ಚಿತ್ರದುರ್ಗ:
ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಮಕ್ಕಳು ಯಾರು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ದಾನಿಗಳು ನೀಡುವ ನೆರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಕ್ಕಳಿಗೆ ಕರೆ ನೀಡಿದರು.
ಬಸವೇಶ್ವರ ವಿದ್ಯಾಸಂಸ್ಥೆ ಚಿತ್ರದುರ್ಗ, ಯೂತ್ ಫಾರ್ ಸೇವಾ ಬೆಂಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಸಹಯೋಗದೊಂದಿಗೆ ಮಠದ ಕುರುಬರ ಹಟ್ಟಿಯಲ್ಲಿರುವ ಗಾಂಧಿ ಮತ್ತು ಅಂಬೇಡ್ಕರ್ ಅನಾಥ ಮಕ್ಕಳ ಕುಟೀರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಕ್ಕಳಿಗೆ ಉಚಿತ ಬ್ಯಾಗ್, ಲೇಖನಿ ಸಾಮಾಗ್ರಿಗಳ ವಿತರಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯವರು ಇಲ್ಲಿನ ಅನಾಥ ಮತ್ತು ವಿಕಲಚೇತನ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ಲೇಖನ ಸಾಮಾಗ್ರಿ ಹಾಗೂ ನೋಟ್‍ಬುಕ್‍ಗಳನ್ನು ವಿತರಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ. ಇವೆಲ್ಲವನ್ನು ಬಳಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಗಮನ ಕೊಡಿ. ಮನೆಯಲ್ಲಿ ಪೋಷಕರು ನಂತರ ಶಾಲೆಯಲ್ಲಿ ಶಿಕ್ಷಕರುಗಳಿಂದ ಮಾತ್ರ ನಿಮಗೆ ಮಾರ್ಗದರ್ಶನ ಸಿಗುತ್ತದೆ. ಒಬ್ಬೊಬ್ಬರಲ್ಲಿ ಒಂದೊಂದು ಕಲೆಯಿರುತ್ತದೆ. ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ನಿಮ್ಮ ನಿಮ್ಮ ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಅನಾಥ ಮತ್ತು ವಿಕಲಚೇತನ ಮಕ್ಕಳಿಗೆ ಹಾರೈಸಿದರು.
ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅನಾಥ, ವಿಕಲಚೇತನರು, ಅಂಧ ಮಕ್ಕಳಿಗೆ ನೆರವು ನೀಡುವುದು ಅತ್ಯಂತ ಪುಣ್ಯದ ಕೆಲಸ. ಸೇವಾ ಮನೋಭಾವ ಎಲ್ಲರಲ್ಲಿಯೂ ಇರುವುದಿಲ್ಲ. ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪನವರು ಅನಾಥ, ವಿಕಲಚೇತನ ಮಕ್ಕಳನ್ನು ಸಲಹುತ್ತಿರುವುದು ಸುಲಭದ ಕೆಲಸವಲ್ಲ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯವರು ಇಲ್ಲಿಗೆ ಬಂದು ಮಕ್ಕಳಿಗೆ ಉಚಿತ ಬ್ಯಾಗ್, ಲೇಖನಿ ಸಾಮಾಗ್ರಿಗಳನ್ನು ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯೂತ್ ಫಾರ್ ಸೇವಾ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಹರ್ಷಮಿತ್ರ ಮಾತನಾಡುತ್ತ ಇದೊಂದು ಚಿಕ್ಕ ಕೊಡುಗೆ ನೀವುಗಳೆಲ್ಲಾ ಇದರ ಪ್ರಯೋಜನ ಪಡೆದುಕೊಂಡು ಶಿಕ್ಷಣವಂತರಾಗುವ ಮೂಲಕ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಅನಾಥ, ವಿಕಲಚೇತನ ಮಕ್ಕಳಿಗೆ ನುಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕನವರು ಮಾತನಾಡುತ್ತ ಸ್ಪರ್ಧಾತ್ಮಕ ಯುಗದಲ್ಲಿ ಅನಾಥರು, ವಿಕಲಚೇತನರು, ದೌರ್ಜನ್ಯಕ್ಕೊಳಗಾದವರ ರಕ್ಷಣೆಗೆ ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕೆಲವರು ವಿದ್ಯಾಬಲದಿಂದ ಸಮಾಜದಲ್ಲಿ ಪ್ರೌಢಿಮೆ ಸ್ಥಾಪಿಸುತ್ತಾರೆ. ಇನ್ನು ಕೆಲವರು ಅಧಿಕಾರ ಬಲದಿಂದ ಸಮಾಜ ಆಳುತ್ತಾರೆ. ಕೆಲವರು ಸಂಪತ್ತಿನಿಂದ ಅಸಹಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು ಎಂದು ವಿಕಲಚೇತನ ಅನಾಥ ಮಕ್ಕಳಿಗೆ ತಿಳಿಸಿದರು.
ದೇಹಕ್ಕೆ ನೂನ್ಯತೆಯಿರಬಹುದು. ಮನಸ್ಸಿಗೆ ನೂನ್ಯತೆಯಿರಬಾರದು. ನಿಮ್ಮ ವಿಚಾರ ಯಾವತ್ತು ಆರೋಗ್ಯಪೂರ್ಣವಾಗಿರಬೇಕು. ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿಕೊಳ್ಳಬೇಕು. ಮತ್ತೊಬ್ಬರ ಮೇಲೆ ನೆಪ ಹೇಳವುದರಿಂದ ಯಾವ ಪ್ರಯೋಜನವೂ ಇಲ್ಲ. ಪ್ರತಿದಿನವೂ ಬೆಳಿಗ್ಗೆ ಎದ್ದಕೂಡಲೆ ಧ್ಯಾನ ಮಾಡಿದರೆ ಆತ್ಮ ಶರೀರ ಶಕ್ತಿಶಾಲಿಯಾಗುತ್ತದೆ. ಕೆಟ್ಟು ಗುಣಗಳನ್ನು ತ್ಯಜಿಸುವುದೇ ನಿಜವಾದ ಶಕ್ತಿ. ಜೀವನವನ್ನು ಸ್ವಚ್ಚ ಶ್ರೇಷ್ಟವಾಗಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ವೈದ್ಯಾಧಿಕಾರಿ ಡಾ.ವಾಣಿ, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಯೂತ್ ಫಾರ್ ಸೇವಾ ಬೆಂಗಳೂರಿನ ಗುಣ್‍ವರಣ್‍ಸಿಂಗ್, ಅಂಕುರ್‍ಶುಕ್ಲಾ, ನಿರ್ದೇಶಕಿ ಎಸ್.ಕೆ.ಪ್ರಭಾವತಿ, ಸಾಹಿತಿ ಬಸವರಾಜ್ ಬೆಳಗಟ್ಟ, ಲೇಖಕ ಆನಂದಕುಮಾರ್ ವೇದಿಕೆಯಲ್ಲಿದ್ದರು.ಸುರಕ್ಷಾ ಕಾವ್ಯ ಪ್ರಾರ್ಥಿಸಿದರು. ಡಿ.ಆರ್.ಡಿ.ಸಿ.ನೋಡಲ್ ಅಧಿಕಾರಿ ಮಂಜುನಾಥ್ ನಾಡರ್ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಕೆ.ಸಿದ್ದಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
