ತುಮಕೂರು
ಪ್ರತಿವರ್ಷದಂತೆ ಈ ವರ್ಷವೂ ತುಮಕೂರು ನಾಗರಿಕ ಸಮಿತಿ ವತಿಯಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೆ ಜನ್ಮ ದಿನೋತ್ಸವ ಹಾಗೂ ಗುರುವಂದನಾ ಸಮಾರಂಭವನ್ನು ಏ.1 ರಂದು ಸಂಜೆ ಏರ್ಪಡಿಸಲಾಗಿದೆ ಎಂದು ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಇರುವುದರಿಂದ ರಾಜಕೀಯ ಲೇಪನ ಇಲ್ಲದೆ, ನಮ್ಮ ಕಾರ್ಯಕ್ರಮಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ನಾಡೋಜ ಚಂದ್ರಶೇಖರ ಕಂಬಾರ, ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ್ ಆಗಮಿಸಲಿದ್ದಾರೆ. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮಿಗಳು ಉಪಸ್ಥಿತರಿರುತ್ತಾರೆ. ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸುಮಾರು 30 ಸಾವಿರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಅಷ್ಟು ಜನಕ್ಕೂ ದಾಸೋಹದ ವ್ಯವಸ್ಥೆ ಏರ್ಪಡಿಸಲಾಗುವುದು. ಆಹಾರ ಪರಿವೀಕ್ಷಕರಿಂದ ಆಹಾರವನ್ನು ಪರೀಕ್ಷೆ ಮಾಡಿಸಿದ ನಂತರವೇ ದಾಸೋಹ ಮಾಡಲಾಗುತ್ತದೆ. ಏ.1ರ ಮಧ್ಯಾಹ್ನ 12 ಗಂಟೆಯಿಂದಲೇ ಅನ್ನದಾಸೋಹ ಪ್ರಾರಂಭವಾಗುತ್ತದೆ ಎಂದು ತಿಳಿಸಿದರಲ್ಲದೆ, ಅಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಸಿದ್ದಗಂಗಾ ಶ್ರೀಗಳ ಬಗ್ಗೆ ರಚನೆ ಮಾಡಿದ ಹಾಡುಗಳನ್ನು ಗಾಯನ ಮಾಡಲಾಗುವುದು. ಅಲ್ಲದೆ ವಚನ ಸಾಹಿತ್ಯ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಸ್ವಾಮೀಜಿ ಜೀವಿತಕಾಲದಲ್ಲಿ ಹೇಗೆ ಎಲ್ಲಾ ಜಿಲ್ಲೆಗಳಲ್ಲಿ ಜನ್ಮದಿನೋತ್ಸವ ಆಚರಣೆ ಮಾಡಲಾಗುತ್ತಾ ಬರುತ್ತಿತ್ತೊ ಅದೇ ರೀತಿ ಈ ವರ್ಷವೂ ಇನ್ನೂ ಹೆಚ್ಚಾಗಿ ಅವರ ಸ್ಮರಣೆ ಮಾಡುತ್ತಾ ಪುಣ್ಯಾರಾಧನೆಯನ್ನು ಮಠದಲ್ಲಿ ಹಾಗೂ ತುಮಕೂರು ನಗರದಲ್ಲಿ ಜನ್ಮೋತ್ಸವವನ್ನು ಮಾಡುವ ಅಭಿಲಾಷೆ ಹೊಂದಿದ್ದೇವೆ. ಮಾ.31 ರಂದು ಶ್ರೀಗಳ ಭಾವಚಿತ್ರದ ಮೆರವಣಿಗೆಯನ್ನು ಮಾಡಲಿದ್ದು, ಎಸ್‍ಐಟಿ ರಸ್ತೆ, ಗಂಗೋತ್ರಿ, ಸೋಮೇಶ್ವರ ರಸ್ತೆ, ರಾಧಾಕೃಷ್ಣ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಚಂದ್ರಣ್ಣ, ಪರಮೇಶ್ವರ್, ವೆಂಕಟೇಶ್, ಮಂಜಣ್ಣ, ಧನಿಯಾಕುಮಾರ್, ಕೊಪ್ಪಳ್ ನಾಗರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಶ್ರೀಗಳಿಗೆ ದಾಸೋಹ ಎಂಬುದು ಮುಖ್ಯವಾಗಿತ್ತು. ಅವರು ಕೈಲಾಸದಲ್ಲಿಂದಲೇ ನಮ್ಮನ್ನು ನೋಡುವವರಿದ್ದಾರೆ. ಇಂದು ಅವರು ದೈಹಿಕವಾಗಿ ನಮ್ಮಲ್ಲಿ ಇಲ್ಲದಿದ್ದರೂ ಹಬ್ಬದೋಪಾದಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಬೇಕು ಎಂಬುದು ನಮ್ಮ ಆಶಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
