ಶ್ರೀಗಳ ಪ್ರಥಮ ಪುಣ್ಯ ಸ್ಮರಣೆಗೆ ಶ್ರೀಮಠ ಸಜ್ಜು

ತುಮಕೂರು:

     ನಾಳೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸ್ಮರಣೆ ಜರುಗಲಿದ್ದು, ಇದಕ್ಕಾಗಿ ಮಠದ ಆವರಣ ಕಾರ್ಯಕ್ರಮದ ಯಶಸ್ಸಿಗೆ ವಿಶೇಷವಾಗಿ ಸಜ್ಜುಗೊಳ್ಳುತ್ತಿದೆ. ಜ.19 ರಂದು ಬೆಳಗಿನಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳು ಏರ್ಪಾಟಾಗಿದ್ದು, ಸರಿ ಸುಮಾರು 1 ಲಕ್ಷ ಜನರು ಸೇರುವ ಅಂದಾಜಿದೆ.

    ಈ ಹಿನ್ನೆಲೆಯಲ್ಲಿ ಬಂದು ಹೋಗುವ ಭಕ್ತರು, ಸಾರ್ವಜನಿಕರಿಗಾಗಿ ಪ್ರಸಾದದ ವ್ಯವಸ್ಥೆ ಸಿದ್ಧಗೊಳ್ಳುತ್ತಿದೆ. ಬೆಳಗ್ಗೆ 11.30 ರಿಂದ ಪ್ರಸಾದದ ವ್ಯವಸ್ಥೆ ಆರಂಭವಾಗಿ ರಾತ್ರಿ 11.30ರವರೆಗೂ ಮುಂದುವರೆಯಲಿದೆ. ಬೂಂದಿ, ಪಾಯಸವನ್ನು ತಯಾರಿಸಲಾಗುತ್ತಿದ್ದು, ಅನ್ನಾ, ಸಾಂಬರಿನ ಜೊತೆಗೆ ಇದನ್ನು ನೀಡಲಾಗುವುದು. ಕಳೆದ ಎರಡು ದಿನಗಳಿಂದ ಬೂಂದಿ ತಯಾರಿಕೆಗೆ ಮಠದಲ್ಲಿ ಸಿದ್ಧತೆಗಳು ನಡೆದಿವೆ.

   ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು ಆಗಮಿಸುತ್ತಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಕಾರ್ಯಕ್ರಮಕ್ಕೆ ಆಗಮಿಸುವರು.

   ಬೆಂಗಳೂರಿನ ಶಿವಕುಮಾರ ಸ್ವಾಮೀಜಿ ಅನ್ನದಾನ ಟ್ರಸ್ಟ್ ವತಿಯಿಂದ ಕಾರ್ಯಸೂಚಿ ಕೈಪಿಡಿ ಹಾಗೂ ವೆಬ್‍ಸೈಟ್ ಬಿಡುಗಡೆ ಮಾಡಲಾಗುತ್ತಿದೆ. ಗುರು ಕರುಣೆ ಮತ್ತು ನಿಷ್ಠೆ, ಯೋಗಾಂಗ ತ್ರಿವಿಧಿ, ಶಿವಕುಮಾರ ಚರಿತೆ ಪುಸ್ತಕಗಳು ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ.

    ಕೈಗಾರಿಕೋದ್ಯಮಿ ಮುಖೇಶ್ ಗರ್ಗ್ ಅವರು ಸುಮಾರು 50 ಕೆ.ಜಿ. ತೂಕದ ಶ್ರೀಗಳ ಬೆಳ್ಳಿ ಪುತ್ಥಳಿಯನ್ನು ಅಂದು ಸಮರ್ಪಿಸಲಿದ್ದಾರೆ. ಶ್ರೀಗಳ ಗದ್ದುಗೆಯಲ್ಲಿ ಅಂದು ಪೂಜಾ ಕೈಂಕರ್ಯಗಳು ನಡೆಯಲಿವೆ. ತುಮಕೂರು ಮಾತ್ರವಲ್ಲದೆ, ಇತರೆ ಜಿಲ್ಲೆಗಳಿಂದಲೂ ಶ್ರೀಮಠದ ಭಕ್ತರು ಅಂದು ಆಗಮಿಸಲಿದ್ದು, ಬಂದು ಹೋಗುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಗಮನ ಹರಿಸಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link