ಮುಖ್ಯಮಂತ್ರಿಗಳ ಆದೇಶಕ್ಕೆ ಮತ್ತೆ ತಡೆಯೊಡ್ಡಿದ ಶಶಿಕಲಾ ಜೊಲ್ಲೆ..!

ಬೆಂಗಳೂರು

      ಮಠಗಳಿಗೆ ಅನ್ನ ದಾಸೋಹ ಯೋಜನೆ ಸ್ಥಗಿತಗೊಳಿಸುವ ಮೂಲಕ ವಿವಾದಕ್ಕೆ ಕಾರಣವಾಗಿ ಆಹಾರ ಖಾತೆ ಕಳೆದುಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಇದೀಗ ಅಂಥದ್ದೆ ಮತ್ತೊಂದು ವಿವಾದಾತ್ಮಕ ಆದೇಶ ಹೊರಡಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಸಂಬಂಧಿಸಿದಂತೆ ಮಾಡಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಬಡ್ತಿ ಹೊಂದಿದ್ದವರಿಗೆ ಸ್ಥಳ ನಿಯೋಜನೆಗೆ ಸೂಚನೆ ಕೊಟ್ಟಿದ್ದರು.

    ಆದರೆ ಅದನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ತಡೆ ಹಿಡಿದಿದ್ದಾರೆ. ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಬಡ್ತಿ ಹೊಂದಿ ಸ್ಥಳ ನಿಯೋಜನೆಗೊಂಡಿದ್ದ 274 ಹಿರಿಯ ಮೇಲ್ವಿಚಾರಕರು ಇದೀಗ ಅತಂತ್ರರಾಗಿದ್ದಾರೆ.ಕರ್ನಾಟಕ ಲೋಕಸೇವಾ ಆಯೋಗದಿಂದ 519 ಮೇಲ್ವಿಚಾರಕೀಯ ನೇಮಕ ಮಾಡಲಾಗಿತ್ತು. ನಂತರ 274 ಮೇಲ್ವಿಚಾರಕೀಯರಿಗೆ ಪಾರದರ್ಶಕವಾಗಿ ಫೆಬ್ರವರಿ 12 ಹಾಗೂ 13 ರಂದು ಕೌನ್ಸೆಲಿಂಗ್ ಮಾಡಿ, ಫೆಬ್ರವರಿ 14 ರಂದು ಹಿರಿಯ ಮೇಲ್ವಿಚಾರಕೀಯರು ಎಂದು ಬಡ್ತಿ ಸಹಿತ ಸ್ಥಳ ನಿಯೋಜನೆ ಮಾಡಲಾಗಿತ್ತು. ಇದೀಗ ಸ್ಥಳ ನಿಯೋಜನೆ ಮಾಡಿದ್ದ ಆ ಆದೇಶವನ್ನು ತಡೆಹಿಡಿಯುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ವಿವಾದಕ್ಕೆ ಕಾರಣವಾಗಿದ್ದಾರೆ.

    ಇದೇ 2020 ಫೆಬ್ರವರಿ 14 ರಂದು ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ನೀಡಿ, ಸ್ಥಳ ನಿಯುಕ್ತಿಗೊಳಿಸಿ ಹೊರಡಿಸಿರುವ ಆದೇಶವನ್ನು ತತಕ್ಷಣವೇ ತಡೆಹಿಡಿದು, ಕಡತವನ್ನು ನನ್ನ ಅನುಮೋದನೆಗೆ ಕಳಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಆದೇಶ ಮಾಡಿದ್ದಾರೆ.

    ಈ ಮೊದಲೇ 2020 ಜನವರಿ 7 ರಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಆದೇಶವೊಂದನ್ನು ಹೊರಡಿಸಿದ್ದು, ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗದ ವರ್ಗಾವಣೆ, ನಿಯೋಜನೆ ಅಥವಾ ಸ್ಥಳ ನಿಯುಕ್ತಿಗೆ ಮಾಡುವ ಮೊದಲು ಅನುಮತಿ ಪಡೆಯಲೇಬೇಕೆಂದು ಸೂಚಿಸಿದ್ದರು. ಹೀಗಾಗಿ ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ಮಾಡಿದ್ದ ಸ್ಥಳನಿಯೋಜನೆ ತಡೆಹಿಡಿದಿದ್ದಾರೆ, ಆ ಮೂಲಕ ಸ್ಥಳ ನಿಯೋಜನೆಗೊಂಡಿದ್ದ ಎಲ್ಲ 274 ಹಿರಿಯ ಮೇಲ್ವಿಚಾರಕರು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿ ಅನುಮತಿ ಪಡೆಯಬೇಕಾಗಿದೆ.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗುವಂತೆ 274 ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಮೇಲ್ವಿಚಾರಕರಿಗೆ ಮುಂಬಡ್ತಿ ಕೊಟ್ಟು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡುವಂತೆ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದರು. ಅದರಂತೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿದ್ದ ಇಲಾಖೆ ನಿರ್ದೇಶಕರು ಎಲ್ಲ 274 ಮೇಲ್ವಿಚಾರಕೀಯರಿಗೆ ಹಿರಿಯ ಮೇಲ್ವಿಚಾರಕರು ಎಂದು ಮುಂಬಡ್ತಿ ಕೊಟ್ಟು ಹೊಸದಾಗಿ ಆಯ್ಕೆಯಾಗಿದ್ದ 274 ಮೇಲ್ವಿಚಾರಕೀಯರನ್ನು ನೇಮಕ ಮಾಡಿದ್ದರು. ಇದೀಗ ಆ ಆದೇಶವನ್ನು ತಡೆಹಿಡಿಯಲು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ಕೊಟ್ಟಿದ್ದರಿಂದ ಆ ಕಡೆ ಮುಂಬಡ್ತಿಯೂ ಇಲ್ಲದೆ, ಈ ಕಡೆ ಹಿಂದಿನ ಮೇಲ್ವಿಚಾರಕಿ ಹುದ್ದೆಯೂ ಇಲ್ಲದೆ ಅತಂತ್ರರಾಗಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ