ಮನುಕುಲಕ್ಕೆ ಹೊಸ ಸಂವಿಧಾನ ಕೊಟ್ಟ ಶರಣ ಪರಂಪರೆ

ದಾವಣಗೆರೆ:

      ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನ ಇಡೀ ವಿಶ್ವದ ಮನುಕುಲಕ್ಕೆ ‘ಹೊಸ ಸಂವಿಧಾನ’ವನ್ನು ಕೊಟ್ಟಿದೆ ಎಂದು ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ|| ಪ್ರಕಾಶ ಹಲಗೇರಿ ಪ್ರತಿಪಾದಿಸಿದರು.

    ಗುರುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನಕ್ಕಾಗಿ ಶರಣ ಸಾಹಿತ್ಯ ಪರಿಷತ್ತಿನಿಂದ ಶರಣರು, ಶರಣ ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರಧಾರೆಗಳ ಕುರಿತು ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಚನ ಪರಿಸರ’ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.

      ವೈಚಾರಿಕತೆ, ಭಾಷೆ, ಸ್ತ್ರೀ ಅಸಮಾನತೆ ಹೀಗೆ ಸಮಾಜದಲ್ಲಿದ್ದ ಅಪಮೌಲ್ಯಗಳನ್ನು ತೂಕಕ್ಕಿಟ್ಟು ಪರಿವರ್ತಿಸಿ ಸಮಾನತೆ ಕಲ್ಪನೆ ದೊರಕಿಸಿಕೊಟ್ಟದ್ದು ವಚನ ಪರಿಸರದ ಕಾಲಘಟ್ಟವದು ಎಂದು ತಿಳಿಸಿದರು.

       ಹನ್ನೆರಡನೇ ಶತಮಾನದ ವಚನ ಪರಿಸರ ಸಾಕಷ್ಟು ಬದಲಾವಣೆ ತರಲು ಮುಂದಾಯಿತು. ಅತ್ಯಂತ ಕೆಳಜಾತಿ, ವರ್ಗ ಎಂದು ನೋಡುತ್ತಿದ್ದ ಶೂದ್ರರಿಂದ ಅತೀಶ್ರೇಷ್ಠ ಕಾವ್ಯ, ವಚನಗಳನ್ನು ಬರೆಸಿ ಲೋಕಾರ್ಪಣೆ ಮಾಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಒಂದು ರೀತಿಯಲ್ಲಿ ಅವರೆಲ್ಲರೂ ಬಸವಣ್ಣ ಅವರನ್ನು ಬೆಳೆಸಿದ್ದು ಆ ಶ್ರಮಿಕವರ್ಗದ ವಚನಕಾರರು ಎಂದರೇ ತಪ್ಪಾಗಲಿಕ್ಕಿಲ್ಲ ಎಂದು ಹೇಳಿದರು.
ವಚನಗಾರರು ಎಂದರೇ ಮನೋವಿಜ್ಞಾನಿಯಂತೆ, ಅವರೆಲ್ಲರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸರಳ ನಡೆನುಡಿಯೊಂದಿಗೆ ಅರ್ಥ, ಗಾಂಭೀರ್ಯ ಪದ ಪ್ರಯೋಗ ಮಾಡುವ ಮೂಲಕ ಸಮಾಜದ ಕೆಲವು ಅಪಮೌಲ್ಯಗಳನ್ನು ತಿದ್ದಿದರು. ಅವರುಗಳು ಅಂತರಂಗದ ಬೇಸಾಯಗಾರರು ಎಂದರು.

      ಸೀಮಿತ ಚೌಕಟ್ಟಿನೊಳಗೆ ಇದ್ದ ವಚನ ಶರಣರು ಆರ್ಥಿಕ, ಕಾಯಕ ಪ್ರಜ್ಞೆಯ ಮೂಲಕ ಸೀಮಾತೀತವಾಗಿ ಬೆಳೆದರು. ಆ ಕಾಲದಲ್ಲಿಯೇ ಬಸವಣ್ಣನವರು ವೈದಿಕ ಪರಂಪರೆಯನ್ನು ಒಪ್ಪುತ್ತಿರಲಿಲ್ಲ. ಮಕ್ಕಳು ಜನಿಸುವುದು ತಾಯಿಯ ಉದರದಲ್ಲಿ. ಆದರೆ, ಕುಂತಿಯ ಕಿವಿಯಿಂದ ಕರ್ಣ ಹುಟ್ಟಿದ್ದು ಹೇಗೆ ಸಾಧ್ಯ ಎಂದು ಅಂದೇ ಬಸವಣ್ಣನವರು ಪ್ರಶ್ನಿಸಿದ್ದರು.

       ವಚನ ಶರಣರು ಮೌಲ್ಯಗಳ ಜಗತ್ತಿನಲ್ಲಿ ಬದುಕಿದ್ದವರು. ಅವರೆಲ್ಲರೂ ಆರ್ಥಿಕ, ಧರ್ಮ, ಕಾಯಕ, ಭಾಷೆಯ ಬಗ್ಗೆ ಪ್ರಜ್ಞೆ ಹೊಂದಿದ್ದರು. ಸ್ವಾಥ್ ರಹಿತವಾಗಿ ಬದುಕಿನ ನೆಲೆ ಕಂಡವರವರು. ಆದರೆ, ನಾವೆಲ್ಲರೂ ಮಸಾಲೆ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಜಾತಿ, ಧರ್ಮಗಳ ನಡುವೆಯೇ ‘ಉಪ’ ಜಾತಿ, ಪಂಗಡಗಳನ್ನು ಹುಡುಕಿ ಸ್ವಾರ್ಥ ಮೆರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

       ಬಸವಣ್ಣ, ಅಂಬೇಡ್ಕರ್ ನಿಜವಾಗಿಯೂ ನಮ್ಮೆಲ್ಲರ ಅನ್ನದಾತರು ಎಂದರೇ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಅವರೆಲ್ಲರೂ ಸಮಾನತೆಗಾಗಿಯೇ ಸಾಕಷ್ಟು ಶ್ರಮಿಸಿದವರು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನೇಕ ಶರಣರು ತಮ್ಮ ವಚನಸುಧೆಗಳನ್ನು ಹರಿಸುವ ಮೂಲಕ ಧಾರ್ಮಿಕ ಅಸಂದ್ಧತೆ, ವಿರೂಪಗಳನ್ನು ಸರಿಮಾಡಿದ್ದಾರೆ. ಅದಕ್ಕಾಗಿ ವಚನ ಪರಿಸರ ಮೌಲ್ಯವಾಗಿದ್ದು ಎನಿಸುತ್ತದೆ ಎಂದು ಅಭಿಪ್ರಾಯಿಸಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಪ್ರಸ್ತಾಪಿಸಿದರು, ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಡಿವೈಎಸ್‍ಪಿ ಟಿ.ಎಸ್. ಮುರುಗಣ್ಣವರ್, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಕೆ. ಮಲ್ಲಿಕಾರ್ಜುನ್ ಜವಳಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link