ತಿಪಟೂರು
ಹನ್ನೇರಡನೆ ಶತಮಾನದ ವಚನಕಾರರಲ್ಲಿದ್ದ ಧ್ಯಾನ, ತಪ, ಏಕಾಗ್ರತೆ, ಕಾಯಕ ನಿಷ್ಠೆಗಳು ಇಂದಿನ ಯುವ ಸಮುದಾಯದಲ್ಲಿ ಕಣ್ಮರೆಯಾಗುತ್ತಿರುವುದರಿಂದ ನೆಮ್ಮದಿ ಮತ್ತು ಜ್ಞಾನ ಸಂಪಾದನೆಗೆ ಭಂಗ ಬಂದಿದೆ ಎಂದು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಗುರುಕುಲಾನಂದಾಶ್ರಮದಲ್ಲಿ 273ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿಯ ಶ್ರೀ ಗುರುಕುಲ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ನಿವೃತ್ತ ಇಂಜಿನಿಯರ್ ಲಿಂಗೈಕ್ಯ ಎಂ.ಟಿ.ವಿಶ್ವನಾಥಯ್ಯನವರ ದತ್ತಿ ಉಪನ್ಯಾಸದಲ್ಲಿ ಆಶೀರ್ವಚನ ನೀಡುತ್ತಾ ವಚನಕಾರರು ಹಾಗೂ ಶಿವಶರಣರು ಧಾರ್ಮಿಕ, ಆಧ್ಯಾತ್ಮಿಕ ತತ್ವಗಳ ತಳಹದಿಯ ಮೇಲೆ ಬದುಕನ್ನು ರೂಪಿಸಿಕೊಂಡು ಅಧ್ಯಯನಶೀಲರಾದರು.
ಆಚಾರ ವಿಚಾರ ಹಾಗೂ ವೈಚಾರಿಕ ಪ್ರಜ್ಞೆಗಳೊಂದಿಗೆ ಚರ್ಚೆ, ವಿನಿಮಯಗಳನ್ನು ಮಾಡುತ್ತಾ ತಮ್ಮಲ್ಲಿನ ಅನುಭವಗಳನ್ನು ಅನುಭವ ಮಂಟಪದಲ್ಲಿ ಹಂಚಿಕೊಳ್ಳುತ್ತಿದ್ದರು. ಜಾತಿ,ಬೇಧ,ಕಾಯಕದ ತಾರತಮ್ಯವಿಲ್ಲದೆ ಮಹಾಮನೆಯಲ್ಲಿ ಒಂದಾಗಿ ಬದುಕಿಗೆ ಬೇಕಾದ ಮೌಲ್ಯಗಳನ್ನು ಕುರಿತು ವಚನಗಳ ರಚನೆಯ ಮೂಲಕ ಸಾಮಾಜಿಕ ಸೇವೆಗೆ ಹಾಗೂ ಜನರಿಗೆ ಸಮಸ್ಯೆಗಳ ಅರಿವು ಮೂಡಿಸಿದರು. ಬದುಕಿನಲ್ಲಿ ಇರಬೇಕಾದದ್ದು ಶ್ರದ್ಧಾ ಪೂರ್ವಕವಾದ ಕಾಯಕವೇ ಹೊರೆತು ಆಡಂಬರವಲ್ಲ.
ಅಂತರಂಗ ಮತ್ತು ಬಹಿರಂಗಗಳೆರಡು ಪರಿಶುದ್ಧವಾಗಿ ಪರಮಾತ್ಮನ ಧ್ಯಾನದಲ್ಲಿ ಮುಳುಗಿ ಕಾಯಕವೆ ಕೈಲಾಸ ಎಂಬ ತತ್ವಕ್ಕೆ ಅರ್ಥವನ್ನು ತಂದುಕೊಟ್ಟರು. ಇವರುಗಳ ಮಾರ್ಗದರ್ಶದಲ್ಲಿ ನೂರಾರು ಜನ ಶಿವ ಶರಣರು ಸಾರ್ಥಕ ಬದುಕನ್ನು ಕಂಡುಕೊಂಡಿದ್ದಾರೆ. ಅದ್ದರಿಂದ ಇಂದಿನ ಮಕ್ಕಳು ಧ್ಯಾನ, ಏಕಾಗ್ರತೆಗಳನ್ನು ಮೈಗೂಡಿಸಿಕೊಂಡು ಅಭ್ಯಾಸದಲ್ಲಿ ಹಿಂದೆ ಬಿಳದೇ ಅಪಾರ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು.
ತಮ್ಮಲ್ಲಿನ ಹಿಂಜರಿಕೆ, ಭಯದ ಭಾವನೆಗಳನ್ನು ಬಿಟ್ಟು ಅನುಭಾವ ವಾಣಿಗಳನ್ನು ಆಲಿಸಿ ಸುಂದರವಾದ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಇಂತಹ ಸತ್ಸಂಗದಲ್ಲಿ ಭಾಗಿಗಗಳಾಗಿ ಕೀರ್ತಿ ಯಶಸ್ಸನ್ನು ಗಳಿಸಬೇಕೆಂದು ತಿಳಿಸಿದರು.
ತುಮಕೂರಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸೋ.ಬ.ಜಗದೀಶ ಮಾತನಾಡಿ ಶಿವ ಶರಣ ಮನಸ್ಸು ಬೆಳದಿಂಗಳಿನಷ್ಟೆ ಪರಿಶುದ್ಧವಾದದ್ದು. ಅವರ ಕಾಯಕ ಸೇರಿದಂತೆ ನಡೆನುಡಿಗಳು ಕೂಡ ತೆರೆದಿಟ್ಟ ಪುಸ್ತಕಗಳಂತೆ ಇದ್ದವು. ಇಂತಹ ಕಾಯಕ ಯೋಗಿಗಳೆಲ್ಲಾ ಬಸವಣ್ಣನವರ ಮಹಾಮನೆಯಲ್ಲಿ ಸಂಗಮವಾಗಿ, ಅನುಭವ ಮಂಟಪದಲ್ಲಿ ಅನುಭವ, ಅನಿಸಿಕೆ, ಅಭಿಪ್ರಾಯ, ಸಾಮಾಜಿಕ ಸಮಸ್ಯೆಗಳ ಚಿಂತನ ಮಂಥನ ನಡೆಸಿ ಸರಳ ನುಡಿಗಳಲ್ಲಿ ವಚನಗಳಿಗೆ ರೂಪಕೊಟ್ಟರು.
ಧರ್ಮವೆಂಬುದು ಮನುಷ್ಯನ ನೆಮ್ಮದಿಯ ಬದುಕಿಗೆ ಬುನಾದಿಯಾಗಬೇಕು. ಅಲ್ಲಿ ಆಧ್ಯಾತ್ಮಿಕ, ಪಾರಮಾರ್ಥಿಕ, ಲೌಕಿಕ, ವೈಚಾರಿಕ ಸತ್ಯ ಸಂಗತಿಗಳಿಗೆ ಸಂಬಂಧಿಸಿದ ಚರ್ಚೆ ನಡೆಸಿ ಅಂತರಂಗದ ಭಾವನೆಗಳಿಗೆ ಬೆಳಕು ನೀಡುತ್ತಾ ಕಾಯವನ್ನು ಪರಿಶುದ್ದವಾಗಿಸಿಕೊಳ್ಳಬೇಕು. ಭಕ್ತಿ, ಜ್ಞಾನ, ಯೋಗ, ವೈರಾಗ್ಯ ಮತ್ತು ಜಂಗಮ ತತ್ವಕ್ಕೆ ಮಾನವೀಯ ಮೌಲ್ಯಗಳಿಗೆ ಶಕ್ತಿ ತುಂಬುವ ಕಾಯಕದಲ್ಲಿ ತೊಡಗಿ ಸಮಾಜದ ಹಿತವನ್ನು ಕಾಪಾಡಿದ ಶಿವಶರಣರ ಸರಳ ಶಿಸ್ತಿನ ಜೀವನದಿಂದ, ಉನ್ನತವಾದ ಆಲೋಚನೆಗಳಿಂದ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿದರು.
ಅಹಿಂಸೆ, ಅಸಮಾನತೆಗಳನ್ನು ಹೊಗಲಾಡಿಸಿ ಸ್ತ್ರೀ ಸ್ವಾತಂತ್ರ್ಯಕ್ಕೆ ಗೌರವಕೊಟ್ಟು ಆತ್ಮಾಭಿಮಾನವನ್ನು ಹೆಚ್ಚಿಸಿದರು. ಅದ್ದರಿಂದ ಇಂದಿನ ಯುವ ಸಮಾಜ ಸಮಯವನ್ನು ವ್ಯರ್ಥ ಮಾಡದೆ ಶರಣರ ಜೀವನ ಚರಿತ್ರೆ, ಧರ್ಮ, ಸಂಸ್ಕøತಿ, ಕಾಯಕತತ್ವ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಂಸ್ಕಾರವಂತರಾಗಿ ಕೀರ್ತಿ, ಗೌರವಗಳೊಂದಗೆ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುರುಕುಲಾನಂದಾಶ್ರಮದ ಸಿಇಓ ಹರಿಪ್ರಸಾದ್, ಪ್ರಾಂಶುಪಾಲ ಬಿ.ನಾಗರಾಜು, ಗುರುಕುಲ ಆಂಗ್ಲ ಪ್ರೌಢಶಾಲೆಯ ಮುಖ್ಯಶಿಕ್ಷಕ ಚನ್ನಬಸವಯ್ಯ, ನಿವೃತ್ತ ಮುಖ್ಯಶಿಕ್ಷಕ ಎಂ.ಜಿ.ಮಹಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ, ಪ್ರಾಂಶುಪಾಲ ಶಿವಕುಮಾರ್, ಡಾ.ಎಲ್.ಎಂ.ವೆಂಕಟೇಶ್, ಚಿಕ್ಕಹೆಗ್ಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.