ತುಮಕೂರು
ನಗರದ ಶೆಟ್ಟಿ ಹಳ್ಳಿ ಗೇಟ್ ಅಂಡರ್ ಪಾಸ್ ಮೇಲಿನ ಸರ್ವೀಸ್ ರಸ್ತೆಯ ಜಾಗದ ವಿವಾದ ಬಗೆಹರಿದು, 18 ಅಡಿ ಅಗಲದ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಂತಾಗಿದೆ. ಈವರೆಗೆ ಸೇತುವೆಯ ಒಂದು ಬದಿ ಮಾತ್ರ ಇದ್ದ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಕಿರಿಕಿರಿಯಾಗಿತ್ತು. ಮತ್ತೊಂದು ಬದಿ ರಸ್ತೆ ನಿರ್ಮಾಣಗೊಂಡ ನಂತರ ಸಂಚಾರ ಸುಗಮವಾಗಲಿದೆ ಎಂದು ಆಭಾಗದ ಜನ ನಿಟ್ಟುಸಿರು ಬಿಡಬಹುದು.
ಇಲ್ಲಿನ ಅಂಡರ್ ಪಾಸ್ ನಿರ್ಮಾಣಕ್ಕೆ ಸ್ವಾತಂತ್ರ್ಯ ಚಳುವಳಿ ರೀತಿ ಸುದೀರ್ಘ ಹೋರಾಟವನ್ನೇ ಮಾಡಬೇಕಾಯಿತು. ಅಷ್ಟಾಗಿಯೂ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿದ ಅಂಡರ್ ಪಾಸ್ ಪರಿಪೂರ್ಣವಾಗಿಲ್ಲ. ಆದರೂ ರೈಲ್ವೇ ಟ್ರಾಕ್ ಹಾದು ಹೋಗಲು ವಾಹನಗಳಿಗೆ ಅವಕಾಶವಾಯಿತು ಎಂದುದಷ್ಟೇ ಸಮಾಧಾನ ಎಂದು ವಿಜಯನಗರ ನಿವಾಸಿ ರಾಮಚಂದ್ರಯ್ಯ ಹೇಳುತ್ತಾರೆ.
ಹೌದು. ಸಣ್ಣದೊಂದು ಅಂಡರ್ ಪಾಸ್ ನಿರ್ಮಾಣಕ್ಕೆ ದೊಡ್ಡ ಹೋರಾಟವೇ ನಡೆಯಿತು. ನಾಲ್ಕಾರು ಅವಧಿಯ ಶಾಸಕರು ಅಂಡರ್ ಪಾಸ್ ನಿರ್ಮಾಣದ ಭರವಸೆ ಕೊಟ್ಟು ತಮ್ಮ ಅವಧಿ ಮುಗಿಸಿದ್ದರು. ಕಡೆಗೆ ಇದೊಂದು ಅವೈಜ್ಞಾನಿಕ ಯೋಜನೆ ಎಂಬ ಅಪಖ್ಯಾತಿಗೂ ಗುರಿಯಾಯಿತು. ಮಳೆಗಾಲದಲ್ಲಿ ಈ ಸೇತುವೆ ಕೆಳಗೆ ನೀರು ನಿಲ್ಲುವುದು ನಿಂತಿಲ್ಲ. ಸೇತುವೆ ಪಕ್ಕ ಇದಕ್ಕಿಂತಾ ಆಳದ ಬಾವಿ ತೆಗೆದು ನೀರು ತೆಗೆಯುವ ವಿಫಲ ಯೋಜನೆ ಮಾಡಿ ಅಧಿಕಾರಿಗಳು ನಗೆಪಾಟಲಿಗೀಡಾದರು.
ನಂತರ ಇಡೀ ಸೇತುವೆ ಮೇಲೆ ಛಾವಣಿ ಹೊದಿಸಿ ಮಳೆ ನೀರು ಸೇತುವೆ ಒಳಕ್ಕೆ ಬೀಳದಂತೆ ತಡೆಯುವ ಪ್ರಯತ್ನ ಮಾಡಿದರು. ಎರಡೂ ಬದಿಯ ರಸ್ತೆ ನೀರು ಸೇತುವೆ ಕೆಳಗೆ ಹರಿಯದಂತೆ ಅಡ್ಡವಾಗಿ ತಡೆ ಉಬ್ಬು ನಿರ್ಮಿಸಿ ಅಲ್ಲಿ ಜಾಲರಿ ಚರಂಡಿ ಮಾಡಿ ಮಳೆ ನೀರು ನಿಯಂತ್ರಿಸುವ ದುಸ್ಸಾಹಸ ಮಾಡಿ ಸುಮ್ಮನಾದರು.
ಇಷ್ಟಾಗಿಯೂ ಈ ಸೇತುವೆಯ ಎರಡು ಬದಿಯ ಸರ್ವೀಸ್ ರಸ್ತೆ ಕೆಲಸ ಬಾಕಿ ಇತ್ತು. ಹಾಗೂ ಹೀಗೂ ಪಶ್ಚಿಮ ಭಾಗದ ರಸ್ತೆ ಮಾಡಿ ಮುಗಿಸಲಾಗಿತ್ತು. ಪೂರ್ವ ಭಾಗದ ರಸ್ತೆ ಜಾಗದ ವಿವಾದದಿಂದಾಗಿ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ಉಪ್ಪಾರಹಳ್ಳಿ ಕಡೆಯಿಂದ ಬರುವ ಹಾಗೂ ಹೋಗುವ ವಾಹನಗಳು ಸೇತುವೆ ಹಾದುಹೋಗಲು ಕಿರಿದಾದ ರಸ್ತೆಯೇ ಅನಿವಾರ್ಯವಾಗಿತ್ತು. ಇಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲಾಗಿತ್ತು. ಆದರೂ ಕಾರು, ಇಲ್ಲವೆ ಆಟೋದಂತಹ ವಾಹನ ಎದುರು ಬಂದರೆ ಸಂಚಾರ ಫಜೀತಿಯಾಗುತ್ತು.
ಸೇತುವೆಯ ಪೂರ್ವ ಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಜಮೀನಿನ ಸಮಸ್ಯೆ ಎದುರಾಗಿತ್ತು. ಆ ಜಮೀನು ಮಾಲೀಕರು ನ್ಯಾಯಯುತ ಪರಿಹಾರ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಎಲ್ಲಾ ಮುಗಿದು ಆ ಜಾಗಕ್ಕೆ ಚದುರ ಅಡಿಗೆ 3850 ರೂ.ನಂತೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು. ಅದರಂತೆ ಟೂಡಾದ 74 ಲಕ್ಷ ರೂ. ಹಾಗೂ ನಗರ ಪಾಲಿಕೆಯ 36 ಲಕ್ಷ ರೂ.ಗಳೊಂದಿಗೆ ಆ ಜಾಗದ ನಾಲ್ವರು ಮಾಲೀಕರಿಗೆ 1.10 ಕೋಟಿ ರೂ,ಗಳ ಪರಿಹಾರ ನೀಡಲಾಗಿದೆ. ಪರಿಹಾರ ಪಡೆದ ಅವರು ಈಗ ತಮ್ಮ ಕಟ್ಟಡ ತೆರವು ಮಾಡಿಕೊಳ್ಳುತ್ತಿದ್ದಾರೆ.
ನಗರ ಪಾಲಿಕೆ ಆಯುಕ್ತ ಭೂಬಾಲನ್ ಅವರು ಅನೇಕ ಬಾರಿ ಈ ಸ್ಥಳ ಪರಿಶೀಲನೆ ಮಾಡಿ, ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಈ ಸಮಸ್ಯೆಯನ್ನು ಬಗೆಹರಿಸಲು ನೆರವಾಗಿದ್ದಾರೆ ಎಂದು 30ನೇ ವಾರ್ಡಿನ ಪಾಲಿಕೆ ಸದಸ್ಯ ವಿಷ್ಣವರ್ಧನ್ ಹೇಳಿದರು.
ತೆರವಿನ ನಂತರ ನಗರ ಪಾಲಿಕೆಯಿಂದ 5.5 ಲಕ್ಷ ರೂ. ವೆಚ್ಚದಲ್ಲಿ ಈ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುವುದು. ಪೂರ್ಣಗೊಂಡ ನಂತರ ಎರಡೂ ಬದಿಯ ಸರ್ವೀಸ್ ರಸ್ತೆಗಳ ಏಕ ಮುಖ ಸಂಚಾರದ ವ್ಯವಸ್ಥೆ ಮಾಡುವುದರೆ ಒತ್ತಡ ನಿಯಂತ್ರಣಗೊಂಡು, ಸರಾಗ ಸಂಚಾರ ಸಾಧ್ಯವಾಗುತ್ತದೆ ಎಂದು ವಿಷ್ಣವರ್ಧನ್ ಹೇಳಿದರು.
ರಾಧಾಕೃಷ್ಣ ರಸ್ತೆಯಲ್ಲಿ ಭದ್ರಮ್ಮ ವೃತ್ತದಿಂದ ಫ್ಲೈ ಓವರ್ ಸಂಪರ್ಕಿಸುವ ಹಾಗೂ ಅಲ್ಲಿಂದ ಶೆಟ್ಟಿಹಳ್ಳಿ ಅಂಡರ್ ಪಾಸ್ ಸಂಪರ್ಕಿಸುವ ರಸ್ತೆಯನ್ನು ಅಗಲೀಕರಣಗೊಳಿಸಿ 58 ಅಡಿ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕೆಲಸ ಆರಂಭವಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 11 ಕೋಟಿ ರೂ.ಗಳು ಮಂಜೂರಾಗಿದೆ.
ರಸ್ತೆ ವಿಸ್ತರಣೆಗಾಗಿ ಅಕ್ಕಪಕ್ಕದ ಖಾಸಗಿ ಜಾಗ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಶಾಸಕ ಜ್ಯೋತಿಗಣೇಶ್, ಆಯುಕ್ತ ಭೂಬಾಲನ್ ಅವರು ರಸ್ತೆಗೆ ಜಾಗಬಿಟ್ಟುಕೊಡಲು ಜಾಗದ ಮಾಲೀಕರ ಮನವೊಲಿಸಿದ ನಂತರ ಮಾಲೀಕರು ಸಮ್ಮತಿ ಸೂಚಿಸಿದ್ದಾರೆ. 11 ಕೋಟಿ ಪೈಕಿ 20 ಜನ ಮಾಲೀಕರ ಜಾಗದ ಪರಿಹಾರವಾಗಿ 6 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿಗಾಗಿ 5 ಕೋಟಿ ರೂ ಮೀಸಲಿಡಲಾಗಿದೆ. ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಈ ಜಾಗಕ್ಕೆ ಬೆಲೆ ನಿಗಧಿಪಡಿಸಿದ ನಂತರ ಮಾಲೀಕರಿಗೆ ಪರಿಹಾರದ ಪರಿಹಾರದ ಹಣ ವಿತರಿಸಲಾಗುತ್ತದೆ ಎಂದು ವಿಷ್ಣವರ್ಧನ್ ಹೇಳಿದರು.ಲೋಕೋಪಯೋಗಿ ಇಲಾಖೆ, ನಗರಪಾಲಿಕೆ ಇಂಜಿನಿಯರ್‍ಗಳು, ಕಂದಾಯ ಅಧಿಕಾರಿಗಳು, ಸರ್ವೇ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರಸ್ತೆಯ ಗಡಿ ಗುರುತಿಸಿದ್ದಾರೆ. ಜಾಗದ ಮಾಲೀಕರಿಗೆ ಪರಿಹಾರ ವಿತರಣೆ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
