ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್
ವಾಹನಗಳು ಸಂಚರಿಸುವಾಗ ಧೂಳು ಮೇಲೇಳುತ್ತದೆ. ಇಕ್ಕೆಲಗಳಲ್ಲಿ ಉದ್ದಕ್ಕೂ ಮಣ್ಣಿನ ರಾಶಿ ತುಂಬಿದೆ. ಮಧ್ಯ ಭಾಗದಲ್ಲಿ ಡಿವೈಡರ್ ಮಾದರಿಯಲ್ಲಿ ಅಳವಡಿಸಿರುವ ರಿಫ್ಲೆಕ್ಟರ್ ಉಳ್ಳ ದಿಂಡುಗಳು ಹಾಳಾಗಿವೆ. ಸಂಜೆ ವೇಳೆ ಸೂಕ್ತ ವಿದ್ಯುತ್ ದೀಪಗಳಿಲ್ಲದೆ ಕತ್ತಲು ತುಂಬಿರುತ್ತದೆ. ಮಧ್ಯದಲ್ಲಿ ಕಾಂಕ್ರಿಟ್ ಕಿತ್ತುಕೊಂಡು ಕಂಬಿಗಳು ಕಾಣತೊಡಗಿವೆ. ಇಕ್ಕೆಲಗಳ ಗೋಡೆ ಬಣ್ಣ ಕಳೆದುಕೊಂಡಿದೆ.
ಭಿತ್ತಿಪತ್ರಗಳನ್ನು ಅಂಟಿಸಿ ಗೋಡೆಗಳನ್ನು ವಿರೂಪಗೊಳಿಸಲಾಗಿದೆ. ಎರಡೂ ಕಡೆಯ ಪ್ರವೇಶದ್ವಾರಗಳಲ್ಲಿ ನಾಮಫಲಕ ಗಳಿಲ್ಲ ….-ಇದು ತುಮಕೂರು ನಗರದ ಪ್ರಮುಖ ಸ್ಥಳದಲ್ಲಿರುವ ಶೆಟ್ಟಿಹಳ್ಳಿ ರೈಲ್ವೆ ಅಂಡರ್‍ಪಾಸ್‍ನ ಈಗಿನ ಅವ್ಯವಸ್ಥೆ . ತುಮಕೂರಿನ ಸೋಮೇಶ್ವರಪುರಂ-ಎಸ್.ಐ.ಟಿ. ಭಾಗದಿಂದ ಶೆಟ್ಟಿಹಳ್ಳಿ ಮುಖ್ಯರಸ್ತೆಗೆ ನೇರ ರಸ್ತೆಸಂಪರ್ಕ ಕಲ್ಪಿಸುವ ಸೇತುವೆಯಂತೆ ಈ ಅಂಡರ್‍ಪಾಸ್ ನಿರ್ಮಾಣವಾಗಿದೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಇದನ್ನು ನಿರ್ಮಿಸಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದೆ.
ಮೊದಲಿಗೆ ಅಂಡರ್‍ಪಾಸ್ ನಿರ್ಮಾಣವಾಗಿದ್ದೇ ಒಂದು ಅದ್ಭುತವೆಂಬಂತೆ ಭಾಸವಾಗಿತ್ತು. ಶೆಟ್ಟಿಹಳ್ಳಿ ರೈಲ್ವೇಗೇಟ್‍ನಲ್ಲಿ ದೀರ್ಘಕಾಲ ಕಾದುನಿಲ್ಲಬೇಕಿದ್ದ ದಶಕಗಳ ಸಮಸ್ಯೆಯೊಂದು ಪರಿಹಾರವಾಯಿತೆಂದು ಜನರು ನಿಟ್ಟುಸಿರುಬಿಟ್ಟರು. ಆದರೆ ಮಳೆಗಾಲದಲ್ಲಿ ಹೊಸ ಸಮಸ್ಯೆ ತಲೆಯೆತ್ತಿತು.
ಮಳೆ ಬಂದಾಗಲೆಲ್ಲ ಅಂಡರ್‍ಪಾಸ್ ಒಳ ಭಾಗದಲ್ಲಿ ಈಜುಕೊಳದೋಪಾದಿಯಲ್ಲಿ ನೀರು ಸಂಗ್ರಹಗೊಂಡು ರಸ್ತೆ ಸಂಚಾರ ಬಂದ್ ಆಗಿ ಜನರು ಪರಿತಪಿಸುವ ಹೊಸ ಸಮಸ್ಯೆ ಕಾಡತೊಡಗಿತು. ಅದಕ್ಕೆ ಪರಿಹಾರವಾಗಿ ಇಡೀ ಅಂಡರ್‍ಪಾಸ್‍ಗೆ ಮೇಲ್ಛಾವಣಿ ಅಳವಡಿಸಲಾಯಿತು. ಜೊತೆಗೆ ಮಧ್ಯ ಭಾಗದಲ್ಲಿ ಮಳೆ ನೀರು ಸಂಗ್ರಹಗೊಂಡರೆ ತಕ್ಷಣವೇ ಆ ನೀರನ್ನು ಮೇಲ್ಭಾಗಕ್ಕೆ ಪಂಪ್ ಮಾಡಲು ಸ್ವಯಂಚಾಲಿತ ಮೋಟಾರ್ ಅಳವಡಿಸಲಾಯಿತು. ಇವೆಲ್ಲ ಕ್ರಮಗಳ ಬಳಿಕ, ಆ ಸಮಸ್ಯೆ ಪರಿಹಾರವಾಗಿದೆ. ಆದರೆ ಅದೇ ಹೊತ್ತಿಗೆ ಬೇರೆಯದೇ ಸಮಸ್ಯೆಗಳು ತಲೆಯೆತ್ತಿ ಹಾಗೆಯೇ ಮುಂದುವರೆದಿವೆ.
ಧೂಳು..ಧೂಳು..ಧೂಳು
ಇಡೀ ಅಂಡರ್‍ಪಾಸ್ ಉದ್ದಕ್ಕೂ ಧೂಳು ತುಂಬಿರುತ್ತ್ತದೆ. ಇಕ್ಕೆಲಗಳ ತುದಿಯಲ್ಲೂ ಮಣ್ಣಿನ ರಾಶಿ ಉಂಟಾಗುತ್ತಿದೆ. ಎರಡೂ ಬದಿಯ ಫುಟ್‍ಪಾತ್ ಧೂಳುಮಯವಾಗಿದೆ. ವಾಹನಗಳ ಸಂಚಾರದ ವೇಳೆ ಧೂಳು ಮೇಲೇಳುತ್ತದೆ. ಮೇಲ್ಛಾವಣಿ ಇರುವುದರಿಂದ ಒಳಗೆಲ್ಲ ಧೂಳು ಹರಡಿರುತ್ತದೆ. ದ್ವಿಚಕ್ರವಾಹನಗಳವರು, ಪಾದಚಾರಿಗಳು ಧೂಳಿನಿಂದ ರಕ್ಷಿಸಿಕೊಳ್ಳಲು ಮೂಗುಮುಚ್ಚಿಕೊಂಡು ಸಂಚರಿಸುವುದು ಅನಿವಾರ್ಯವಾಗುತ್ತದೆ. ಮೇಲೇಳುವ ಧೂಳು ಅಂಡರ್‍ಪಾಸ್‍ನ ಮೇಲ್ಭಾಗದ ಮೂಲಕ ಅಕ್ಕಪಕ್ಕಕ್ಕೆ ಹರಡುತ್ತಿದೆ.
ಹಳತಾದ ಡಿವೈಡರ್
ಅಂಡರ್‍ಪಾಸ್‍ನ ನಡು ಭಾಗದಲ್ಲಿ ಹಗಲಲ್ಲೂ ಕತ್ತಲು ಆವರಿಸಿರುತ್ತದೆ. ಅಲ್ಲಿ ಒಂದೆಡೆ ಈಗಾಗಲೇ ಸಿಮೆಂಟ್ ಕಾಂಕ್ರಿಟ್ ಕಿತ್ತುಹೋಗಿ ಒಳಗಿನ ಕಂಬಿಗಳು ಕಾಣತೊಡಗಿವೆ. ಈ ನಡು ಭಾಗದಲ್ಲಿ ದಿಂಡಿನಂತಿರುವ ಹಾಗೂ ರಿಫ್ಲೆಕ್ಟರ್ ಹೊಂದಿರುವ ಕೆಂಬಣ್ಣದ ಫೈಬರ್ ಡಿವೈಡರ್‍ಗಳನ್ನು ಉದ್ದಕ್ಕೂ ಅಳಡಿಸಲಾಗಿದೆ. ಇವುಗಳ ಮೇಲೆ ವಾಹನ ಹರಿದರೂ ಏನೂ ಆಗದಂತಹ ಹಾಗೂ ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲುವಂತಹ ಸಾಮಥ್ರ್ಯವನ್ನು ಅವು ಹೊಂದಿವೆ. ಆದರೆ ಮೂರು ವರ್ಷಗಳ ಅವಧಿಯಲ್ಲಿ ಈಗ ಇವುಗಳು ಹಳತಾಗಿವೆ. ಎಲ್ಲದರ ಬಣ್ಣ ಮಾಸಿದೆ. ರಿಫ್ಲೆಕ್ಟರ್‍ಗಳು ಇಲ್ಲದಂತಾಗಿವೆ. ಕೆಲವು ದಿಂಡುಗಳು ಕಿತ್ತು ನಾಶವಾಗಿವೆ.
ಗೋಡೆಗಳ ಬಣ್ಣ ಮಾಸಲು
ಇನ್ನು ಇಡೀ ಅಂಡರ್‍ಪಾಸ್‍ನ ಎರಡೂ ಬದಿಯ ಗೋಡೆಗಳಿಗೆ ನೀಲಿ ಮತ್ತು ಬೀಳಿ ಬಣ್ಣವನ್ನು ಬಳಿಯಲಾಗಿದ್ದು, ಹೊಸತರಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಿತ್ತು. ಮೂರು ವರ್ಷಗಳ ಬಳಿಕ ಈಗ ಬಣ್ಣ ಮಾಸಿದಂತಿದೆ. ಜೊತೆಗೆ ಗೋಡೆಯ ತುಂಬಾ ಧೂಳು ತುಂಬಿದೆ.
ಅಸಮರ್ಪಕ ವಿದ್ಯುತ್‍ದೀಪ
ಅಂಡರ್‍ಪಾಸ್‍ನಲ್ಲಿ ವಿದ್ಯುತ್ ದೀಪಗಳಿದ್ದರೂ, ಅಸಮಪರ್ಕಕ ಎನಿಸುತ್ತಿದೆ. ಇವುಗಳು ಹೆಚ್ಚು ಪ್ರಕಾಶಮಾನವಾಗಿಲ್ಲ ವೆಂಬುದು ಒಂದು ಕಾರಣವಾದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್‍ದೀಪಗಳು ಇರಬೇಕಿತ್ತೆಂಬುದು ಮತ್ತೊಂದು ಕಾರಣ. ಅಂಡರ್‍ಪಾಸ್‍ನ ನಡು ಭಾಗದಲ್ಲಿ ಹಗಲಿನಲ್ಲೂ ಕತ್ತಲು ಇರುವುದರಿಂದ, ಆ ಭಾಗದಲ್ಲಿ ಹಗಲು ಹೊತ್ತಿನಲ್ಲೂ ವಿದ್ಯುತ್‍ದೀಪಗಳು ಆನ್ ಆಗಿದ್ದರೆ ಒಳಿತೆಂಬ ಅಭಿಪ್ರಾಯವೂ ಇದೆ.
ಭಿತ್ತಿಪತ್ರದ ಹಾವಳಿ
ಅಂಡರ್‍ಪಾಸ್‍ನ ಗೋಡೆಯ ತುಂಬ ಖಾಸಗಿಯವರ ಭಿತ್ತಿಪತ್ರಗಳೇ ತುಂಬಿ, ಗೋಡೆಯನ್ನು ವಿರೂಪಗೊಳಿಸಿದೆ. ಇಲ್ಲಿ ಎರಡು ಸ್ಥಳಗಳಲ್ಲಿ ಶಿಲಾಫಲಕವಿದ್ದು, ಆ ಶಿಲಾಫಲಕಗಳಿಗೂ ಪೇಪರ್ ಅಂಟಿಸಿ ಮುಚ್ಚಲಾಗಿದೆ. ಚುನಾವಣೆ ಸಂದರ್ಭದಲ್ಲಿ ಇದನ್ನು ಮುಚ್ಚಲಾಗಿದ್ದರೂ, ಆ ಬಳಿಕ ಅದನ್ನು ಸ್ವಚ್ಛಗೊಳಿಸುವ ಯಾವ ಪ್ರಯತ್ನವೂ ಈತನಕ ನಡೆದಿಲ್ಲ.
ನಾಮÀಲಕವೇ ಇಲ್ಲ
ಈ ಅಂಡರ್‍ಪಾಸ್‍ಗೆ ಮೇಲ್ಛಾವಣಿ ನಿರ್ಮಿಸಿದ ಬಳಿಕ ಇದರ ಸ್ವರೂಪವೇ ಬದಲಾಗಿದೆ. ಸೋಮೇಶ್ವರಪುರಂ ಭಾಗದಿಂದ ಆಗಲಿ ಅಥವಾ ಶೆಟ್ಟಿಹಳ್ಳಿ ಮುಖ್ಯರಸ್ತೆ ಭಾಗದಿಂದ ಆಗಲಿ, ಅಂಡರ್‍ಪಾಸ್‍ನ್ನು ಪ್ರವೇಶಿಸುವಾಗ ಇಲ್ಲೊಂದು ಅಂಡರ್‍ಪಾಸ್ ಇದೆಯೆಂಬುದು ಥಟ್ಟನೆ ಗೊತ್ತಾಗುವುದೇ ಇಲ್ಲ! ದಿನವೂ ಇಲ್ಲಿ ಸಂಚರಿಸುವ ಸ್ಥಳೀಯರೇನೋ ಸಲೀಸಾಗಿ ಸಂಚರಿಸಬಹುದು. ಆದರೆ ಯಾರಾದರೂ ಪರಸ್ಥಳದವರು ಬಂದರೆ ದಾರಿ ಗೊತ್ತಾಗದೆ ಗೊಂದಲಕ್ಕೀಡಾಗಬೇಕಾದ ಪರಿಸ್ಥಿತಿ ಇದೆ. ಏಕೆಂದರೆ ಎರಡೂ ಪ್ರವೇಶ ದ್ವಾರಗಳಲ್ಲಿ ಎದ್ದುಕಾಣುವ ನಾಮÀಲಕವೇ ಇಲ್ಲ!
ತುರ್ತಾಗಿ ಆಗಬೇಕು
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವು ಅಂಡರ್‍ಪಾಸ್‍ನ್ನು ನಿರ್ಮಿಸಿದೆಯಾದರೂ, ಇಲ್ಲಿ ಧೂಳು ಇರದಂತೆ ನೋಡಿಕೊಳ್ಳಬೇಕಾದ ಹಾಗೂ ಭಿತ್ತಿಪತ್ರ ಅಂಟಿಸದಂತೆ ಕ್ರಮ ಜರುಗಿಸಬೇಕಾದ ಜವಾಬ್ದಾರಿಯು ತುಮಕೂರು ಮಹಾನಗರ ಪಾಲಿಕೆಯ ಮೇಲಿದೆ. ಮಿಕ್ಕಂತೆ ಅಂಡರ್‍ಪಾಸ್‍ನ ನಿರ್ವಹಣೆಯು ಪ್ರಾಧಿಕಾರದ ಹೊಣೆಯೇ ಆಗಿದೆ. ಅಂದರೆ ಇಡೀ ಗೋಡೆಗೆ ಹೊಸದಾಗಿ ಬಣ್ಣ ಬಳಿಸಿ ಆಕರ್ಷಕಗೊಳಿಸಬೇಕು.
ಪ್ರಕಾಶಮಾನವಾದ ವಿದ್ಯುತ್ ದೀಪಗಳ ಜೊತೆಗೆ, ವಿದ್ಯುತ್ ದೀಪಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ನಡು ಭಾಗದಲ್ಲಿ ಹಗಲಿನಲ್ಲೂ ಕನಿಷ್ಟ ಎರಡು ವಿದ್ಯುತ್ ದೀಪಗಳು ಆನ್ ಆಗಿರುವಂತೆ ವ್ಯವಸ್ಥೆ ಮಾಡಬೇಕು. ನಡು ಭಾಗದಲ್ಲಿರುವ ಹಳೆಯ ಡಿವೈಡರ್‍ಗಳನ್ನು ತಕ್ಷಣವೇ ಬದಲಿಸಿ, ಹೊಸತನ್ನು ಅಳವಡಿಸಬೇಕು. ಕಾಂಕ್ರಿಟ್ ಕಿತ್ತುಹೋಗಿ ಕಂಬಿ ಕಾಣುತ್ತಿರುವ ಸ್ಥಳದಲ್ಲಿ ಕೂಡಲೇ ಕಾಂಕ್ರಿಟ್ ಹಾಕಿಸಬೇಕು. ಶಿಲಾಫಲಕಗಳನ್ನು ಸ್ವಚ್ಛಗೊಳಿಸಬೇಕು. ಎರಡೂ ಪ್ರವೇಶದ್ವಾರಗಳಲ್ಲಿ ಅಂಡರ್‍ಪಾಸ್ ಎಂಬುದನ್ನು ಹಾಗೂ ಈ ದಾರಿಯ ಮೂಲಕ ತಲುಪಬಹುದಾದ ಪ್ರಮುಖ ಬಡಾವಣೆಗಳ ಹೆಸರುಳ್ಳ ದೊಡ್ಡ ನಾಮಫಲಕವನ್ನು ತುರ್ತಾಗಿ ಅಳವಡಿಸಬೇಕು.
ಮತ್ತೊಂದು ಹೊಸ ಸಮಸ್ಯೆ
ಈ ಅಂಡರ್‍ಪಾಸ್‍ನಿಂದ ಉಂಟಾಗುತ್ತಿರುವ ಹೊಸ ಸಮಸ್ಯೆಯೊಂದರತ್ತ ಪ್ರಸ್ತುತ ಮಹಾನಗರ ಪಾಲಿಕೆ ಸದಸ್ಯ ವಿಷ್ಣುವರ್ಧನ್ ಗಮನ ಸೆಳೆದಿದ್ದಾರೆ. ಮಳೆ ಬಂದಾಗ ಅಂಡರ್‍ಪಾಸ್‍ನ ನಡುಭಾಗದಲ್ಲಿ ಮಳೆ ನೀರು ಸಂಗ್ರಹವಾಗದಂತೆ ಮಾಡಲು ಅಲ್ಲಿ ಸ್ವಯಂಚಾಲಿತ ಮೋಟಾರ್ ಅಳವಡಿಸಲಾಗಿದೆ. ಸ್ವಲ್ಪ ನೀರು ನಿಂತರೆ ಸಾಕು, ಆ ಮೋಟಾರ್ ತಂತಾನೆ ಚಾಲನೆಗೊಂಡು ನೀರನ್ನು ಮೇಲಕ್ಕೆ ಪಂಪ್ ಮಾಡುತ್ತದೆ. ಈ ನೀರು ರೈಲ್ವೆಹಳಿ ಪಕ್ಕದ ದೊಡ್ಡ ಟ್ಯಾಂಕ್‍ನಲ್ಲಿ ಶೇಖರಣೆಗೊಳ್ಳುತ್ತದೆ.
ಅದು ತುಂಬಿದರೆ ನೀರು ಪಕ್ಕದ ರಸ್ತೆಯ ತುಂಬ (ಚಿರಂಜೀವಿ ಬ್ಯಾಂಕ್ ಎದುರು) ಹರಡುತ್ತದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೊಂದು ಸಮಸ್ಯೆಯಾಗುತ್ತಿದೆ. ಸದರಿ ಟ್ಯಾಂಕ್‍ನಿಂದ ಪೈಪ್‍ಲೈನ್ ಮಾಡಿ, ದೇವನೂರು ರಸ್ತೆಯಲ್ಲಿ ಸ್ವಲ್ಪ ಮುಂದೆ ಇರುವ ಮಳೆ ನೀರು ಚರಂಡಿಗೆ ಸಂಪರ್ಕ ಕಲ್ಪಿಸಿದ್ದಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ ಎಂಬುದು ಅವರ ಅನಿಸಿಕೆಯಾಗಿದೆ.