ಶಿಶು ಮರಣ ಪ್ರಮಾಣ ತಡೆಗಟ್ಟಿ :ವಿನೋತ್ ಪ್ರಿಯಾ

ಚಿತ್ರದುರ್ಗ:

    ನವಜಾತ ಶಿಶುಗಳ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಇದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆರಿಗೆ ಸಮಯದಲ್ಲಿ ಮತ್ತು ನಂತರದಲ್ಲಿ ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಹೆರಿಗೆಯಾದ ನಂತರ ತಾಯಂದಿರ ಆರೈಕೆ ಬಗ್ಗೆ ಆಪ್ತ ಸಮಾಲೋಚನೆ ಮಾಡಿ ನಂತರ ಮನೆಯಲ್ಲಿ ಇದ್ದಾಗಲೂ ಸಹ ಎಎನ್‍ಎಂ ಗಳ ಮೂಲಕ ತಾಯಿ ಮಗುವಿನ ಆರೋಗ್ಯದ ವರದಿಯನ್ನು ಪಡೆಯಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಹೆಚ್ಚು ಇದ್ದು ಈ ಪ್ರಮಾಣವನ್ನು ತಗ್ಗಿಸುವ ಮೂಲಕ ಇಲ್ಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಮಾಡಿಸುವ ವ್ಯವಸ್ಥೆಯಾಗಬೇಕು. ಈಗಾಗಲೇ 24/7 ಆಧಾರದಲ್ಲಿ ಜಿಲ್ಲೆಯ 34 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಸೌಲಭ್ಯ ಇದ್ದು ಹೆರಿಗೆ ಮಾಡಿಸಲಾಗುತ್ತಿದೆ. ಅದೇ ರೀತಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯವನ್ನು ಕಲ್ಪಿಸಬೇಕು. ಹೆಚ್ಚಿನ ಚಿಕಿತ್ಸೆಗಾಗಿ ತಜ್ಞ ವೈದ್ಯರ ಸೇವೆ ಅಗತ್ಯವೆಂದಾಗ ಮಾತ್ರ ಜಿಲ್ಲಾ ಆಸ್ಪತ್ರೆಗೆ ಬರುವಂತಾಗಬೇಕು.

       ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಿ ಜನರಿಗೂ ವಿಶ್ವಾಸ ಬರುವಂತಹ ಸೇವೆ ಮಾಡಬೇಕೆಂದು ಸೂಚನೆ ನೀಡಿದರು. ಬಡತನ ರೇಖೆಯಲ್ಲಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ ಎನಿಸುವುದು, ಸರ್ಕಾರಿ ಆಸ್ಪತ್ರೆಗಳನ್ನೆ ಆಶ್ರಯಿಸಿರುವ ವರ್ಗಕ್ಕೆ ಮೋಸವಾಗದಂತೆ ಸೂಕ್ತ ಔಷದೋಪಚಾರಗನ್ನು ಒದಗಿಸಬೇಕು. ಶಿಶು ಮರಣ ತಡೆಗಟ್ಟಲು ಮುಂದಾಗಬೇಕು. ಆರೋಗ್ಯದ ಕುರಿತು ಗರ್ಭಿಣಿ ಮತ್ತು ತಾಯಂದಿರುಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು, ಹೆರಿಗೆ ಸಮಯದಲ್ಲಿ ಜಾಗರೂಕರಾಗುವಂತೆ ಎಚ್ಚರಗೊಳಿಸಬೇಕು. ಅಂಗನವಾಡಿ, ಶಾಲೆಗಳ ಸುತ್ತ ಮುತ್ತಲಿನ ಪರಿಸರ ಶುಚಿತ್ವದಿಂದಿರುವಂತೆ ಕ್ರಮವಹಿಸಬೇಕು ಎಂದು ಶಿಕ್ಷಣ ಇಲಾಖಾಧಿಕಾರಿಗೆ ಸೂಚಿಸಿದರು.

       ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 202 ನಾರ್ಮಲ್ ಹೆರಿಗೆ ಈ ವರ್ಷದಲ್ಲಿ ಆಗಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ 403 ನಾರ್ಮಲ್, 494 ಸಿಜೆರಿಯನ್ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 215 ನಾರ್ಮಲ್, 432 ಸಿಜೆರಿಯನ್ ಹೆರಿಗೆಯಾಗಿವೆ. ವೈದ್ಯರು ಅಗತ್ಯವಿದ್ದಲ್ಲಿ ಮಾತ್ರ ಸಿಜೆರಿಯನ್ ಹೆರಿಗೆ ಮಾಡಿಸಬೇಕು.

        ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮೇಲುಸ್ತುವಾರಿ ನಡೆಸಬೇಕೆಂದು ಸೂಚನೆ ನೀಡಿದರು. ನವಜಾತ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹುಟ್ಟಿದ ಮಗುವಿನ ತೂಕ ಒಂದು ತಿಂಗಳ ನಂತರ ಎಷ್ಟಿದೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ, ಮಕ್ಕಳ ತೂಕ ಕಡಿಮೆಯಾಗಲು ಏನು ಕಾರಣವೆಂದು ಸಂಗ್ರಹಿ ಸಂಪೂರ್ಣ ವಿಶ್ಲೇಷಣೆಯೊಂದಿಗೆ ಮುಂದಿನ ಸಭೆಗೆ ವಿವರ ಸಲ್ಲಿಸಲು ಸೂಚಿಸಿ 5 ವರ್ಷದೊಳಗಿನ ಮಕ್ಕಳಿಗೆ ಸಮಯಕ್ಕನುಗುಣವಾಗಿ ಲಸಿಕೆಯನ್ನು ಹಾಕಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

         ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ; ಜಯಪ್ರಕಾಶ್, ಡಾ; ಕುಮಾರಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap