ತುಮಕೂರು
ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನೋತ್ಸವವನ್ನು ಅದ್ದೂರಿಯಿಂದ ಆಚರಣೆ ಮಾಡಲಿದ್ದು, ಏಪ್ರಿಲ್ ತಿಂಗಳ 1ರಂದು ನಡೆಯಲಿದೆ ಎಂದು ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮಿ ಮಹಾಸ್ವಾಮಿಗಳು ತಿಳಿಸಿದರು.
ಸಿದ್ದಗಂಗಾ ಮಠದ ಆಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತೀ ವರ್ಷದಂತೆ ಈ ವರ್ಷವೂ ಶ್ರೀಗಳ ಜನ್ಮದಿನಾಚರಣೆಯನ್ನು ಜಯಂತಿಯಾಗಿ ಆಚರಣೆ ಮಾಡಲಿದ್ದು, ಚುನಾವಣಾ ನೀತಿ ಸಂಹಿತೆ ಇರುವುದಿಂದ ಯಾವುದೇ ರಾಜಕೀಯ ಮುಖಂಡರುಗಳನ್ನು ಆಹ್ವಾನಿಸದೇ ಕೇವಲ ವಿವಿಧ ಮಠಾಧೀಶರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ ಎಂದರು.
ಅಂದು ನಡೆಯಲಿರುವ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ದಿವ್ಯಸಾನ್ನಿಧ್ಯ ವಹಿಸುವ ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಎಂ.ಎಸ್.ಶಶಿಧರ್ ವಿರಚಿತ ಚಿತ್ರಸಂಗಮ ಎಂಬ ಗ್ರಂಥ ಬಿಡುಗಡೆ ಮಾಡಲಿದ್ದಾರೆ.
ಮುಂಡರಗಿ ಸಂಸ್ಥಾನಮಠದ ಜಗದ್ಗುರು ಶ್ರೀ ಅನ್ನದಾನಮಹಾಸ್ವಾಮಿಗಳು ಹಿ ಹಿಂದು ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಕಾಫಿ ಟೇಬಲ್ ಎಂಬ ಪುಸ್ತಕವನ್ನು ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾಪನಾಮಠದ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಲಿದ್ದಾರೆ. ಮಂಡ್ಯದ ಪ್ರದೀಪ್‍ಕುಮಾರ್ ಹೆಬ್ರಿಯವರು ರಚಿಸಿದ ಪರಂಜ್ಯೋತಿ ಎಂಬ ಪುಸ್ತಕವನ್ನಹು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ತ ಶ್ರೀಪಾದಂಗಳವರು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಲು ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಲಿದ್ದಾರೆ. ಜೊತೆಗೆ ತೋಂಟದಾರ್ಯ ಮಹಾಸಂಸ್ಥಾನ ಮಠದ ಡಾ. ಶ್ರೀ ತೋಂಟದ ಸಿದ್ದರಾಮಮಹಾಸ್ವಾಮಿಗಳು, ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಚಂದ್ರಶೇಕರ ಶಿವಾಚಾರ್ಯ ಮಹಾಸ್ವಾಮಿಗಳು, ಹೊಸಪೇಟೆಯ ಕೊಟ್ಟೂರುಸ್ವಾಮಿ ಮಹಾಸಂಸ್ಥಾನ ಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶ್ರೀ ಸದಾಶಿವಮಹಾಸ್ವಾಮಿಗಳು ನುಡಿನಮನ ಸಲ್ಲಿಸಲಿದ್ದಾರೆ.
ಶಿವಕುಮಾರ ಸ್ವಾಮಿ ಡೆವೋಟೀಸ್ ಅಸೋಸಿಯೇಷನ್‍ನಿಂದ 112 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಲಾಗುತ್ತಿದೆ. ಉಳಿದಂತೆ ಮಠಕ್ಕೆ ಹಾಗೂ ಸಮಾರಂಭಕ್ಕೆ ಬರುವಂತಹ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ, ಭೋಜನದ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮವು ಬೆಳಗ್ಗೆ 10.15ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯ ನಂತರ ಗಾಯಕಿ ಸಂಗೀತಕಟ್ಟಿಯವರಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಸ್‍ಐಟಿ ನಿರ್ದೇಶಕರಾದ ಎಂ.ಎನ್.ಚನ್ನಬಸಪ್ಪ, ವಿಶ್ವನಾಥ್, ಟಿ.ಕೆ.ನಂಜುಂಡಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








