ಸಿದ್ಧಗಂಗಾ ಶಾಲೆ ಸುವರ್ಣ ಮಹೋತ್ಸವ: ಕ್ವಿಜ್ ಸ್ಪರ್ಧೆ

ದಾವಣಗೆರೆ:

        ಇಲ್ಲಿನ ಸಿದ್ಧಗಂಗಾ ಶಾಲೆಯ ಸುವರ್ಣ ಮಹೋತ್ಸವದ ಪ್ರಯುಕ್ತ 7ನೇ ತರಗತಿ ಪರೀಕ್ಷೆ ಬರೆದಿರುವ ಮಕ್ಕಳಿಗಾಗಿ ‘ಸುವರ್ಣ ಮಹೋತ್ಸವ ಲಿಖಿತ ಕ್ವಿಜ್’ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗಾಗಿ ಎಂ.ಎಸ್.ಎಸ್. ಲಿಖಿತ ಕ್ವಿಜ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ತಿಳಿಸಿದ್ದಾರೆ.

        ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1970ರಲ್ಲಿ ಎಂ.ಎಸ್.ಶಿವಣ್ಣನವರು ಆರಂಭಿಸಿದ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯು ಐವತ್ತು ವರ್ಷಗಳನ್ನು ಪೂರೈಸಿರುವ ಹಿನ್ನಿಲೆಯಲ್ಲಿ 2020ಕ್ಕೆ ಸಂಸ್ಥೆಯು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಈ ಲಿಖಿತ ಕ್ವಿಜ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

        7ನೇ ತರಗತಿ ಪರೀಕ್ಷೆ ಬರೆದಿರುವ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ಮಕ್ಕಳಿಗಾಗಿ ಏ.11ರಂದು ಬೆಳಿಗ್ಗೆ 11 ಗಂಟೆಗೆ ಶಾಲೆಯ ಆವರಣದಲ್ಲಿ ಸುವರ್ಣ ಮಹೋತ್ಸವ ಲಿಖಿತ ಕ್ವಿಜ್ ನಡೆಯಲಿದ್ದು, 60 ಅಂಕಗಳ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಮಕ್ಕಳು ಓಎಮ್‍ಆರ್ ಶೀಟ್‍ನಲ್ಲಿ 60 ನಿಮಿಷಗಳಲ್ಲಿ ಉತ್ತರಿಸಬೇಕು. ಈ ಕ್ವಿಜ್‍ನಲ್ಲಿ 7ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳ ಪಠ್ಯ ಪುಸ್ತಕಗಳಿಂದ ತಲಾ 30 ಅಂಕಗಳಿಗೆ ಪ್ರಶ್ನೆಗಳಿರಲಿವೆ.

        ಈ ಕ್ವಿಜ್‍ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ, ದ್ವಿತೀಯ ಬಹುಮಾನವಾಗಿ 10 ಸಾವಿರ ರೂ., ತೃತೀಯಯ ಬಹುಮಾನವಾಗಿ 5 ಸಾವಿರ ರೂ ಹಾಗೂ ಹತ್ತು ಜನರಿಗೆ ತಲಾ ಒಂದು ಸಾವಿರ ರೂ.ಗಳಂತೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ಕ್ವಿಜ್‍ನಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು 08030636285 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.

         ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ರಾಜ್ಯ ಪಠ್ಯ ಓದಿರುವ ಮಕ್ಕಳಿಗೆ ಏಪ್ರಿಲ್ 7ರಂದು ಬೆಳಿಗ್ಗೆ 11 ಗಂಟೆಗೆ ಹಾಗೂ ಸಿಬಿಎಸ್‍ಸಿ ಪಠ್ಯ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗಾಗಿ ಮಾರ್ಚ್ 31ರಂದು ಪ್ರತ್ಯೇಕವಾಗಿ ಎಂಎಸ್‍ಎಸ್ ಲಿಖಿತ ಕ್ವಿಜ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಹೆಸರು ನೋಂದಣಿಗೆ ಸ್ಟೇಟ್ ಸಿಲಬಸ್ ಓದಿರುವ ವಿದ್ಯಾರ್ಥಿಗಳು 08030636286 ಹಾಗೂ ಸಿಬಿಎಸ್‍ಸಿ ಪಠ್ಯ ಓದಿರುವ ಮಕ್ಕಳು 08030636284 ಮೊಬೈಲ್ ಸಂಖ್ಯೆಗಳಿಗೆ ಮಿಸ್ಡ್ ಕಾಲ್ ಕೊಡಬೇಕು.

        ಈ ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನವಾಗಿ 15 ಸಾವಿರ ರೂ., ತೃತೀಯ ಬಹುಮಾನವಾಗಿ 10 ಸಾವಿರ ರೂ. ಹಾಗೂ ಆ ನಂತರದ 10 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ.ಗಳಂತೆ ಸಮಾಧಾನಕರ ಬಹುಮಾನ ವಿತರಿಸಲಾಗುವುದು ಎಂದು ಅವರು ವಿವರಿಸಿದರು.

       ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಯಾವುದೇ ಶುಲ್ಕ ವಿಧಿಸದೇ ಉಚಿತ ಪ್ರವೇಶ ನೀಡಲಾಗುವುದು. ಹೆಸರು ನೋಂದಾಯಿಸಿರುವ ವಿದ್ಯಾರ್ಥಿಗಳು ನಿಗದಿತ ದಿನಾಂಕಗಳಂದು ಬೆಳಿಗ್ಗೆ 9 ಗಂಟೆಗೆ ಶಾಲಾ ಆವರಣದಲ್ಲಿ ಹಾಜರಾಗಿ ಪ್ರವೇಶ ಪತ್ರ ಪಡೆಯಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಡಾ.ಡಿ.ಎಸ್.ಜಯಂತ್, ಡಿ.ಎಸ್.ಹೇಮಂತ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link