ಅ.2 ರಿಂದ ಶರಣ ಸಂಸ್ಕೃತಿ ಉತ್ಸವ ..!

ಚಿತ್ರದುರ್ಗ

    ಮಧ್ಯ ಕರ್ನಾಟಕದ ವೈಚಾರಿಕ ದಸರಾ ಎಂದೇ ಖ್ಯಾತಿಗಳಿಸಿರುವ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಕೋಟೆನಾಡು ಚಿತ್ರದುರ್ಗ ಸಜ್ಜಾಗಿದೆ

   ಅಕ್ಟೋಬರ್ 2ರಿಂದ 11ರವರೆಗೆ ಮುರುಘಾಮಠದ ಅನುಭವ ಮಂಟಪದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಉತ್ಸವವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸಲಾಗುತ್ತಿದ್ದು, ಈಗಾಗಲೇ ಪೂರ್ವ ಸಿದ್ದತೆಗಳು ನಡೆದಿವೆ. ಈ ಉತ್ಸವದಲ್ಲಿ ನಾಡಿನ ವಿವಿಧಡೆಯಿಂದ ಅಪಾರ ಭಕ್ತರು ಪಾಲ್ಗೊಳ್ಳಲಿದ್ದಾರೆ

     ವಿವಿಧ ಮಠಾಧೀಶರು, ಚಿಂತಕರು, ಸಾಹಿತಿಗಳು, ಹೋರಾಟಗಾರರು, ಕಲಾವಿದರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳು ಸೇರಿದಂತೆ ಇನ್ನಿತರೆ ಚುನಾಯಿತ ಪ್ರತಿನಿಧಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು

      ಮಂಗಳವಾರ ಉತ್ಸವದ ಪೂರ್ವ ಸಿದ್ದತೆಗಳನ್ನು ಡಾ.ಶಿವಮೂರ್ತಿ ಮುರುಘಾಶರಣರು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶರಣರು, ಉತ್ಸವವನ್ನು ಅತ್ಯಂತ ವಿಜೃಂಬನೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಶ್ರೀಮಠ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದೆ ಎಂದರು

     ಐತಿಹಾಸಿಕ ಶ್ರೀಮುರುಘಾಮಠದ ವಿಶೇಷ ಆಚರಣೆ ಶರಣ ಸಂಸ್ಕೃತಿ ಉತ್ಸವ ಈಗ್ಗೆ ಸುಮಾರು 30ವರ್ಷಗಳ ಹಿಂದೆ ವಿಜಯದಶಮಿ ದಸರಾ ಮಹೋತ್ಸವವನ್ನಾಗಿ ಆಚರಿಸಲಾಗುತ್ತಿತ್ತು. ನಂತರದಲ್ಲಿ ಹೊಸ ರೂಪವನ್ನು ನೀಡಿ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಶರಣಸಂಸ್ಕøತಿ ಉತ್ಸವವನ್ನಾಗಿ ಸರ್ವ ಧರ್ಮದವರನ್ನು ಸರ್ವ ಜನಾಂಗದವರನ್ನು ಸಮಾಜದ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಈ ಉತ್ಸವವನ್ನು ಆಚರಿಸುತ್ತಿದ್ದೇವೆ ಎಂದರು

     ಅಲ್ಲಮಪ್ರಭುದೇವರು ಶೂನ್ಯಪೀಠದ ಪ್ರಥಮಾಧ್ಯಕ್ಷರಾಗಿದ್ದರು. ಅಲ್ಲಮ ಸಂಪ್ರದಾಯದ ಮಠ ಚಲಿಸುವ ಮಠವಾಗಿತ್ತು. ಮುರಿಗೆ ಸ್ವಾಮಿಗಳು ಈ ಪ್ರಾಂತ್ಯಕ್ಕೆ ಬಂದಾಗ ಭರಮಣ್ಣನಾಯಕ ಅವರನ್ನು ತಮ್ಮ ಗುರುಗಳಾಗಿ ಸ್ವೀಕರಿಸಿ ಇಲ್ಲಿ ಮಠ ಸ್ಥಾಪಿಸಲು ಸಹಕರಿಸಿದರು. ಆಗಿನಿಂದ ಶೂನ್ಯಪೀಠದ ಈ ಮುರುಘಾ ಪರಂಪರೆಯ ಮಠ ಇಲ್ಲೇ ಉಳಿದಿದೆ. ಶೂನ್ಯಪೀಠ ಪರಂಪರೆ ಮತ್ತು ಮುರುಘಾ ಪರಂಪರೆಯ ಶರಣಸಂಸ್ಕೃತಿ ಉತ್ಸವವು ಶ್ರೀಮಠದ ನೆನಪಿನಲ್ಲಿ ಸದಾ ಉಳಿಯುವ ಸಾಂಸ್ಕøತಿಕ ಮಹೋತ್ಸವವಾಗಿದೆ ಎಂದರು

    ಈ ಬಾರಿ ವಿಶೇಷವಾಗಿ ಈಶಾನ್ಯ ರಾಜ್ಯಗಳ ಕಲಾ ಪ್ರದರ್ಶನ, ದಕ್ಷಿಣವಲಯ ಸಾಂಸ್ಕøತಿಕ ತಂಜಾವೂರಿನ ಕಲಾವಿದರಿಂದ ವಿಶೇಷ ಜಾನಪದ ಕಲೆಗಳ ಪ್ರದರ್ಶನ, ಅಂತಾರಾಷ್ಟ್ರೀಯ ಮಟ್ಟದ ಅಕ್ರೋಬಾಟಿಕ್ ಪ್ರದರ್ಶನ, ಶಬರಿ ಗ್ಲೋ ಆರ್ಟ್, ಎಲ್‍ಇಡಿ ಆಕ್ಟ್, ಬ್ಯಾಲೆನ್ಸ್ ಆಕ್ಟ್, ಚಂಡೆ ಪ್ರದರ್ಶನ ಹಾಗು ಬಾಹುಬಲಿ ನೃತ್ಯ ಪ್ರದರ್ಶನ ಇನ್ನು ಮುಂತಾದವು ಅತ್ಯಂತ ರೋಮಾಂಚನಕಾರಿ ಮತ್ತು ಮನರಂಜನಾಕಾರಿಯಾಗಿವೆ.

      ಉತ್ತರ ಕರ್ನಾಟಕದಿಂದ 15 ಬಸ್ಸುಗಳಲ್ಲಿ 8 ದಿನಗಳ ಸಂಪೂರ್ಣ ಕಾರ್ಯಕ್ರಮ ವೀಕ್ಷಣೆಗೆ ಜನ ಬರಲಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಇನ್ನು ಹಲವಾರು ರಾಜ್ಯಗಳಿಂದ ಅತಿಥಿಗಳು ಮತ್ತು ಭಕ್ತರು ಆಗಮಿಸುವರು.

    ಜಮುರಾ ಕಪ್ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಬಾಸ್ಕೆಟ್‍ಬಾಲ್ ಕ್ರೀಡಾಕೂಟ, ಸ್ವಚ್ಛತ ಅಭಿಯಾನ, ಸಹಜ ಶಿವಯೋಗ, ಕೈಗಾರಿಕಾ ಮತ್ತು ಕೃಷಿ ಮೇಳ ಹಾಗು ವಸ್ತುಪ್ರದರ್ಶನ, ಸಾಹಸಿಗರ ಸಮಾವೇಶ, ಮುರುಘಾಶ್ರೀ ಮತ್ತು ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ ಪ್ರದಾನ, ಬಸವತತ್ತ್ವ ಸಮಾವೇಶ, ಮಕ್ಕಳ ಮೇಳ, ಯುವಜನ ಮೇಳ, ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವ ಜರುಗಲಿವೆ

      ಮಹಿಳಾ ಗೋಷ್ಠಿ, ಭಾವೈಕ್ಯ ಸಮಾವೇಶ ಹಾಗು “ಇಸ್ರೇಲ್ ಮಾದರಿ ಕೃಷಿ ಮತ್ತು ಸ್ಥಳೀಯ ನೀರಾವರಿ ಯೋಜನೆ ಪರಾಮರ್ಶೆ”, “ಮುರುಘಾ ಪರಂಪರೆ ಉಂಟು ಮಾಡಿರುವ ಸಮಜೋಧಾರ್ಮಿಕ ಪರಿವರ್ತನೆಗಳು”, “ಹೊಸ ಶಿಕ್ಷಣ ನೀತಿ”, “ಗಾಂಧಿವಾದದ ಪ್ರಸ್ತುತತೆ”, “ರಾಜಕೀಯ ಅಸ್ಥಿರತೆ ಮತ್ತು ಸಂವಿಧಾನಿಕ ಬದ್ಧತೆ”, “ಬಸವತತ್ತ್ವ ವಿಶ್ವತತ್ತ್ವ”, “ಯುವಜನರ ಮುಂದಿನ ಸವಾಲುಗಳು ಮತ್ತು ಮಾರ್ಗೋಪಾಯಗಳು”, “ಜಗತ್ತು ಎತ್ತ ಸಾಗುತ್ತಿದೆ? ಸಮಕಾಲೀನ ಚಿಂತನೆ” ಮುಂತಾದ ಪ್ರಸ್ತುತ ಸಮಸ್ಯೆಗಳನ್ನು ಕುರಿತ ವಿಚಾರಸಂಕಿರಣ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಮೂರ್ತಿ ಶರಣರು ಹೇಳಿದರು.

      ಈ ಸಂದರ್ಭದಲ್ಲಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಹನುಮಲಿ ಷಣ್ಮುಖಪ್ಪ, ಪಟೇಲ್ ಶಿವಕುಮಾರ್, ಡಿ.ಎಸ್. ಮಲ್ಲಿಕಾರ್ಜುನ್, ಶ್ರೀನಿವಾಸ್, ಎಸ್.ಜೆ.ಎಂ. ವಿದ್ಯಾಪೀಠ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಮಹಡಿ ಶಿವಮೂರ್ತಿ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link