ಚಿತ್ರದುರ್ಗ:
ಹೆಚ್ಚು ಅಂಕ ಪಡೆದ ಮಕ್ಕಳನ್ನು ಸನ್ಮಾನಿಸುವುದರಿಂದ ಬೇರೆ ಮಕ್ಕಳು ಕೂಡ ಅಧಿಕ ಅಂಕಗಳನ್ನು ಗಳಿಸಲು ಪ್ರೋತ್ಸಾಹಿಸಿ ದಂತಾಗುತ್ತದೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘ, ಗಂಗಾಮತ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ 2018-19 ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ. ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಂಗಯ್ಯನಬಾಗಿಲು ಬಳಿಯಿರುವ ಗಂಗಾಂಭಿಕ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ಅಭಿನಂದಾನ ಕಾರ್ಯಕ್ರಮ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ಜನಾಂಗ ಶಿಕ್ಷಣದಿಂದ ಮಾತ್ರ ಅಭಿವೃದ್ದಿಯಾಗಲು ಸಾಧ್ಯ. ಕೇವಲ ಸರ್ಕಾರಿ ನೌಕರಿಗಾಗಿಯೇ ಶಿಕ್ಷಣ ಪಡೆಯುವಂತಾ ಗಬಾರದು. ಸಮಾಜದಲ್ಲಿನ ಆಗು ಹೋಗುಗಳನ್ನು ತಿಳಿದುಕೊಂಡು ಜಾಜ್ಞಾರ್ಜನೆ ವೃದ್ದಿಸಿಕೊಳ್ಳುವುದಕ್ಕಾಗಿಯಾದರೂ ಶಿಕ್ಷಣ ಬೇಕು. ಶಿಕ್ಷಣದಷ್ಟೆ ಕ್ರೀಡೆಗೂ ಪೋಷಕರು ತಮ್ಮ ಮಕ್ಕಳನ್ನು ಉತ್ತೇಜಿಸಬೇಕು. ಕ್ರಿಕೆಟ್ ಹಾವಳಿಯಿಂದ ದೇಶಿ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ . ಒಂದು ಕಾಲದಲ್ಲಿ ಮಕ್ಕಳು ಹೊರಗೆ ಹೋಗಿ ಆಟವಾಡಿದರೆ ಮನೆಯಲ್ಲಿ ತಂದೆ ತಾಯಿಗಳು ದಂಡಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಕ್ರೀಡೆಗೆ ಹೆಚ್ಚಿನ ಗಮನ ಕೊಡಲಾಗುತ್ತದೆ ಎಂದು ಹೇಳಿದರು.
ಕೆಲವು ಕ್ರೀಡೆಗಳಿಗೆ ಕೋಚ್‍ಗಳಿಲ್ಲ. ಸರ್ಕಾರ ಕ್ರೀಡೆಗಾಗಿ ಕೋಚ್‍ಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದ ಶಾಸಕರು ಪ್ರತಿಭೆ ಮತ್ತು ಶಿಕ್ಷಣದಿಂದ ಹಿಂದುಳಿದ ಜನಾಂಗ ಸಂಘಟನೆಯಾಗಲು ದಾರಿಯಾಗಲಿದೆ. ಗಂಗಾಂಭಿಕ ಜನಾಂಗ ಸಂಘಟನೆಯಾಗುವುದು ಬೇರೆ ಜಾತಿಗಳ ವಿರೋಧಕ್ಕಲ್ಲ. ನಿಮ್ಮ ಏಳಿಗೆಗೆ ಸಂಘಟನೆ ಬೇಕು. ಶಿಕ್ಷಣದಿಂದ ಅಧಿಕಾರ ಪಡೆದುಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಿ ಎಂದು ಗಂಗಾಮತಸ್ಥ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ ಮತ್ತು ವಚನಗಳು ಕುರಿತು ನಿವೃತ್ತ ಪ್ರಾಚಾರ್ಯರಾದ ರಾಣೆಬೆನ್ನೂರಿನ ಎನ್.ಕೆ.ರಾಮಚಂದ್ರಪ್ಪ ಉಪನ್ಯಾಸ ನೀಡಿ ಸಮಾಜ ಎತ್ತ ಸಾಗುತ್ತಿದೆ ಎನ್ನುವುದು ನೋವಿನ ಸಂಗತಿ. ಮನೆ, ಬಂಗಲೆ, ಕಾರು, ಆಸ್ತಿ ಸಂಪಾದಿಸುವುದಕ್ಕಿಂತ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ನಿಜವಾದ ಆಸ್ತಿ ಎಂದು ಗಂಗಾಂಭಿಕ ಜನಾಂಗಕ್ಕೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗೆ, ಗುರು-ಗುರಿ ಎರಡು ಇರಬೇಕು. ನೀವು ಎಲ್ಲಿಯವರೆಗೂ ನಿಮ್ಮ ಹಕ್ಕನ್ನು ಕೇಳಿ ಪಡೆಯುವುದಿಲ್ಲವೋ ಅಲ್ಲಿಯತನಕ ಶೋಷಣೆಗೆ ಒಳಗಾಗುತ್ತೀರ. ಶಿಕ್ಷಣ, ಸಂಘಟನೆ, ಮನಸ್ಸುಗಳನ್ನು ಬೆಸೆಯುವ ಕೆಲಸವಾಗಬೇಕು. ಅಂಬಿಗರ ಚೌಡಯ್ಯನವರಲ್ಲಿ ಕೆಚ್ಚು, ಧೈರ್ಯ, ಸ್ವಾಭಿಮಾನವಿತ್ತು. ಹಾಗಾಗಿ ಅವರು ಬಂಡಾಯದ ವ್ಯಕ್ತಿಯಾಗಿದ್ದರು. ಬಡತನವಿರುವ ಕಡೆ ಮೌಢ್ಯವಿರುತ್ತದೆ. ನೂರು ದೇವಾಲಯಗಳನ್ನು ಕಟ್ಟುವ ಬದಲು ಒಂದು ಶಾಲೆಯನ್ನು ತೆರೆಯುವುದು ನಿಜವಾದ ಭಕ್ತಿ ಎಂದು ತಿಳಿಸಿದರು.
ದೇವಸ್ಥಾನಗಳಿಗೆ ಹಣ ಖರ್ಚು ಮಾಡುವುದಕ್ಕಿಂತ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಅನ್ಯಾಯ, ಶೋಷಣೆ ವಿರುದ್ದ ಸದಾ ಜಾಗೃತರಾಗಿರಿ. ಬೇರೆ ಜನಾಂಗದವರಿಗಿಂತ ನಾವು ಎತ್ತರದಲ್ಲಿದ್ದೇವೆ. ಅಂಬಿಗ ಎಂದರೆ ನಂಬಿಗಸ್ತ ಎಂದು ಅಂಬಿಗರ ಚೌಡಯ್ಯನವರ ಮಹತ್ವವನ್ನು ವಿವರಿಸಿದರು.
ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷವೂ ನಮ್ಮ ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕವೂ ಮುಖ್ಯವಾಗಿರುವುದರಿಂದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಮುಂದೆ ನೀವು ಏನಾದರೂ ಆಗಿ ಸಮಾಜವನ್ನು ಮಾತ್ರ ಮರೆಯಬೇಡಿ. ದೊಡ್ಡ ದೊಡ್ಡ ಅಧಿಕಾರಿಗಳಾದಾಗ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಿ.
ಮನೆಯೆ ಮೊದಲ ಪಾಠಶಾಲೆಯಾಗಿರುವುದರಿಂದ ಮನೆಯಲ್ಲಿ ಓದಲು ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಸಿ. ತಾಯಂದಿರು ಟಿ.ವಿ.ನೋಡುತ್ತ ಕುಳಿತರೆ ಮಕ್ಕಳು ಓದುವುದನ್ನು ಬಿಟ್ಟು ಟಿ.ವಿ. ನೋಡಬೇಕಾ ಗುತ್ತದೆ. ಟಿ.ವಿ., ಮೊಬೈಲ್‍ನಿಂದ ಮಕ್ಕಳ ಶಿಕ್ಷಣ ಹಾಳಾಗಲು ತಂದೆ-ತಾಯಿಗಳು ಅವಕಾಶ ಕೊಡಬೇಡಿ. ಯುವ ಜನಾಂಗ ದುಶ್ಚಟಗಳಿಂದ ದೂರವಿರಿ. ದಿನವೂ ಯೋಗ ಮಾಡಿ ನಿರೋಗಿಗಳಾಗಿರಿ ಎಂದು ಸಲಹೆ ನೀಡಿದರು.
ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು.
ಗಂಗಾಂಭಿಕ ಬೆಸ್ತರ ಜಿಲ್ಲಾಧ್ಯಕ್ಷ ಹೆಚ್.ಡಿ.ರಂಗಯ್ಯ, ವೇದಿಕೆಯಲ್ಲಿದ್ದರು. ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಬಿ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಮಾಜಿ ಸದಸ್ಯರುಗಳಾದ ಮಹೇಶ್, ಗಾಡಿ ಮಂಜುನಾಥ್, ಗುತ್ತಿಗೆದಾರ ಕುಮಾರ್ ಸೇರಿದಂತೆ ಜನಾಂಗದ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿದ್ಯಾರ್ಥಿನಿ ಕೃತಿಕ ಪ್ರಾರ್ಥಿಸಿದರು. ಕೆಳಗಳಹಟ್ಟಿ ಗೋವಿಂದರಾಜು ಸ್ವಾಗತಿಸಿದರು. ಕೃಷ್ಣಮೂರ್ತಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ