ತುಮಕೂರು:
ಮನುಷ್ಯನನ್ನು ನಿಕೃಷ್ಟವಾಗಿ ಕಾಣುವ ಪದ್ಧತಿಯನ್ನು ಇಟ್ಟುಕೊಂಡು ಯಾವ ಹಿಂದೂತ್ವವನ್ನು ಪ್ರತಿಪಾದಿಸಲು ಹೊರಟಿದ್ದೀರಿ,ಯಾವ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿದ್ದೀರಿ, ಒಟ್ಟಾಗಿ ದೇಶವನ್ನು ಕಟ್ಟೋಣ ಎಂದು ಚಿಂತಕ ಮಹೇಂದ್ರಕುಮಾರ್ ಹೇಳಿದರು.
ನಗರದ ವೀರಸಾಗರ ಬಳಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಿಎಎ,ಎನ್‍ಆರ್‍ಸಿ ವಿರೋಧಿಸಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಲಿತರನ್ನು ದೇವಸ್ಥಾನಕ್ಕೆ ಬಿಟ್ಟುಕೊಳ್ಳಲು ಆಗದ ಹಿಂದೂತ್ವವನ್ನು ನಾವು ಒಪ್ಪಬೇಕೆ? ಯಾವ ಹಿಂದೂತ್ವದ ಆಧಾರದ ಮೇಲೆ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತಿದ್ದೀರಿ? ಇಂತಹವರಿಂದ ದೇಶವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಸಮುದಾಯವನ್ನು ಒಡೆಯುತ್ತಾರೆ, ಸಮಾಜವನ್ನು ಕಟ್ಟಲು ಪಕ್ಷವನ್ನು ಬಿಟ್ಟು ಒಂದಾಗಬೇಕಿದೆ, ದೇಶ ನನ್ನದು ಎನ್ನುವ ಭಾವನೆಯನ್ನು ಕಲಿಯಬೇಕಿದೆ, ಹಿಂದೂ ಮುಸ್ಲಿಂರ ನಡುವೆ ಇರುವ ಗೋಡೆಯನ್ನು ಒಡೆದು ದೇಶವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ಮಾಡಬೇಕಿದ್ದು, ಕಿಡಿಗೇಡಿಗಳಿಂದ ದೇಶವನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ದೇಶದ ಮೂಲನಿವಾಸಿಗಳು ಮುಸ್ಲಿಂರಾಗಿದ್ದಾರೆ, ಇದಕ್ಕೆ ಬ್ರಾಹ್ಮಣ್ಯ ಕಾರಣ, ದೇಶದಲ್ಲಿ ಬ್ರಾಹ್ಮಣರ ಸ್ವಾರ್ಥದಿಂದ ಸಮಾಜವನ್ನು ಒಡೆದಿದ್ದೀರಿ, ನೀವು ಬದಲಾಗದೇ ಇರುವುದರಿಂದಲೇ ಮುಸ್ಲಿಂರಾದರು, ದಲಿತರು ಹಿಂದೂತ್ವ ಎಂದರೆ ಅಂಬೇಡ್ಕರ್ ಅವರಿಗೆ ದ್ರೋಹ ಬಗೆದಂತೆ, ಆರ್‍ಎಸ್‍ಎಸ್ ಹೇಳುವ ಹಿಂದೂತ್ವ ಈ ನೆಲಕ್ಕೆ ದ್ರೋಹ ಬಗೆದಂತೆ, ದಲಿತ ಯುವಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ಸಿಎಎ, ಎನ್‍ಆರ್‍ಸಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ, ಈ ದೇಶದ ಮೂಲ ನಿವಾಸಿಗಳನ್ನು ಈ ದೇಶದಿಂದ ಹೊರಹಾಕಲು ಯಾರಿಂದಲೂ ಸಾಧ್ಯವಿಲ್ಲ, ಈ ದೇಶದ ದಲಿತರು ಹಾಗೂ ಮುಸ್ಲಿಂರು ಹಾಗೂ ಬಡ ಬ್ರಾಹ್ಮಣ ಪರವಾಗಿ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.
ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ, ಸಿಎಎ ಹಾಗೂ ಎನ್‍ಆರ್‍ಸಿಯಿಂದ ಅಸ್ಸಾಂನಲ್ಲಿ ಮಾಜಿ ಮುಖ್ಯಮಂತ್ರಿ, ಸೈನಿಕರು ಡಿಟೆಕ್ಷನ್ ಕ್ಯಾಂಪ್‍ನಲ್ಲಿದ್ದಾರೆ, ಈ ದೇಶದ ಮಾಜಿ ರಾಷ್ಟ್ರಪತಿಯ ಕುಟುಂಬವು ಜೈಲಿನಲ್ಲಿದೆ ಅಂತಹ ಕರಾಳ ಕಾನೂನು ಇದಾಗಿದೆ, ಈ ದೇಶವನ್ನು ಕಟ್ಟಿದ್ದು ಇಲ್ಲಿನ ಮೂಲನಿವಾಸಿಗಳೇ ಹೊರತು ಅನ್ನಕ್ಕಾಗಿ ವಲಸೆ ಬಂದ ಗುಲಾಮರಲ್ಲ, ಮಧ್ಯ ಏಷ್ಯಾದಿಂದ ವಲಸೆ ಬಂದವರು ಇಂದು ದೇಶದ ಮೂಲನಿವಾಸಿಗಳ ಪೌರತ್ವದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ, ಧರ್ಮವನ್ನು ಬಿಟ್ಟು ರಾಷ್ಟ್ರವನ್ನು ಕಟ್ಟಲು ಮುಂದಾಗುವವರನ್ನು ತುಕಡೆ ತುಕಡೆ ಗ್ಯಾಂಗ್ ಎನ್ನುವ ನೀವು ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ತುಕಡೆ ಗ್ಯಾಂಗ್, ದೇಶದ ಸಂವಿಧಾನವನ್ನು ಕಾಪಾಡಲು ದೇಶ ಧ್ವನಿ ಎತ್ತಿದೆ, ಸುಳ್ಳು ಭಾಷಣಕಾರ, ಎಳಸು ಸಂಸದರಿಂದ ಹೊಸ ಕತೆ ಸೃಷ್ಟಿಯಾಗಿದೆ, ಮುಸ್ಲಿಂರು ಅತಿಥಿಗಳು, ಅತಿಥಿಗಳಂತೆ ಇರಬೇಕು ಎನ್ನುವ ಭಟ್ಟರಿಗೆ ಈ ನೆಲದ ಪರಿಚಯವಿಲ್ಲ, ದಕ್ಷಿಣ ಕನ್ನಡದಲ್ಲಿ ಮಾಡಿದಂತೆ ಇಲ್ಲಿ ಮಾಡಲು ಬಂದರೆ ಪಂಚೆ ಉದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ದೇಶದಲ್ಲಿ ಅಸ್ಪøಶ್ಯರಿಗೆ ವಿದ್ಯೆ, ಉದ್ಯೋಗ ಕೊಟ್ಟವರು ಟಿಪ್ಪು ಸುಲ್ತಾನ್, ಓದಲು ಬರೆಯಲು ಬಾರದ ಹೈದರಾಲಿ ಗುಡುಗಿದೆ ಇಂಗ್ಲಿಷ್ ಹೆದರುತ್ತಿತ್ತು, ಅಂತಹ ದೇಶಭಕ್ತ ಸಂತತಿ ನಮ್ಮದು, ಇಂತಹ ಕಾರ್ಯಕ್ರಮದಲ್ಲಿ ಮುಸ್ಲಿಂರೊಂದಿಗೆ ಬೇರೆ ಧರ್ಮದವರು ಇರಬೇಕಿತ್ತು, ಆದರೆ ಅವರು ಹಿಂದೂತ್ವದ ಅಮಲಿನಲ್ಲಿ ತೇಲುತ್ತಿದ್ದಾರೆ, ದಕ್ಷಿಣ ಕನ್ನಡದಲ್ಲಿ ನಡೆಸಲು ಆಗದೇ ಕನಕಪುರಕ್ಕೆ ಬಂದಿದ್ದಾರೆ ಅಲ್ಲಾಡಿಸಲು ಎಂದು ಲೇವಡಿ ಮಾಡಿದರು.
ರಾಜ್ಯದ ಉಪಮುಖ್ಯಮಂತ್ರಿ ಅಸ್ವಸ್ಥ ನಾರಾಯಣ ಪ್ರತಿ ಕಾಲೇಜಿಗೆ ಸಿಎಎ ಪರ ಪ್ರಚಾರ ಬಿಜೆಪಿ, ಆರ್‍ಎಸ್‍ಎಸ್ ಪ್ರಚಾರ ಮಾಡುವುದಾಗಿ ಹೇಳುತ್ತಾರೆ, ಇಂತಹ ವಿರೋಧಿ ಚಟುವಟಿಕೆಗಳಿಗೆ ಅಡ್ಡಿಪಡಿಸಬೇಕು, ಸಿಎಎ ವಿರೋಧಿ ವಿದ್ಯಾರ್ಥಿ ಚಳವಳಿ ಹೆಚ್ಚಬೇಕು, ಈ ದೇಶದ ಪೌರತ್ವ ಸಾಬೀತುಪಡಿಸಲು ಪತ್ರ ನೀಡುವ ಬದಲು ರಕ್ತ ನೀಡುತ್ತೇವೆ, ಡಿಎನ್‍ಎ ಪರೀಕ್ಷೆ ಮಾಡಿಸಿಕೊಳ್ಳಲಿ, ನಮ್ಮ ರಕ್ತ ಈ ದೇಶಕ್ಕೆ ಹೊಂದಾಣಿಕೆಯಾದರೆ, ಪರ ಇರುವವರ ರಕ್ತ ಮಧ್ಯ ಏಷ್ಯಾಕ್ಕೆ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದರು.
ಚಿಂತಕ ಹಾರಾ ಮಹೇಶ್, ಅಜೇಯ್, ಮಂಜುನಾಥ್ ಮಾತನಾಡಿದ ಕಾರ್ಯಕ್ರಮದಲ್ಲಿ ಮುಖಂಡರಾದ ಮೌಲಾನ ಶಬ್ಬೀರ್ ಸಾಬ್, ಮೌಲಾನ ಜಿಯಾವುರ್ ರೆಹಮಾನ್ ಸಾಬ್, ವಕೀಲರಾದ ಮೊಹಮದ್ ತಾಹೀರ್, ಅಜೀಂ ಶರೀಫ್, ಝಲ್ಕೈರ್ ನೈನ್ ಸಾಬ್, ಮುಫ್ತ್ತಿ ಶಬಾಜ್ ಆಲಂ, ಜಮಾತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಹನೀಫ್‍ವುಲ್ಲಾ ಸಾಬ್ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
