ಬಿಡಾಡಿ ಹಂದಿ-ನಾಯಿ-ದನಗಳ ಸ್ಥಳಾಂತರಕ್ಕೆ ಒತ್ತಾಯ

ದಾವಣಗೆರೆ :

    ಸ್ಮಾರ್ಟ್‍ಸಿಟಿಗೆ ಅಪವಾದ ಎಂಬಂತಿರುವ ಬಿಡಾಡಿ ಹಂದಿ, ನಾಯಿ, ದನಗಳ ಸ್ಥಳಾಂತರಕ್ಕೆ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

     ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪನವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನಕ್ಕೆ ನಿಯೋಗ ತೆರಳಿದ ವೇದಿಕೆಯ ಪದಾಧಿಕಾರಿಗಳು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಸನ್ಮಾನಿಸಿ, ಬಿಡಾಡಿ ಹಂದಿ, ನಾಯಿ, ದನಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು. 

     ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ದಾವಣಗೆರೆಯು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ಸುಮಾರು ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಆದರೆ, ಈಗ ಸ್ಮಾರ್ಟ್‍ಸಿಟಿಯಾಗಿ ನಿರ್ಮಾಣವಾಗುತ್ತಿರುವ ಎಲ್ಲೆಂದರಲ್ಲಿ ಹಂದಿಗಳು, ಬೀದಿ ನಾಯಿಗಳು, ದನಗಳ ಹಾವಳಿ ಮಿತಿಮೀರಿದೆ. ಹೀಗಾಗಿ ನಾಗರೀಕರು ಎಚ್1ಎನ್1 ಸೇರಿದಂತೆ ಅನೇಕ ಮಾರಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

      ಹಂದಿಗಳ ದಾಳಿಗೆ ಮಕ್ಕಳು, ಮಹಿಳೆಯರು, ವೃದ್ಧರು ತುತ್ತಾಗಿದ್ದಾರೆ. ಅಲ್ಲದೆ, ದ್ವಿಚಕ್ರ ಸವಾರರು ಸಹ ಹಂದಿಗಳು ರಸ್ತೆಯಲ್ಲಿ ಅಡ್ಡ ಬರುವುದರಿಂದ ಬಿದ್ದು ಕೈ-ಕಾಲು ಮುರಿದುಕೊಂಡಿರುವ ಹಲವು ಉದಾಹರಣೆಗಳಿವೆ. ಹಂದಿ ದಾಳಿಗೆ ಪಾಲಿಕೆ ಸಿಬ್ಬಂದಿ ಮರ್ಮಾಂಗಕ್ಕೆ ಕಚ್ಚಿ, ತೀವ್ರ ಗಾಯಗೊಳಿಸಿದ ನಿದರ್ಶನ ಸಹವಿದೆ. ಇನ್ನೂ ಬೀದಿ ನಾಯಿಗಳಂತೂ ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು, ಸೈಕಲ್, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಮಕ್ಕಳು, ಮಹಿಳೆಯರನ್ನು ಬೆನ್ನು ಹತ್ತಿ, ಕಚ್ಚಿರುವ ನಿದರ್ಶನಗಳೂ ಇವೆ. ರಾತ್ರಿ ವೇಳೆ ನಾಯಿಗಳ ಭಯದಿಂದ ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ ಎಂದು ಆಪಾದಿಸಿದರು.

     ಬಿಡಾಡಿ ದನಗಳಿಂದಾಗಿ ಪದೇಪದೇ ಅಪಘಾತ, ಅನಾಹುತಗಳು ಜಿಲ್ಲಾ ಕೇಂದ್ರದಲ್ಲಿ ಸಂಭವಿಸುತ್ತವೇ ಇವೆ. ಹಳೆ ಪಿ.ಬಿ.ರಸ್ತೆ, ಹದಡಿ ರಸ್ತೆ ಸೇರಿದಂತೆ ಹಲವೆಡೆ ಬಿಡಾಡಿ ದನಗಳು ರಸ್ತೆ, ವೃತ್ತಗಳಲ್ಲಿ ಮಲಗುವುದು, ನಿಲ್ಲುವುದರಿಂದಲೂ ವಾಹನ ಸವಾರರು ಅಪಘಾತ ಸಂಭವಿಸುತ್ತಲೇ ಇವೆ. ಇದರಿಂದ ವಾಹನ ಸವಾರರು, ಚಾಲಕರಿಗೆ ತೀವ್ರ ತೊಂದರೆಯಾಗುತ್ತಲೇ ಇದೆ. ಆದ್ದರಿಂದ ಬಿಡಾಡಿ ಹಂದಿ, ನಾಯಿ ಹಾಗೂ ದನಗಳನ್ನು ನಗರದಿಂದ ಸ್ಥಳಾಂತರಿಸುವಂತೆ ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

        ನಗರದಲ್ಲಿ ತಗ್ಗು ಪ್ರದೇಶ, ಬಡಾವಣೆಗಳಲ್ಲಿ ರಸ್ತೆಗಳಲ್ಲಿ, ಮನೆಗಳಿಗೆ, ಅಂಗಡಿ, ಮುಗ್ಗಟ್ಟುಗಳಿಗೆ ಮಳೆ, ಚರಂಡಿ, ಒಳ ಚರಂಡಿ ನೀರು ನುಗ್ಗುತ್ತದೆ. ಆದ್ದರಿಂದ ನಗರದಲ್ಲಿ ವೈಜ್ಞಾನಿಕವಾಗಿ ಯುಜಿಡಿ ವ್ಯವಸ್ಥೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಿಯೋಗದಲ್ಲಿ ಅಮ್ಜದ್ ಅಲಿ, ನಾಗರಾಜ್ ಗೌಡ, ಎಂ. ರವಿ, ಸಂತೋಷ್ ದೊಡ್ಮನಿ, ಬಿ.ಇ.ದಯಾನಂದ್, ಮಂಜುನಾಥ್ ಗಂಗೂರ್ ಇವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap