ಕುಣಿಗಲ್
ತಾಲ್ಲೂಕಿನ ಗೊಟ್ಟಿಕೆರೆ ಗ್ರಾಮದ ಅರಳೀಕಟ್ಟೆ ಬಳಿ ನಡೆದ ಅಧಿಕಾರಿಗಳು ಕಾರ್ಖಾನೆ ಕಾರ್ಮಿಕರು ಮತ್ತು ರೈತರ ಸಂಧಾನ ಸಭೆ ಶಾಸಕ ಹೆಚ್.ಡಿ.ರಂಗನಾಥ್ ನೇತೃತ್ವದಲ್ಲಿ ನಡೆಯಿತು. ರೈತರು ಕಾರ್ಖಾನೆಯವರು ಕಲ್ಮಶದ ನೀರು ಹೊರಗೆ ಬಿಡುತ್ತಿದ್ದು ಮಾಮೂಲಿಯಾಗಿತ್ತು.
ಆದರೆ ಈ ಬಾರಿ ಅವರು ನೇರವಾಗಿ ರೈತರ ಹೊಲಗದ್ದೆಗಳಿಗೆ ಅಪಾಯಕಾರಿ ರಾಸಾಯನಿಕ ತ್ಯಾಜ್ಯವನ್ನು ಬಿಟ್ಟ ಪರಿಣಾಮವಾಗಿ ಆ ಪ್ರದೇಶದಲ್ಲಿ ಮುಂದಿನ 5 ವರ್ಷ ಬೆಳೆ ನಷ್ಟ ಉಂಟಾಗಲಿದೆ. ನಮಗೆ ಪರಿಹಾರ ನೀಡದೆ ಕಾರ್ಖಾನೆಯವರು ಇರುವುದು ರೈತ ವಿರೋಧಿ ನೀತಿ ಎಂದು ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಡಾ|| ಹೆಚ್.ಡಿ.ರಂಗನಾಥ್ ಮಾತನಾಡಿ ನನಗೆ ನನ್ನ ರೈತರ ಹಿತ ಮುಖ್ಯವಾಗಿದೆ. ಈ ವಿಚಾರವಾಗಿ ರಾಜಿ ಇಲ್ಲ.ಕಾರ್ಖಾನೆಯಲ್ಲಿ ದುಡಿಯುತ್ತಿರುವುದು ನಮ್ಮವರು, ಭೂಮಿಯಲ್ಲಿ ಭತ್ತದ ಬೆಳೆ ಕಳೆದುಕೊಂಡವರು ನಮ್ಮವರು ಇಬ್ಬರಿಗೂ ನ್ಯಾಯ ದೊರಕಿಸಿ ಕೊಡಬೇಕಾಗಿರುವುದು ನನ್ನ ಕರ್ತವ್ಯ. ಅದಕ್ಕಾಗಿ ನಾನು ಎಲ್ಲಾ ರೀತಿಯ ಹೋರಾಟಗಳಿಗೆ ಸಿದ್ದನಿದ್ದೇನೆ ಎಂದು ಎಚ್ಚರಿಸಿದರು.
ಪ್ರತಿ ಎಕೆರೆಗೆ ಒಂದು ಲಕ್ಷ ಪರಿಹಾರ ನೀಡಿದರೆ ಸದ್ಯಕ್ಕೆ ರೈತರ ಸಮಸ್ಯೆ ಬಗೆಹರಿಯುತ್ತದೆ ಎಂದು ಒತ್ತಾಯಿಸಿದಾಗ ಕಂಪನಿಯ ಸಾರ್ವಜನಿಕ ಅಧಿಕಾರಿಯಾದ ಗಂಗಾಧರಮೂರ್ತಿ ನೀವು ಕೇಳಿದಷ್ಟು ಪರಿಹಾರವನ್ನು ನೀಡಲು ನಮ್ಮಿಂದ ಸಾಧ್ಯವಿಲ್ಲ ತಹಸೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳು ನೀಡುವ ನಷ್ಟದ ಪ್ರಮಾಣವನ್ನು ನಾವು ಭರಿಸಲು ಸಾಧ್ಯ ಎಂದಾಗ ಆಕ್ರೋಶಗೊಂಡ ರೈತರು ನಮ್ಮವರನ್ನು ಕಾರ್ಮಿಕರಾಗಿ ದುಡಿಸಿಕೊಂಡು ನಮ್ಮ ರೈತರ ಭೂಮಿಗೆ ವಿಷದ ನೀರು ಬಿಟ್ಟು ನಮಗೆ ಅನ್ಯಾಯ ಮಾಡಿದಾಗ ಇಲ್ಲದ ಕಾನೂನು ಪರಿಹಾರ ನೀಡುವಾಗ ಬಂದಿದೆ. ನೀವು ಸರಿಯಾದ ಪರಿಹಾರ ನೀಡದಿದ್ದರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಶಾಸಕ ರಂಗನಾಥ್ ತಹಸೀಲ್ದಾರ್ ಎಸ್.ನಾಗರಾಜ್‍ರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ನಂತರ ಕಾರ್ಖಾನೆ ಬಳಿ ತೆರಳಿ ಸಂಬಂಧಿಸಿದ ರೈತರೊಂದಿಗೆ ಮಾತುಕತೆಗೆ ಮುಂದಾದರು.
ಕಂಪನಿಯವರು ರೈತರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯ ಹೊಂದಬೇಕು. ಪರಿಸರ ಹಾಗೂ ಬೆಳೆಗಳಿಗೆ ಉಂಟಾಗುವ ತೊಂದರೆಗಳಿಗೆ ತಕ್ಷಣ ಸ್ಪಂದಿಸಬೇಕು.
ಅದಕ್ಕಾಗಿ ಸಮಿತಿಯೊಂದನ್ನು ರಚಿಸಿಬೇಕೆಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಂಪೇಗೌಡ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕರಾದ ದೇವರಾಜ ರೆಡ್ಡಿ , ಕೆಂಚೇಗೌಡ ಹೊಸಮನಿ , ಮುಖಂಡರಾದ ಮುರುಳಿ , ಕೆಂಪೀರೇಗೌಡ , ಅಜೀಜ್ , ಗಂಗಶಾನಯ್ಯ , ಕೃಷ್ಣೇಗೌಡ , ಶಿವಕುಮಾರ್ , ಪಾಪಣ್ಣ , ರೇಣುಕೇಶ್ , ಶಿವಣ್ಣ ಸೇರಿದಂತೆ ಇತರರು ಇದ್ದರು.