ಶಾಸಕರ ಲಾಬಿ: ನಾಯಕರಿಗೆ ತಲೆನೋವು

ತುಮಕೂರು:

    ಇಂದು ಬೆಳಗ್ಗೆ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ ರಾಜ್ಯದಲ್ಲಿರುವ ಶೋಕಾಚರಣೆ ಹಿನ್ನೆಲೆಯಲ್ಲಿ ಜೂ.14ಕ್ಕೆ ಮುಂದೂಡಲ್ಪಟ್ಟಿದೆ. ಈ ನಡುವೆ ಉಭಯ ಪಕ್ಷಗಳಲ್ಲಿ ಸಚಿವ ಗಿರಿಗೆ ಲಾಬಿ ಪ್ರಾರಂಭವಾಗಿದೆ.

    ಸಚಿವ ಸಂಪುಟ ವಿಸ್ತರಣೆ ಕೈಬಿಟ್ಟು ಸಂಪುಟ ಪುನರ್ರಚಿಸುವಂತೆ ಸಚಿವಾಕಾಂಕ್ಷಿ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ತಮಗೆ ಸಂಪುಟದಲ್ಲಿ ಅವಕಾಶ ಸಿಗುವುದಿಲ್ಲ ಎಂದರಿತವರು ತೆರೆಮರೆಯಲ್ಲಿ ತಮ್ಮ ಆಟಗಳನ್ನು ಮುಂದುವರೆಸಿದ್ದಾರೆ. ಇದು ದೋಸ್ತಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಎಲ್ಲ ವಿದ್ಯಮಾನಗಳನ್ನು ಬಿಜೆಪಿ ಮೌನವಾಗಿಯೇ ನೋಡುತ್ತಿದೆ.

     ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕರಿಬ್ಬರಿಗೆ ಮಾತ್ರವೇ ಸಚಿವ ಸ್ಥಾನ ನೀಡಲು ನಿರ್ಧರಿಸಿರುವುದು ಎರಡೂ ಪಕ್ಷಗಳಲ್ಲಿ ನಿಷ್ಠ ಶಾಸಕರನ್ನು ಕೆರಳಿಸಿದೆ. ವಿಸ್ತರಣೆಗಿಂತ ಸಂಪುಟ ಪುನರ್ರಚಿಸಿ ಎಂಬ ಬೇಡಿಕೆಯನ್ನು ಕೆಲವರು ಮುಂದಿಟ್ಟಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರು ಹಲವು ಮಂದಿ. ತಮ್ಮದೇ ಆದ ರೀತಿಯಲ್ಲಿ, ಧಾಟಿಯಲ್ಲಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಓಡಾಡುತ್ತಿದ್ದರು. ತಮಗೆ ಸ್ಥಾನ ಸಿಗುವುದು ಕಷ್ಟ ಎಂಬ ಅರಿವಾಗುತ್ತಿದ್ದಂತೆಯೇ ವಿಸ್ತರಣೆಯೇ ಬೇಡ ಎನ್ನತೊಡಗಿದ್ದಾರೆ. ಸಚಿವ ಸ್ಥಾನ ಕೈತಪ್ಪಿದರೆ ನಮ್ಮ ಮುಂದಿನ ನಡೆಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ಕೆಲವರು ನೀಡತೊಡಗಿದ್ದಾರೆ.

      ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‍ನಿಂದ ಐವರು, ಜೆಡಿಎಸ್‍ನಿಂದ ಮೂವರು ಸಚಿವರ ರಾಜಿನಾಮೆ ಕೊಡಿಸಿ ಖಾಲಿ ಇರುವ ಮೂರು ಸ್ಥಾನಗಳೂ ಸೇರಿದಂತೆ 10 ರಿಂದ 12 ಮಂದಿ ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಸರ್ಕಾರವನ್ನು ಸುಭದ್ರಗೊಳಿಸುವ ಲೆಕ್ಕಾಚಾರ ಮುಖ್ಯಮಂತ್ರಿಯವರದ್ದಾಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರ್ರಚನೆ ಬೇಡ, ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿ ಸಂಪುಟ ವಿಸ್ತರಿಸಿ ಎಂದು ಸಲಹೆ ಮಾಡಿದ್ದರು.

       ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಯಕರ ಸಲಹೆಯಂತೆ ಸಂಪುಟ ವಿಸ್ತರಣೆಗೆ ತೀರ್ಮಾನಿಸಿ ರಾಜ್ಯಪಾಲರ ಜೊತೆ ಚರ್ಚಿಸಿ ಮುಹೂರ್ತ ನಿಗದಿ ಮಾಡಿದ್ದರು. ಎಲ್ಲವೂ ಸರಿಯಾಗಿ ನಡೆದಿದ್ದರೆ ಇಂದು ಬೆಳಗ್ಗೆ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅಂದರೆ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಇರುವ ಕಾರಣ ಜೂ.14 ರಂದು ಈ ಪ್ರಕ್ರಿಯೆ ನಡೆಯಲಿದೆ. ಇರುವ ಎರಡು ದಿನಗಳ ಅವಧಿಯಲ್ಲಿ ತಮ್ಮ ಆಟ ಇನ್ನೂ ಮುಂದುವರೆಸಬಹುದು ಎಂದುಕೊಂಡಿರುವ ಕೆಲವರು, ತಮ್ಮ ಗಾಡ್ ಫಾದರ್‍ಗಳ ಮೂಲಕ ಒತ್ತಡ ಹೇರುವ ತಂತ್ರವನ್ನು ಮುಂದುವರೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link