ಶಿವಗಂಗ ಸಹಕಾರ ಸಂಘದಲ್ಲಿ 30 ಕೋಟಿ ವಹಿವಾಟು

ಚಿತ್ರದುರ್ಗ:

     ಡಿ.ಸಿ.ಸಿ.ಬ್ಯಾಂಕ್‍ನಲ್ಲಿ ನಾನು ಇರುತನಕ ಸಾಲ ಕೊಡಿಸುತ್ತೇನೆ ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಜೀವನ ಸಾಗಿಸಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ರಾಜ್ಯ ನಿರ್ದೇಶಕ ಎಸ್.ಆರ್.ಗಿರೀಶ್ ಸದಸ್ಯರುಗಳಿಗೆ ಕರೆ ನೀಡಿದರು.

    ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

     1975 ರಲ್ಲಿ ಆರಂಭಗೊಂಡ ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಲ್ಲಿಯವರೆಗೂ ಸದಸ್ಯರುಗಳಿಗೆ ವಿವಿಧ ಬಗೆಯ ಸಾಲಗಳನ್ನು ನೀಡಿ 2017-18 ನೇ ಸಾಲಿನಲ್ಲಿ 30 ಕೋಟಿ 37 ಲಕ್ಷದ 77 ಸಾವಿರ ರೂ.ವಾರ್ಷಿಕ ವಹಿವಾಟು ನಡೆಸಿದೆ. ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಸದಸ್ಯರುಗಳು ಮನಸ್ಸು ಮಾಡಿ ಇಲ್ಲಿಯೇ ವಹಿವಾಟು ನಡೆಸಿದರೆ ಬಂಡವಾಳ ಎಷ್ಟು ಬೇಕಾದರೂ ತರುವ ಶಕ್ತಿ ನಮ್ಮಲ್ಲಿದೆ.

      ಕಾರು, ಬೈಕ್, ಟ್ರಾಕ್ಟರ್ ಕೊಂಡುಕೊಳ್ಳಲು ಸಾಲಕ್ಕಾಗಿ ಎಲ್ಲಿಯೂ ಬೇರೆ ಕಡೆ ಹೋಗುವುವುದು ಬೇಡ. ಶಿವಗಂಗ ಸೊಸೈಟಿಯಲ್ಲೇ ಸಾಲ ಪಡೆದುಕೊಳ್ಳಿ. ಮಾರವಾಡಿಗಳ ಬಳಿ ಹೋಗಿ ಬಂಗಾರವನ್ನು ಒತ್ತೆಯಿಟ್ಟು ಸಾಲ ಪಡೆದುಕೊಳ್ಳಬೇಡಿ. ಬಡ್ಡಿ ಕಟ್ಟುವುದರಲ್ಲಿಯೇ ಹೈರಾಣಾಗುತ್ತೀರ.

       ನಮ್ಮಲ್ಲಿ ವಹಿವಾಟು ಆರಂಭಿಸಿ ನಿಮಗೆ ಯಾವಾಗ ಬೇಕಾದರೂ ನಮ್ಮ ಸಂಘದಲ್ಲಿ ಸಾಲ ಸಿಗುತ್ತದೆ ಎಂದು ಹೇಳಿದರು.
ಹೆಣ್ಣು ಮಕ್ಕಳ ಹತ್ತಿರವೇ ಹಣ ಇರುವುದು. ಪ್ರತಿಯೊಬ್ಬರು ಧೈರ್ಯ ಮಾಡಿ ಐದೈದು ಸಾವಿರ ರೂ.ಗಳ ಠೇವಣಿ ಇಡಿ ಮುಂದೊಂದು ದಿನ ನಿಮಗೆ ಅದರ ಲಾಭ ಕೈಗೆ ಸಿಗುತ್ತದೆ.

       ಎಲ್ಲರೂ ಮೆಂಬರ್‍ಗಳಾಗಿ ನಮ್ಮಲ್ಲೇ ವಹಿವಾಟು ನಡೆಸಿ ಡೆವಲಪ್‍ಮೆಂಟ್ ಲೋನ್ ಕೊಡಿಸುತ್ತೇನೆ. ಇಲ್ಲಿ ಬಂಗಾರದ ಆಭರಣದ ಮೇಲೆಯೂ ಸಾಲ ಸೌಲಭ್ಯವಿದೆ ಎಂದರು.

         ಮಹಿಳೆಯರೇ ಎಲ್ಲರೂ ಸೇರಿಕೊಂಡು ಇಲ್ಲಿಯೇ ಒಂದು ಸೊಸೈಟಿ ತೆರೆಯಿರಿ. ಎಲ್ಲಾ ಅಗತ್ಯ ವಸ್ತುಗಳು ಇಲ್ಲಿಯೇ ಸಿಗುವಂತಾಗಬೇಕು. ಇದರಿಂದ ನಿಮ್ಮ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ. ಜೊತೆಗೆ ಲಾಭವನ್ನು ಕಂಡುಕೊಳ್ಳಬಹುದು. ಮುಂದಿನ ವರ್ಷ ಮೂರು ಮಹಿಳೆಯರನ್ನು ನಿರ್ದೇಶಕರ ಸ್ಥಾನಗಳಿಗೆ ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳುತ್ತೇವೆ. .2 ಶೇಕಡ ಬಡ್ಡಿಯಲ್ಲಿ ಸಾಲ ದೊರಕಲಿದೆ. ಇದರ ಲಾಭ ಪಡೆದುಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಕರೆ ನೀಡಿದರು.

        ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಗ್ಗೆಶಿವಪ್ರಕಾಶ್ ಮಾತನಾಡಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಹಿವಾಟು ನಡೆಸುವ ಬದಲು ನಮ್ಮ ಸೊಸೈಟಿಯಲ್ಲಿ ವಹಿವಾಟು ಮಾಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ, ಉಳಿತಾಯ ಖಾತೆ ಆರಂಭಿಸಿ ಠೇವಣಿಯನ್ನು ಇಡುವುದರಿಂದ ಸಂಘ ಹೆಚ್ಚು ಸಾಲ ನೀಡಲು ಅನುಕೂಲವಾಗಿ ಅಭಿವೃದ್ದಿ ಹೊಂದಲು ಸಹಕಾರಿಯಾಗಲಿದೆ ಎಂದರು,

        ಮುಂದಿನ ದಿನಗಳಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್‍ರವರ ಸಲಹೆಯಂತೆ ಟಿ.ಎ.ಪಿ.ಎಂ.ಸಿ. ಮತ್ತು ತುಮ್ಮಕೋಸ್ ಮಾದರಿಯಲ್ಲಿ ರೈತರಿಗೆ ಅನುಕೂಲವಾಗುವಂತ ಪಿ.ವಿ.ಸಿ.ಪೈಪ್‍ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತೇವೆ ಎಂದು ಹೇಳಿದರು.

        ಸೊಸೈಟಿ ವ್ಯಾಪ್ತಿಯ ಈಚಘಟ್ಟ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಗೋದಾಮಿದ್ದು, ಸೊಸೈಟಿಯ ಸಹ ಶಾಖೆ ತೆರೆದು ರೈತರಿಗೆ ಅತ್ಯವಶ್ಯಕವಾಗಿರುವ ಗೊಬ್ಬರ, ಅಕ್ಕಿ ಬೇಳೆ, ಬಟ್ಟೆಗಳನ್ನು ಮಾರಾಟ ಮಾಡಿ ಸೊಸೈಟಿಗೆ ಲಾಭ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

        ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಸಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ 2017-18 ನೇ ಸಾಲಿನಲ್ಲಿ ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 30 ಕೋಟಿ 31 ಲಕ್ಷ 77 ಸಾವಿರ ರೂ.ಗಳ ವಹಿವಾಟು ನಡೆಸಿದೆ. ಮೂರು ಕೋಟಿ 25 ಲಕ್ಷ 87 ಸಾವಿರದ ನೂರು ರೂ.ಗಳ ಬೆಳೆ ಸಾಲವನ್ನು ರೈತರಿಗೆ ನೀಡಲಾಗಿದೆ. ಸ್ವ-ಸಹಾಯ ಸಂಘದ ಮಹಿಳೆಯರಿಗೆ 77 ಲಕ್ಷದ 40 ಸಾವಿರ ರೂ.ಗಳ ಸಾಲ ಕೊಡಲಾಗಿದೆ. ಒಂದು ಕೋಟಿ 39 ಲಕ್ಷದ 10 ಸಾವಿರ ರೂ.ಗಳ ಭೂಅಭಿವೃದ್ದಿ ಸಾಲ ನೀಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.

        ಶುದ್ದ ಕುಡಿಯುವ ನೀರಿನ ಘಟಕದಿಂದ ಎರಡು ವರ್ಷಕ್ಕೆ ಮೂರು ಲಕ್ಷ 42 ಸಾವಿರ ರೂ.ಆದಾಯ ಬಂದಿದ್ದು, 75 ಸಾವಿರ ರೂ.ಗಳ ಖರ್ಚಾಗಿದೆ. ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಿದಾಗಿನಿಂದ ಇಲ್ಲಿಯವರೆಗೂ ಸುವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

        ನಿರ್ದೇಶಕರುಗಳಾದ ರುದ್ರೇಶ್, ಈಶಣ್ಣ, ಎ.ಪಿ.ಎಂ.ಸಿ.ಅಧ್ಯಕ್ಷ ಅಂಕಳಪ್ಪ, ಉಮೇಶ್, ತಿಪ್ಪೇರುದ್ರಪ್ಪ, ಇಂದ್ರಮ್ಮ, ಶಿವಕುಮಾರ್ ವೇದಿಕೆಯಲ್ಲಿದ್ದರು. ಸಿಬ್ಬಂದಿಗಳಾದ ಪ್ರಹ್ಲಾದ್, ಕಂಬೇಶ್ ಇವರುಗಳನ್ನು ಸನ್ಮಾನಿಸಲಾಯಿತು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link