತಾಗಲಿ ಎಂದರು.

           ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ ದೇಶದಲ್ಲಿ ನೀರು, ಗಾಳಿ, ಬೆಳಕು ಕೆಟ್ಟಿಲ್ಲ. ಆದರೆ ಮನುಷ್ಯನ ಮನಸ್ಸು ಕೆಟ್ಟಿದೆ. ಹೃದಯ ಕಲುಷಿತಗೊಂಡಿದೆ. ಮನುಷ್ಯ ಅನುಸರಿಸಬೇಕಾದದ್ದು ಮಹಾತ್ಮರ ಚಾರಿತ್ರ್ಯವನ್ನು ಹೊರತು ಚರಿತ್ರೆಯನ್ನಲ್ಲ. ಲಿಂ. ಚಂದ್ರಮೌಳೀಶ್ವರ ಶ್ರೀಗಳು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.

            ಜಗತ್ತು ಉತ್ತಮವಾಗಿ ಬೆಳೆಯಲು ಶಿಕ್ಷಣವೊಂದೆ ದಾರಿ. ಲೌಕಿಕ ಬದುಕಿಗೆ ಬೇಕಾದ ಕಾರ್ಯವನ್ನು ಗುರುಗಳು ನಡೆದುಕೊಳ್ಳಬೇಕು ಎಚಿದ ಅವರು ವೀರಶೈವ ಧರ್ಮವು ಒಗ್ಗಟ್ಟಿನ ಮಂತ್ರ ಜಪಿಸುವ ಕಾರ್ಯ ಸನಿಹವಾಗಿದೆ ಎಚಿದು ಹೇಳಿದರು.
ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹೂದೋಟದ ಹೂಗಳು ಎಲ್ಲರಿಗೂ ಸುಗಂಧ ಪರಿಮಳ ಕೊಡುತ್ತಿವೆ.

             ಹೂದೋಟದೊಳಗೆ ಹೋಗಿ ಬಂದ ಮನುಷ್ಯನ ಮನಸ್ಸು ಪರಿವರ್ತನೆಗೊಂಡರೆ ಜೀವನ ಸಾರ್ಥಕ. ಹರಿಯುವ ನೀರು ದಾಹ ಹಿಂಗಿಸುತ್ತದೆ. ಮರ ನೆರಳು ಹೂ ಹಣ್ಣು ಕೊಡುತ್ತದೆ. ಮಹಾತ್ಮರು ಜ್ಞಾನಾಮೃತ ನೀಡಿ ಬದುಕನ್ನು ಹಸನಗೊಳಿಸುವರು. ಲಿಂ. ಚಂದ್ರಮೌಳೀಶ್ವರ ಶ್ರೀಗಳು ಹಾಕಿದ ದಾರಿಯಲ್ಲಿ ಮುನ್ನಡೆದು ಭಕ್ತ ಸಮೂಹಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಗುರಿಯಾಗಿದೆ ಎಂದರು.
ರಾಮಘಟ್ಟದ ರೇವಣಸಿದ್ದ ಶಿವಚಾರ್ಯ ಸ್ವಾಮಿಜಿ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು.

             ಹೊನ್ನಾಳಿ ಹಿರೇಕಲ್ಮಠದ ಡಾ|| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ, ಅಖಿಲಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ಸ್ವಾಮಿಜಿ, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಹೂವಿನ ಹಡಗಲಿ ಹಿರಿಶಾಂತವೀರ ಸ್ವಾಮಿಗಳು, ಪುರದ ಸಿದ್ಧವೀರ ಶಿವಾಚಾರ್ಯರು, ನಾಗತಿ ಬಸಾಪುರದ ಸದ್ಗುರು ಗಿರಿರಾಜ ಹಾಲಸ್ವಾಮಿಗಳು, ಹರಪನಹಳ್ಳಿ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

             ಸಮಾರಂಭದಲ್ಲಿ ಹಲವಾರು ರಾಜಕೀಯ ಧುರೀಣರಿಗೆ ಮತ್ತು ದಾನಿಗಳಿಗೆ ಗುರು ರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ತೆಗ್ಗಿನಮಠ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರಯ್ಯ. ಕೆ.ಸಿ. ಕುಲಕರ್ಣಿ, ಉಪನ್ಯಾಸಕರಾದ ರಾಶೇಖರ, ಎಂ.ಗಂಗಪ್ಪ, ತಿಮ್ಮಣ್ಣ, ದೇವರಮನಿ ಶಿವಕುಮಾರ, ಎಂ.ಪಿ.ಎಂ. ಶಾಂತವೀರಯ್ಯ ಸಿ.ಎಂ. ಕೊಟ್ರಯ್ಯ,ಜಯದೇವಯ್ಯ ಸೇರಿದಂತೆ ಇತರರು ಇದ್ದರು ,

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap