ಸಬ್‍ರಿಜಿಸ್ಟ್ರಾರ್ ಕಚೇರಿ ಎದುರಿನ ಜಾಗದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಶೆಡ್-ಕಟ್ಟಡ

ತುಮಕೂರು
     ತುಮಕೂರು ನಗರದ ಸ್ವಾತಂತ್ರೃ ಚೌಕದ ಬಳಿ ಇರುವ ಸಬ್‍ರಿಜಿಸ್ಟ್ರಾರ್ ಕಚೇರಿ ಮುಂಭಾಗದ ಜಾಗದಲ್ಲಿ ಟೈಪಿಸ್ಟ್‍ಗಳು ಮತ್ತು ಲೇಖನ ಸಾಮಗ್ರಿ ಮಾರಾಟಗಾರರಿಗೆ ಅನುಕೂಲವಾಗುವಂತೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಶಾಶ್ವತ ಶೆಡ್/ಕಟ್ಟಡ ನಿರ್ಮಿಸಬಹುದೆಂಬ ಆಲೋಚನೆಯನ್ನು ತುಮಕೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯು ಮುಂದಿಟ್ಟಿದೆ.
      ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿರುವ ಸ್ಥಾಯಿ ಸಮಿತಿ ಸಭೆಯಲ್ಲಿ ಇಂತಹುದೊಂದು ತೀರ್ಮಾನಕ್ಕೆ ಬರಲಾಗಿದೆ.
      ಈ ಸ್ಥಳವು ನಗರದ 16 ನೇ ವಾರ್ಡ್ ವ್ಯಾಪ್ತಿಗೆ ಒಳಪಡಲಿದೆ. ಇಲ್ಲಿ ಅನೇಕ ಜನರು ಟೈಪ್ ಮಾಡುವವರಿದ್ದಾರೆ, ಲೇಖನ ಸಾಮಗ್ರಿ ಮಾರಾಟ ಮಾಡುವವರೂ ಇದ್ದಾರೆ. ಅದನ್ನೇ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಅಲ್ಲದೆ ಸಬ್‍ರಿಜಿಸ್ಟ್ರಾರ್ ಕಚೇರಿಗೆ, ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೂ ಇವರ ಸೇವೆಯ ಅನಿವಾರ್ಯತೆ ಇದೆ. ಹೀಗಾಗಿ ಇವರ ಕಾರ್ಯಕ್ಕೆ ಅನುಕೂಲವಾಗುವಂತೆ ಹಾಗೂ ಪಾಲಿಕೆಗೂ ಆದಾಯ ಮೂಲವಾಗುವಂತೆ ಮಾಡುವ ಉದ್ದೇಶದಿಂದ ಇಲ್ಲಿ ಸ್ಮಾರ್ಟ್ ಸಿಟಿ ಕಂಪನಿ ಮೂಲಕ ಶಾಶ್ವತವಾದ ಶೆಟ್/ಕಟ್ಟಡವನ್ನು ನಿರ್ಮಿಸಬೇಕು. ಬಳಿಕ ಇವುಗಳನ್ನು ನೆಲಬಾಡಿಗೆ ಮೂಲಕ ವಿಲೇವಾರಿ ಮಾಡಬೇಕು ಎಂದು ಚರ್ಚಿಸಿ, ಅದೇ ರೀತಿಯ ನಿರ್ಣಯವನ್ನು ಸ್ವೀಕರಿಸಲಾಗಿದೆ. ಈ ವಿಷಯವು ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡನೆಯಾಗಲಿದ್ದು, ಆ ಸಭೆಯಲ್ಲಿ ಪಾಲಿಕೆಯ ಮುಂದಿನ ನಿಲುವು ಪ್ರಕಟವಾಗಲಿದೆ.
     ದೀರ್ಘಕಾಲದಿಂದ ಈ ಸ್ಥಳವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಹಿಂದಿನ ನಗರಸಭೆಯಿದ್ದಾಗ ಸಹ ಚರ್ಚೆಗೆ ಬಂದಿತ್ತು. ಒಂದು ಸಂದರ್ಭದಲ್ಲಿ ಇಲ್ಲಿನ ಟೈಪಿಸ್ಟ್‍ಗಳಿಗೆ ಟ್ರೇಡ್ ಲೈಸೆನ್ಸ್ ನೀಡುವ ವಿಷಯವೂ ಅಜೆಂಡಾಗೆ ಬಂದಿತ್ತು. ಆದರೆ ಸಾಕಷ್ಟು ಚರ್ಚೆ ನಡೆದು, ಯಾವುದೇ ತೀರ್ಮಾನಕ್ಕೆ ಬರಲಾಗಿರಲಿಲ್ಲ. ಇದೀಗ ಮತ್ತೊಮ್ಮೆ ಈ ವಿಚಾರವು ಸ್ಥಾಯಿ ಸಮಿತಿ ಸಭೆಯಲ್ಲಿ ಮಂಡನೆಗೊಂಡು ಚರ್ಚೆಯಾಗಿ ಇಂತಹುದೊಂದು ತೀರ್ಮಾನ ಕೈಗೊಳ್ಳಲಾಗಿದೆ. ಪಾಲಿಕೆಯ ಮುಂದಿನ ತೀರ್ಮಾನವನ್ನು ಕಾದು ನೋಡಬೇಕಾಗಿದೆ
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap