ಶಿಷ್ಠಾಚಾರ ಉಲ್ಲಂಘನೆ ಖಂಡಿಸಿ ಬಿಜೆಪಿ ಪ್ರತಿಭಟನೆ

ತುಮಕೂರು

     ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ಫ್ಲೆಕ್ಸ್‍ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕದೆ ಶಿಷ್ಠಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕರು, ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.

     ಶುಕ್ರವಾರದಂದು ಬೆಳಗ್ಗೆ 11 ಗಂಟೆ ವೇಳೆಗೆ ಉಪಮುಖ್ಯಮಂತ್ರಿಯವರಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಪುನರಾಭಿವೃದ್ಧಿ ಹಾಗೂ ಕ್ರೀಡಾಸಂಕೀರ್ಣ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಕಾರ್ಯ ಆಯೋಜಿಸಲಾಗಿತ್ತು. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು, ಬಿಜೆಪಿಯ ಪಾಲಿಕೆ ಸದಸ್ಯರು ಏಕಾಏಕಿ ಪ್ರತಿಭಟನೆ ಮುಂದಾದ ಘಟನೆ ನಡೆದಿದ್ದು, ನಗರ ಡಿವೈಎಸ್‍ಪಿ ತಿಪ್ಪೇಸ್ವಾಮಿಯವರ ಬಳಿ ಚರ್ಚೆ ಮಾಡುತ್ತಲೇ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲು ಪ್ರಾರಂಭಿಸಿದರು.

     ಅಷ್ಟರ ವೇಳೆಗೆ ಸ್ಥಳಕ್ಕೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗಮಿಸಿ, ಕಾರ್ಯಕರ್ತರಿಗೆ ಸಾಥ್ ನೀಡಿದರು. ಸ್ವಯಂ ಅವರೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

      ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಸ್ಮಾರ್ಟ್ ಸಿಟಿ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ಈ ಯೋಜನೆಯಲ್ಲಿ ದೇಶದ ನೂರು ನಗರಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ಹಣ ನೀಡಲಾಗಿದೆ. ಅಂತಹದ್ದು, ಇಲ್ಲಿ ನಡೆಯುತ್ತಿರುವ ಕಾಮಗಾರಿಗಳ ಶಂಕುಸ್ಥಾಪನೆಯ ಫ್ಲೆಕ್ಸ್‍ಗಳಲ್ಲಿ ಪ್ರಧಾನಿಯವರ ಭಾವಚಿತ್ರವಾಗಲಿ, ಸ್ಥಳೀಯ ಸಂಸದರ ಭಾವಚಿತ್ರವಾಗಲಿ ಹಾಕಿಲ್ಲ.

       ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಟಿರಂಗಸ್ವಾಮಿಯವರು ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದು, ಕೇವರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಭಾವಚಿತ್ರಗಳನ್ನು ಮಾತ್ರ ಹಾಕಿದ್ದಾರೆ. ಎಂದು ಆರೋಪಿಸಿದರು.

       ಬೆಳಗ್ಗೆಯಿಂದ ನಿಗದಿಯಾಗಿದ್ದ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಬಿಡುವುದಿಲ್ಲ. ಕಾಮಗಾರಿಗಳ ಉದ್ಗಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಂದೂಡಿ ಅಥವಾ ನಗರದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‍ಗಳನ್ನು ಬದಲಾಯಿಸಿ ಎಂದು ಒತ್ತಾಯಿಸಿದರಲ್ಲದೆ, ಶಿಷ್ಠಾಚಾರ ಉಲ್ಲಂಘನೆ ಮಾಡಿದ ಅಧಿಕಾರಿ ರಂಗಸ್ವಾಮಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದರು.

        ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ಅವರು ಶಾಸಕರೊಂದಿಗೆ ಚರ್ಚೆ ಮಾಡಿ ಅಧಿಕಾರಿಗಳ ಯಡವಟ್ಟಿನಿಂದ ತಪ್ಪಾಗಿದ್ದು, ಮೋದಿಯವರ ಭಾವಚಿತ್ರವನ್ನು ಅಚಿಟಿಸುತ್ತೇವೆ ಎಂದಾಗ ಅದಕ್ಕೆ ನಿರಾಕರಿಸಿದ ಶಾಸಕರು ಮೋದಿಯವರು ಎಲ್ಲಿಯೂ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್ ಹಾಕಿಸಿ ಎಂದು ಕೇಳಿಲ್ಲ. ನಗರದಲ್ಲಿ ನಾವು ಕೂಡ ಯಾವುದೇ ಕಾರ್ಯಕ್ರಮಕ್ಕೂ ನಮ್ಮ ಫೋಟೊಗಳನ್ನು ಹಾಕಿಸಿ ಎಂದು ಕೇಳುವುದಿಲ್ಲ. ಒಬ್ಬ ಗ್ರೇಡ್ 1 ಅಧಿಕಾರಿಗೆ ಸರ್ಕಾರದ ಶಿಷ್ಟಾಚಾರದ ಅರಿವಿಲ್ಲದೆ ಕೆಲಸ ನಿರ್ವಹಿಸುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

      ಬೆಳಗ್ಗೆಯಿಂದ ಅನೇಕ ಜನ ದೂರವಾಣಿ ಮೂಲಕ ನಮಗೆ ಕೇಳುತ್ತಿದ್ದರೆ ಇಲ್ಲಿ ಶಾಸಕರು ಇದ್ದು ಇಲ್ಲದಂತಾಗಿದೆ. ಸ್ಮಾರ್ಟ್ ಸಿಟಿಯ ಯಾವುದೇ ಕಾಮಗಾರಿಗಳಾಗಲಿ, ಸಭೆಗಳಿಗಾಗಲಿ ಅಥವಾ ಯಾವುದೇ ಮಾಹಿತಿ ನೀಡದೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುವ ಕನಿಷ್ಠ ಜ್ಞಾನವೂ ಇಲ್ಲ ಎಂದರೆ ಹೇಗೆ ಎಂದರು.

        ಈ ಬಗ್ಗೆ ಉಪಮುಖ್ಯಮಂತ್ರಿಗಳ ಬಳಿ ದೂರವಾಣಿ ಮೂಲಕ ಚರ್ಚೆ ಮಾಡಿದ ನಂತರ ಶಾಸಕರ ಬಳಿಗೆ ಬಂದು 10 ನಿಮಿಷ ಸಮಯಾವಕಾಶ ಕೊಡಿ. ನಗರದಲ್ಲಿ ಹಾಕಿಸಲಾದ ಫ್ಲೆಕ್ಸ್‍ಗಳನ್ನು ತೆರವುಗೊಳಿಸುತ್ತೇವೆ. ನಂತರ ಈ ಕಾರ್ಯಕ್ರಮವನ್ನು ಮುಂದುವರೆಸುತ್ತೇವೆ. ಹಾಗೆಯೇ ಅಧಿಕಾರಿಯ ಮೇಲೂ ಕ್ರಮ ತೆಗೆದುಕೊಳ್ಳಲು ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇವೆ ಎಂದು ಮನವರಿಕೆ ಮಾಡಿ ತೆರಳಿದದರು.

       ನಂತರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅವರು ಫ್ಲೆಕ್ಸ್‍ಗಳನ್ನು ತೆರವುಗೊಳಿಸಿದ ಚಿತ್ರಗಳನ್ನು ಪ್ರದರ್ಶಿಸಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಇವರ ಮನವಿಗೆ ಒಪ್ಪಿದ ಶಾಸಕರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಮೋದಿಯವರಿಗೆ ಮಾಡಿದ ಅನ್ಯಾಯಕ್ಕೆ ಒಗ್ಗಟ್ಟಾಗಿ ಪ್ರತಿಭಟನೆಯನ್ನು ಮಾಡಿದ್ದೀರಾ.

        ಇದೀಗ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ನಗರದ ಎಲ್ಲಾ ಕಡೆಯೂ ಫ್ಲೆಕ್ಸ್‍ಗಳನ್ನು ತೆರವುಗೊಳಿಸಿದ್ದಾರೆ. ಈಗ ಕ್ರೀಡಾಂಗಣದಲ್ಲಿ ಶಂಕುಸ್ಥಾಪನೆ ನೆರವೇರಿದ ನಂತರ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿ ಪ್ರತಿಭಟನೆ ಹಿಂಪಡೆದುಕೊಂಡರು .ಪ್ರತಿಭಟನೆಯಲ್ಲಿ ಧನಿಯಾಕುಮಾರ್, ಜಯಪ್ರಕಾಶ್, ಪ್ರದೀಪ್, ಪಾಲಿಕೆ ಸದಸ್ಯರಾದ ಗಿರಿಜಾಧನಿಯಾಕುಮಾರ್, ಮಲ್ಲಿಕಾರ್ಜುನ್ ಇನ್ನಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap