ಚಳ್ಳಕೆರೆ
ರಾಷ್ಟ್ರದಲ್ಲಿ ವೀರ ಪರಾಕ್ರಮದ ಜೊತೆಯಲ್ಲಿ ಧೈರ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸಿ ಪ್ರಜೆಗಳ ಸಂರಕ್ಷಣೆಯೊಂದಿಗೆ ಸಾಮ್ರಾಜ್ಯ ವಿಸ್ತರಣೆಯಲ್ಲೂ ಸಹ ವಿಶೇಷ ಆಸಕ್ತಿ ತೋರಿದ ಅಸಮಾನ್ಯ ಮಹಾರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಸಹ ಒಬ್ಬರಾಗಿದ್ದಾರೆ.ಅವರ ಆಡಳಿತದಲ್ಲಿ ಜನರ ಯೋಗ ಕ್ಷೇಮ ಹಾಗೂ ಸಮರ್ಥ ಆಡಳಿತ ನೀಡುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರು ಚರಿತ್ರೆಯಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಮರಾಠ ಸಮಾಜದ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿಶೇಷವಾಗಿ ಈ ಸಮುದಾಯದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಶೌರ್ಯ ಸಾಹಸಗಳಿಗೆ ಹೆಸರಾದವರು. ಎಲ್ಲರೊಂದಿಗೂ ವಿಶ್ವಾಸದೊಂದಿಗೆ ಬೆರೆಯುವ ಮರಾಠ ಜನಾಂಗ ತಮ್ಮ ಸಮುದಾಯದ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಛತ್ರಪತಿ ಶಿವಾಜಿ ಮಹಾರಾಜರು ಈ ರಾಷ್ಟ್ರ ಕಂಡ ಅಪ್ರತಿಮ ವೀರರಲ್ಲಿ ಒಬ್ಬರು. 1200 ರಿಂದ 1800ರ ಅವಧಿಯ ಶತಮಾನಗಳು ಯುದ್ದದ ಶತಮಾನಗಳಾಗಿ ದಾಖಲೆ ಸೇರಿವೆ. ಈ ಅವಧಿಯಲ್ಲಿ ಅನೇಕ ಮಹಾರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ದವನ್ನು ಕೈಗೊಂಡಿದ್ದರು. ಶಿವಾಜಿ ಮಹಾರಾಜರು ಸಹ ನಿರಂತರವಾಗಿ ಯುದ್ದ ಮಾಡುತ್ತಾ ಅನೇಕ ಸಂಸ್ಥಾನಗಳನ್ನು ಗೆಲ್ಲುತ್ತಾ ರಾಜ್ಯ ವಿಸ್ತರಣೆಗೆ ಮುಂದಾಗಿದ್ದರು ಎಂದರು.
ಉಪನ್ಯಾಸ ನೀಡಿದ ಕನ್ನಡ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ, ಚಿಕ್ಕಂದಿನಿಂದಲೇ ಛóತ್ರಪತಿ ಶಿವಾಜಿ ಅನೇಕ ಸಾಹಸಗಳ ಮೂಲಕ ಜನರ ಮನಸೆಳೆದರು. ಶಿವಾಜಿಯವರಿಗೆ ಅವರ ತಾಯಿ ಜೀಜಾಬಾಯಿ ಉತ್ತಮ ಮಾರ್ಗದರ್ಶಿಯಾಗಿದ್ದರು. ಮರಾಠ ಸಮುದಾಯದ ಹೆಗ್ಗಳಿಕೆಯ ವೀರಪುತ್ರರಾದ ಶಿವಾಜಿ ಮಹಾರಾಜು ತಮ್ಮ ಆಡಳಿತ ಕಾಲದಲ್ಲಿ ರೈತರ ಹಿತಕಾಯುವಲ್ಲಿ ಯಶಸ್ಸಿಯಾದರು.
ರೈತ ಸಮುದಾಯಕ್ಕೆ ಗೊಬ್ಬರ ಬೀಜ ವಿತರಣೆಯಲ್ಲದೆ ಜಮೀನುಗಳ ಸರ್ವೆ ಸಹ ಮಾಡಿಸುವ ಮೂಲಕ ರೈತರ ಸಂಕಷ್ಟಗಳಿಗೆ ನೆರವಾದರು. ಶಿವಾಜಿ ಮಹಾರಾಜರ ಕಾಲದಲ್ಲೇ ಗ್ರಾಮ ಲೆಕ್ಕಿಗ ಪದ್ದತಿ ಜಾರಿಗೆ ಬಂತು. ಮರಾಠ ಸಮುದಾಯ ಈ ಅಪ್ರತಿಮ ವೀರನ ಚಾಕಚಕ್ಯತೆಯನ್ನು ಮೈಗೂಡಿಸಿಕೊಂಡು ಪ್ರಗತಿಯತ್ತ ಹೆಜ್ಜೆ ಹಾಕಬೇಕು ಎಂದರು.
ಮರಾಠ ಸಮಾಜದ ಅಧ್ಯಕ್ಷ ವಿ.ನಾರಾಯಣರಾವ್ ಮೋಹಿತೆ ಮಾತನಾಡಿ, ರಾಜ್ಯ ಸರ್ಕಾರ 6ನೇ ಬಾರಿಗೆ ಈ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟಿರುವುದು ಸ್ವಾಗತಾರ್ಹ ವಿಷಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಎಲ್ಲರಿಗೂ ತಿಳಿದಂತೆ ದೇಶ ಹಾಗೂ ಜನರ ರಕ್ಷಣೆಯ ಮುಂಚೂಣಿ ಅಗ್ರಗಣ್ಯ ನಾಯಕ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೂತನವಾಗಿ ನಿರ್ಮಾಣವಾಗಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರು ಇಡುವಂತೆ ಮನವಿ ಮಾಡಿದರು. ಅದೇ ರೀತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸಿದ ಇವರಿಗೆ ಸಚಿವ ಸ್ಥಾನದೊರಕದೇ ಇರುವುದಕ್ಕೆ ಇಡೀ ಸಮುದಾಯ ಬೇಸರಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಿ.ವಿಷ್ಣೂಜಿರಾವ್ ಗುಜ್ಜಾರ್, ಕಾರ್ಯದರ್ಶಿ ನಾಗರಾಜ ಗುಜ್ಜಾರ್, ಸಮಾಜದ ಹಿರಿಯ ಮುಖಂಡರಾದ ಭಾಸ್ಕರ್‍ರಾವ್, ಅಬಾಸೋಪವಾರ್, ಹರಿಕೃಷ್ಣ, ಅಂಬೇಕರ್, ಬುದ್ದುಪ್ರಸಾದ್ ಮುಂತಾದವರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ, ಅಧ್ಯಕ್ಷ ವಿ.ನಾರಾಯಣರಾವ್ ಮೋಹಿತೆ ಹಾಗೂ ಪ್ರಾಧ್ಯಾಪಕ ಕೆ.ಚಿತ್ತಯ್ಯನವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಸಿ.ಕವಿತಾಬೋರಣ್ಣ, ಎಂ.ಜೆ.ರಾಘವೇಂದ್ರ, ಎಂ.ಸಾವಿತ್ರಿ, ಆರ್.ಮಂಜುಳಾ, ಟಿ.ಚಳ್ಳಕೆರೆಯಪ್ಪ, ಕೆ.ವೀರಭದ್ರಯ್ಯ, ಜೈತುಂಬಿ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಬಿಸಿಎಂ ಅಧಿಕಾರಿ ಜಗನ್ನಾಥ, ಎಸ್.ಎಚ್.ಸೈಯದ್, ಆರ್.ಪ್ರಸನ್ನಕುಮಾರ್, ದೊಡ್ಡರಂಗಪ್ಪ, ಶಿವಣ್ಣ, ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಡಿ.ಶ್ರೀನಿವಾಸ್ ಸ್ವಾಗತಿಸಿ, ವಂದಿಸಿದರು.