ದಾವಣಗೆರೆ
ಮೊಗಲರ ದಾಳಿಯಿಂದ ತತ್ತರಿಸಿದ್ದ ಭಾರತೀಯರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬಿದ ಕೀರ್ತಿ ಛತ್ರಪತಿ ಶ್ರೀಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಬೆಂಗಳೂರಿನ ಉಪನ್ಯಾಸಕ ವಿನಯ್ ವಿ. ಜಾಧವ್ ಅಭಿಪ್ರಾಯಪಟ್ಟರು.ನಗರದ ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್‍ನಲ್ಲಿರುವ ಶ್ರೀಕೃಷ್ಣಭವಾನಿ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಛತ್ರಪತಿ ಶ್ರೀಶಿವಾಜಿ ಮಹಾರಾಜರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮೊಗಲರ ದಾಳಿಗೂ ಮುಂಚೆ ಭಾರತವು ವಿವಿಧ ರಾಜರಿಂದ ಆಡಳಿತಕ್ಕೆ ಒಳ ಪಟ್ಟಿತ್ತು. ಆಗ ನಮ್ಮ ರಾಷ್ಟ್ರ ವಜ್ರ, ವೈಢೂರ್ಯದಿಂದ ತುಂಬಿ ಸಂಪದ್ಭರಿತವಾಗಿತ್ತು. ಆದರೆ, 15ನೇ ಶತಮಾನದ ಅಂತ್ಯದಲ್ಲಿ ಭಾರತದ ಮೇಲೆ ದಾಳಿ ನಡೆಸಿದ ಮೊಗಲರು ನಮ್ಮ 40 ಸಾವಿರಕ್ಕೂ ಹೆಚ್ಚು ದೇವಸ್ಥಾನ, ಮಂದಿರಗಳ ಮೇಲೆ ಆಕ್ರಮಣ ನಡೆಸಿ, ಅವುಗಳಲ್ಲಿದ್ದ ಸಂಪತ್ತು ಲೂಟಿ ಮಾಡಿದ್ದಲ್ಲದ್ದೇ, ನಮ್ಮ ದೇಶದ ಜ್ಞಾನ ಕೇಂದ್ರಗಳಾಗಿದ್ದ ನಲಂದ ವಿಶ್ವವಿದ್ಯಾಲಯ ಹಾಗೂ ತಕ್ಷಶಿಲಾ ವಿಶ್ವ ವಿದ್ಯಾಲಯಗಳಿಗೆ ಬೆಂಕಿ ಇಟ್ಟಿದ್ದರು.
ಈ ಸಂದರ್ಭದಲ್ಲಿ ಗರ್ಭವತಿಯಾಗಿದ್ದ ಜಿಜಾಮಾತ ಮೊಗಲರ ಅಟ್ಟಹಾಸ ಹುಟ್ಟಡಗಿಸಿ, ಸಮಾಜದ ದಿಕ್ಕು ಬದಲಿಸಬಲ್ಲ ಮಗುವನ್ನು ಈ ಸಮಾಜಕ್ಕೆ ನೀಡಬೇಕೆಂಬ ಕನಸು ಕಂಡಿದ್ದರು. ಅಲ್ಲದೆ, ಶಿವಾಜಿಯ ಜನನದ ನಂತರ ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳುವ ಮೂಲಕ ಸಾಹಸಿಯನ್ನಾಗಿಸಿದರು.
ಇನ್ನೂ ದಾದಾಜಿ ಕೊಂಡದೇವರಿಂದ ತರಬೇತಿ ಪಡೆದ ಶಿವಾಜಿ ಮಹಾಪರಾಕ್ರಮಿಯಾಗಿ, ಘಟ್ಟಪ್ರದೇಶದಲ್ಲಿ ದರೋಡ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಾವಳ್ಳಿ ಸಮುದಾಯದ ಹುಡುಗರಿಗೆ ಮೌಲ್ಯಯುತ ಶಿಕ್ಷಣ ನೀಡಿ, ಮನ ಪರಿವರ್ತಿಸಿ ತನ್ನ ಸೇನೆಯಲ್ಲಿ ಸೇರಿಸಿಕೊಂಡು ಯುದ್ಧ ನಡೆಸುವ ಮೂಲಕ ಒಂದೊಂದೇ ಕೋಟೆಗಳನ್ನು ಗೆಲ್ಲಲಾರಂಭಿಸಿ ದಕ್ಷಿಣ ಭಾರತದ ಛತ್ರಪತಿಯಾಗಿ ಹೊರಹೊಮ್ಮಿದ್ದರು ಎಂದು ವಿಶ್ಲೇಷಿಸಿದರು.
ಶಿವಾಜಿಯವರ ಯುದ್ಧ ನೀತಿಯಿಂದಾಗಿ ಕಣ್ಣು ಕೆಂಪಾಗಿಸಿಕೊಂಡಿದ್ದ ಬಿಜಾಪುರ ಸುಲ್ತಾನ, ಶಿವಾಜಿಯನ್ನು ಕಟ್ಟಿ ಹಾಕಲು 1648ರಲ್ಲಿ ಶಿವಾಜಿಯವರ ತಂದೆ ಷಹಾಜಿ ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಚಾಣಕ್ಷತನದಿಂದ ದೆಹಲಿ ಸುಲ್ತಾನರಿಗೆ ಪತ್ರ ಬರೆದು ತಂದೆಯನ್ನು ಬಿಡಿಸಿಕೊಂಡು.
ಬಿಜಾಪುರ ಸುಲ್ತಾನನ ಸೋದರ ಅಫ್ಜಲ್ ಖಾನ್‍ನ ವಧೆಯ ಮೂಲಕ ವಿಜಯಿ ಆದರು. ಬಳಿಕೆ ದೆಹಲಿಯ ಔರಂಗಜೇಬ್ ಶಿವಾಜಿ ಅವರನ್ನು ಬಂಧನದಲ್ಲಿಟ್ಟಾಗ ಅಲ್ಲಿಂದ ತಪ್ಪಿಸಿಕೊಂಡು ಬಂದು ಒಂದೊಂದೇ ಕೋಟೆಗಳನ್ನು ಗೆಲ್ಲುವ ಮೂಲಕ ದಕ್ಷಿಣ ಭಾರತದ ಛತ್ರಪತಿಯಾದರು ಎಂದು ಮಾಹಿತಿ ನೀಡಿದರು.
ಮಗ ತಪ್ಪು ಮಾಡಿದ ಕಾರಣಕ್ಕೆ ಆರು ತಿಂಗಳ ಕಾಲ ಸೆರೆಮನೆ ವಾಸದಲ್ಲಿಟ್ಟಿದ್ದ ಏಕೈಕ ರಾಜ ಶಿವಾಜಿ ಮಹಾರಾಜರಾಗಿದ್ದಾರೆ ಎಂದ ಅವರು, ದೇಹಿ ಎಂದು ಬಂದ ಶತೃಗಳಲ್ಲಿ ಮಿತ್ರತ್ವವನ್ನು ಕಾಣುವ ವ್ಯಕ್ತಿತ್ವ ಶಿವಾಜಿವರದ್ದಾಗಿದ್ದು, ಇಂತಹ ಶಿವಾಜಿ ಬರೀ ಮರಾಠ ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಇವರು ಇಡೀ ಭಾರತೀಯರ ಆಸ್ತಿ ಎಂದರು.
ಮೇಯರ್ ಶೋಭಾ ಪಲ್ಲಾಘಟ್ಟೆ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಸದೃಢ ನಿರ್ಧಾರ ಕೈಗೊಳ್ಳುವ ಮೂಲಕ ಮರಾಠ ಸಾಮ್ರಾಜ್ಯದ ಛತ್ರಪತಿಯಾದ ಶಿವಾಜಿ ಮಹಾರಾಜರಿಗೆ ಸರಿ ಸಮಾನರು ಮತ್ತೊಬ್ಬರಿಲ್ಲ ಎಂದರು.ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಮಾತಾ ಜೀಜಾಬಾಯಿಯವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಜೀಜಾಬಾಯಿಯವರ ಆದರ್ಶಗಳನ್ನು ಮಹಿಳೆಯರು ಮೈಗೂಡಿಸಿಕೊಂಡರೆ, ಪ್ರತಿ ಮಕ್ಕಳನ್ನೂ ಶಿವಾಜಿ ಮಹಾರಾಜರಂತ ಸಾಹಸಿಯನ್ನಾಗಿಸಬಹುದು ಎಂದರು.
ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾಲತೇಶರಾವ್ ಡಿ. ಜಾಧವ್ ಮಾತನಾಡಿ, ಶಿವಾಜಿ ಮಹಾರಾಜರು ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಎಲ್ಲಾ ಜಾತಿ-ಜನಾಂಗದವರಿಗೂ ಸಂಬಂಧಪಟ್ಟ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಎಲ್ಲರೂ ಸೇರಿ ಶಿವಾಜಿಯವರ ಜಯಂತಿಯನ್ನು ಆಚರಿಸಿದರೆ ಒಳ್ಳೆಯದು. ಅಲ್ಲದೇ, ಶಿವಾಜಿ ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಉಪ ಮೇಯರ್ ಕೆ.ಚಮನ್ ಸಾಬ್, ಸದಸ್ಯ ಹಂಚಿನಮನೆ ತಿಪ್ಪಣ್ಣ, ಜೀಜಾಬಾಯಿ ಮಹಿಳಾ ಸಂಘದ ಗೌರಾಬಾಯಿ, ಸಮಾಜದ ಮುಖಂಡರಾದ ಅಜ್ಜಪ್ಪ ಪವಾರ್, ವೈ.ಮಲ್ಲೇಶ್ ಮತ್ತಿತರರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಬೀರೇಶ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
