ಜೀವನದಲ್ಲಿನ ಕೊರತಯೇ ಸಾಧನೆಗೆ ಪ್ರೇರಣೆ

ದಾವಣಗೆರೆ:

     ಜೀವನದಲ್ಲಿ ಏನಾದರೂ ಕೊರತೆ ಇದ್ದಾಗ ಮಾತ್ರ ಮನುಷ್ಯ ಹೋರಾಟದ ಮೂಲಕ ಸಾಧನೆಯತ್ತ ಮುಖ ಮಾಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಪಾದಿಸಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಲಿಂ.ಡಾ||ಶ್ರೀಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ ಅಭಿಮಾನಿಗಳವರ ಭಕ್ತ ವೃಂದ, ಸುವರ್ಣ ಕರ್ನಾಟಕ ವೇದಿಕೆ ಹಾಗೂ ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರ ಗೂಡ್ಸ್ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠದ ಲಿಂ.ಡಾ||ಶ್ರೀಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 7ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅನ್ನಸಂತರ್ಪಣೆ, ಬಡ ಮಕ್ಕಳಿಗೆ ನೋಟ್ ಬುಕ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮನುಷ್ಯನಿಗೆ ಜೀವನದಲ್ಲಿ ಏನಾದರೂ ಕೊರತೆ ಇದ್ದರೆ, ಅದನ್ನು ನಿಭಾಯಿಸಲು ಹೋರಾಟದ ಮೂಲಕ ಸಾಧನೆ ಮಾಡಲು ಹಾತೊರೆಯುತ್ತಾನೆ. ಹೀಗಾಗಿ ಕೊರತೆಯೇ ಸಾಧನೆಗೆ ಪ್ರೇರಣೆ ಆಗಲಿದೆ. ನಾವು ಓದುತ್ತಿದ್ದ ಸಂದರ್ಭದಲ್ಲಿ ಕಲಿಕೆಗೆ ಬೇಕಾಗಿರುವ ಕನಿಷ್ಠ ಸೌಲಭ್ಯಗಳೂ ಇರಲಿಲ್ಲ. ನಾನು ಕಾಲಿಗೆ ಚಪ್ಪಲಿ ಕಂಡಿದ್ದೆ ಪಿ.ಯು.ಸಿ.ಗೆ ಬಂದಾಗ. ಆದರೆ, ಈಗಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

   ಮಕ್ಕಳ ಕಲಿಕೆಗೆ ಉತ್ತೇಜನ ನೀಡಬೇಕೆಂಬ ಸದುದ್ದೇಶದಿಂದ ಸರ್ಕಾರ ಬಿಸಿಯೂಟ, ಪಠ್ಯ ಪುಸ್ತಕ, ಶೂ ಭಾಗ್ಯ, ಸೈಕಲ್ ವಿತರಣೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೂ ಮಕ್ಕಳು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುತ್ತಿಲ್ಲ. ಇದನ್ನು ಗಮನಿಸಿದಾಗ ಏನಾದರೂ ಕೊರತೆ ಇದ್ದರೆ ಮಾತ್ರ ಸಾಧ್ಯ ಸಾಧ್ಯ ಎಂದೆನ್ನಿಸುತ್ತಿದೆ. ಎಲ್ಲವೂ ಇದ್ದರೆ ಮನುಷ್ಯ ಏನಕ್ಕಾಗಿ ಹೋರಾಡಬೇಕು ಎಂಬ ಜಿಜ್ಞಾಸೆಗೆ ಒಳಗಾಗಿ ಸಾಧನೆ ಮಾಡುವುದನ್ನೇ ಕೈಬಿಟ್ಟು ಬಿಡುತ್ತಾನೆ ಎಂದು ವಿಶ್ಲೇಷಿಸಿದರು.

    ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‍ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮೊಬೈಲ್ ಬಗ್ಗೆ ತಿಳುವಳಿಕೆ ಹೊಂದುವುದೇ ಸಾಧನೆಯಲ್ಲ. ಕರೆಂಟ್ ಹೊಡೆದರೆ ಹೇಗೆ ದೂರವಿರುತ್ತೇವೋ ಹಾಗೆಯೇ ಮೊಬೈಲ್ ಮುಟ್ಟಿದಾಗ ಷಾಕ್ ಆದ ರೀತಿ ದೂರವಿರಬೇಕು ಎಂದು ಸಲಹೆ ನೀಡಿದ ಅವರು, ಶಿಕ್ಷಕರು ಮಕ್ಕಳಲ್ಲಿ ದೊಡ್ಡ ಕನಸು ಬಿತ್ತಬೇಕು. ಈಗ ಬಿತ್ತಿದ ಕನಸು ಹತ್ತು ವರ್ಷಗಳ ನಂತರ ಫಲ ನೀಡುತ್ತದೆ. ಆದ್ದರಿಂದ ಮಕ್ಕಳು ದೊಡ್ಡ ಕನಸು ಕಾಣುವುದರ ಜೊತೆಗೆ ಅದನ್ನು ನನಸು ಮಾಡುವತ್ತ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ, ಎಲ್ಲಾ ಸ್ವಾಮೀಜಿಗಳೂ ಒಂದೇ ಎಂಬುದಾಗಿ ಭಾವಿಸಿ ಎಲ್ಲರನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗಬಾರದು. ಏಕೆಂದರೆ, ಸ್ವಾಮೀಜಿ ಸ್ಥಾನಕ್ಕೆ ಘನತೆ ಇರುತ್ತದೆ. ಆ ಘನತೆಯನ್ನು ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರು ಕೊನೆಯ ವರೆಗೂ ಉಳಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದರು ಎಂದು ಸ್ಮರಿಸಿದರು.

     ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ವಿಶಿಷ್ಟವಾದದ್ದು. ಶಿಕ್ಷಕರ ಮಾತುಗಳಿಗೆ ವಿದ್ಯಾರ್ಥಿಗಳು ಬೆಲೆ ಕೊಡುತ್ತಾರೆ. ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ನಂತರವೂ ಬೇರೆಲ್ಲ ಹುದ್ದೆಯಲ್ಲಿ ಇರುವವರಿಗಿಂತ ಹೆಚ್ಚು ಗೌರವ ಪಡೆಯುತ್ತಾನೆ. ಆದ್ದರಿಂದ ಶಿಕ್ಷಕರು ತಮ್ಮ ವೃತ್ತಿ ಘನತೆಯನ್ನು ಅರಿತು ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸಬೇಕೆಂದು ಕಿವಿಮಾತು ಹೇಳಿದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಚಿಕ್ಕ ವಯಸ್ಸಿನಿಂದಲೇ ವಿಶಿಷ್ಟತೆಗಳನ್ನು ಹೊಂದಿದ್ದರು. ಅವರಲ್ಲಿ ಕ್ಷಾತ್ರ ತೇಜಸ್ಸು ಇತ್ತು. ಇದನ್ನು ಗಮನಿಸಿದ ಮನಗೂಳಿ ಮಠದ ಶ್ರೀಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿಕೊಂಡಿದ್ದರು. ಮಹಾಂತ ಶ್ರೀಗಳು ತಮ್ಮ ಧಾರ್ಮಿಕ ಚಟುವಟಿಕೆ ಹಾಗೂ ಪೂಜಾ ವಿಧಿ ವಿಧಾನಗಳಿಗೆ ಬದ್ಧತೆ ಹೊಂದಿದ್ದರು. ಅವರ ಆದರ್ಶವನ್ನು ಮೈಗೂಸಿಡಿಸಿಕೊಂಡರೆ ಸಮಾಜ ಸನ್ಮಾರ್ಗದಲ್ಲಿ ಸಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದರು.

     ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ನಿವೃತ್ತ ಶಿಕ್ಷಕರಾದ ಜಿ.ಇ. ನಾಗರತ್ನಮ್ಮ, ದಾವಣಗೆರೆ ವಿ.ವಿ.ಯಲ್ಲಿ ಪತ್ರಿಕೋದ್ಯಮದ ವಿಭಾಗದ ಪ್ರಥಮ ರ್ಯಾಂಕ್ ವಿಜೇತೆ, ಪತ್ರಕರ್ತೆ ಕೆ.ಎಂ. ನಂದಿನಿ, ಗಾನಶ್ರೀ ಸ್ವರಾಲಯದ ಸಂಗೀತ ರಾಘವೇಂದ್ರ, ಪೊಲೀಸ್ ಇಲಾಖೆಯ ಕೆ.ಪಿ.ದುಗ್ಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ನಿವೃತ್ತ ಶಿಕ್ಷಕ ಕೂಲಂಬಿ ಮುರುಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿ ನಿರಂಜನಮೂರ್ತಿ, ಲಿಂ.ಡಾ||ಶ್ರೀಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ ಅಭಿಮಾನಿಗಳವರ ಭಕ್ತ ವೃಂದದ ಮಹಾಂತೇಶ್ ವಿ. ಒಣರೊಟ್ಟಿ, ಪಳನಿಸ್ವಾಮಿ, ಆರ್.ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಎಂ.ಆರ್. ಹೆಗಡೆ ಸ್ವಾಗತಿಸಿದರು. ಬೆಳ್ಳೂಡಿ ಶಿವಕುಮಾರ್ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ