ಶಿಕ್ಷಣ ನೌಕರಿಗಾಗಿ ಅಲ್ಲ; ಬದಲಿಗೆ ಜ್ಞಾನಾರ್ಜನೆಗಾಗಿ

ಹೊನ್ನಾಳಿ:

        ಶಿಕ್ಷಣ ನೌಕರಿಗಾಗಿ ಅಲ್ಲ; ಬದಲಿಗೆ ಜ್ಞಾನಾರ್ಜನೆಗಾಗಿ ಬೇಕು. ಮನುಷ್ಯನನ್ನು ನಾಗರಿಕನನ್ನಾಗಿಸಲು ಶಿಕ್ಷಣ ಆಗತ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಬುಧವಾರ ತಾಲೂಕಿನ ಹತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ನೌಕರರು ಸೇರಿದಂತೆ ಜನಪ್ರತಿನಿಧಿಗಳು ತಮ್ಮ ಸೇವಾವಧಿ ಬಳಿಕ ಮಾಜಿಗಳಾಗುತ್ತಾರೆ ಆದರೆ, ವಿದ್ಯಾವಂತರು ಎಂದಿಗೂ ಮಾಜಿಗಳಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ಕೊಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

        ತಮ್ಮ ಬಾಲ್ಯ ಜೀವನದ ಉದಾಹರಣೆ ನೀಡಿದ ಅವರು, ನಾನು ನನ್ನ ಬಾಲ್ಯಾವಸ್ಥೆಯಲ್ಲಿ ಸರಿಯಾದ ಶಿಕ್ಷಣ ಪಡೆಯದ ಕಾರಣ ಇಂದು ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಸಂವಹನ ನಡೆಸಲು ಕಷ್ಟಕರವಾಗುತ್ತಿದೆ. ಈ ಕಾರಣಕ್ಕೆ ಇಂದು ಶಾಸಕನಾಗಿದ್ದರೂ ಕೇಂದ್ರದ ಸಚಿವರೊಂದಿಗೆ, ಅಥವಾ ಹೊರದೇಶಗಳಿಗೆ ಹೋದಾಗ ಸಾಕಷ್ಟು ಕಷ್ಟಗಳನ್ನು ಅನುಭವಿಸುವಂತಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

     ಎಸ್‍ಡಿಎಂಸಿ ಅಧ್ಯಕ್ಷ ಎಂ.ಎನ್. ತಿಮ್ಮನಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರು, ಪೋಷಕರು ಹಾಗೂ ಸಮುದಾಯ ಕೈಜೋಡಿಸಬೇಕು ಎಂದು ಹೇಳಿದರು.ಹತ್ತೂರು ಗ್ರಾಪಂ ಅಧ್ಯಕ್ಷ ಎಚ್.ಆರ್. ಹಳದಪ್ಪ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಮಲ್ಲೇಶಪ್ಪ, ಕಾರ್ಯದರ್ಶಿ ಸುರೇಶ್ ಮಾಳಗಿ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಕರಿಬಸಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ಸೋಮಶೇಖರ್ ಇತರರು ಮಾತನಾಡಿದರು.

         ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಮಲ್ಲೇಶಪ್ಪ ತಾನು ಓದಿದ ಶಾಲೆಯ ಅಭಿವೃದ್ಧಿಗಾಗಿ 5 ಸಾವಿರ ರೂ.ಗಳ ದೇಣಿಗೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕ ಮೌನೇಶಾಚಾರ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಡಿ. ಶೇಖರಪ್ಪ, ಹತ್ತೂರು ಗ್ರಾಮದ ತಿರುಮಲ ಟ್ರಸ್ಟ್‍ನ ಎಂ. ಈಶ್ವರಪ್ಪ, ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ, ಜಿ.ಸಿ. ಮಹೇಶ್ವರಪ್ಪ, ಗ್ರಾಪಂ ಸದಸ್ಯರಾದ ಎಸ್. ಸುರೇಶ್, ಗಾಯಿತ್ರಮ್ಮ, ಚನ್ನವೀರಾಚಾರ್, ಕುಸುಮಾ, ಮೀನಾಕ್ಷಮ್ಮ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link