ಭೋವಿ ಸಮಾಜಕ್ಕೆ ಭೋವಿನಿಗಮ, ಸಿದ್ದರಾಮ ಜಯಂತಿ ಕೊಡುಗೆ : ಡಿ. ಬಸವರಾಜ್

ದಾವಣಗೆರೆ :

            ಸಂಸದರಾದ ಜಿ.ಎಂ. ಸಿದ್ದೇಶ್ವರ್‍ರವರು ಮೂರು ಬಾರಿ ಆಯ್ಕೆಯಾಗಿ 15 ವರ್ಷಗಳ ಕಾಲ ಮಾಡಿದ ಕೆಲಸವಾದರೂ ಏನು ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೆ.ಎಸ್.ಐ.ಸಿ. ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಪ್ರಶ್ನಿಸಿದ್ದಾರೆ. ಸಿದ್ದೇಶ್ವರ್ ಮಾಡಿದ ಕೆಲಸ ಏನು ಇಲ್ಲದ ಕಾರಣ ಮೋದಿ ಎಂಬ ಗೊಂಬೆ ಹಿಡಿದುಕೊಂಡು ಪ್ರಚಾರ ಮಾಡಿದ್ದು ಬಿಟ್ಟರೇ ಬೇರೆ ಸಾಧನೆ ಶೂನ್ಯ.

           ಸಿದ್ದೇಶ್ವರ್ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳನ್ನು ಪುಡಿ ಪುಡಿ ಮಾಡಿ ಎಂದು ಕರೆ ನೀಡಿದ ತೇಜಸ್ವಿ ಸೂರ್ಯಾನನ್ನು ದಾವಣಗೆರೆ ಜಿಲ್ಲೆಗೆ ಕರೆಸಿ ಕೋಮುಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಸಿದ್ದೇಶ್ವರ ಹೇಳಿದ್ದರು, ಕಾರ್ಯಕರ್ತರು ಹೆಚ್ಚೆತ್ತುಕೊಳ್ಳದಿದ್ದರೆ ವಾಜಪೇಯಿಗೆ ಬಂದ ಗತಿಯೇ ಪ್ರಧಾನಿ ನರೇಂದ್ರ ಮೋದಿಗೆ ಬರಲಿದೆ ಎಂದು ಹೇಳಿದ್ದರು ಈಗ ಸತ್ಯವಾಗುವ ಲಕ್ಷಣಗಳು ಕಂಡು ಬರುತ್ತಿದೆ.

          ಆದುದರಿಂದ ಕೋಮುಭಾವನೆ ಕೆರೆಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಉಗ್ರರನ್ನು ಹಿಮ್ಮೆಟ್ಟಿ ದೇಶ ರಕ್ಷಣೆ ಮಾಡುತ್ತೇವೆ, ದೇಶದ ರಕ್ಷಣೆಗೆ ಬಿಜೆಪಿಗೆ ಮತನೀಡಿ ಎಂದು ಬಿಜೆಪಿ ಹೇಳುತ್ತಿದೆ. ಉಗ್ರರ ದಾಳಿಗೆ ಹತರಾದ ಪ್ರಮಾಣಿಕ ಅಧಿಕಾರಿ ಎಟಿಎಸ್ ಮುಖ್ಯಸ್ಥ ಹೇಮಂತ್‍ಕರ್ಕರೆ ಸಾವನ್ನು ನನ್ನ ಶಾಪದಿಂದಲೇ ಎಂದು ಭಯೋತ್ಪಾದಕಿ ಸಾದ್ವಿ ಪ್ರಜ್ಞಾಸಿಂಗ್ ಹೇಳಿಕೆ ನೀಡಿ ಸಂಭ್ರಮಿಸುತ್ತಿದ್ದಾರೆ. ಸಾದ್ವಿ ಪ್ರಜ್ಞಾಸಿಂಗ್‍ರವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮರ್ಥಿಸುತ್ತಿದ್ದಾರೆ. ಇದರಿಂದ ಇವರ ದೇಶಪ್ರೇಮ ಹಿಮ್ಮಡಿಗೊಂಡಿದೆ ಎಂದು ಡಿ. ಬಸವರಾಜ್ ವ್ಯಂಗ್ಯವಾಡಿದರು.

          ಇಷ್ಟು ದಿನ ತೆರೆಮರೆಯಲ್ಲಿ ಆರ್‍ಎಸ್‍ಎಸ್‍ನ ಕೇಶವ ಕೃಪಾದಲ್ಲಿ ಕಿತಾಪತಿ ಮಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಸಹ ಸಂಚಾಲಕ ಬಿ.ಎಲ್. ಸಂತೋಷ್ ಈಗ ಹೊರಬಂದು ಮಾತನಾಡುತ್ತಿದ್ದಾರೆ. ಇವರು ಆಡುವ ಮಾತು ಅಚ್ಚರಿ ತರಿಸುತ್ತವೆ. ಡಿಎನ್‍ಎ ನೋಡಿ ಟಿಕೇಟ್ ಕೊಡಲ್ಲ ಅಂತಾರೆ ಆದರೆ ಯಡಿಯೂರಪ್ಪ ಮಗ ಬಿ.ಸ್.ರಾಘವೇಂದ್ರ, ಉದಾಸಿ ಮಗ ಶಿವಕುಮಾರ್ ಉದಾಸಿ ಬೆಂಗಳೂರು ದಕ್ಷಿಣದ ಅಭ್ಯರ್ಥಿ ತೇಜಸ್ವಿ ಸೂರ್ಯ ಸಹ ಶಾಸಕ ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ ಇವರ ಡಿ.ಎನ್.ಎ ವಿಚಾರ ಹೇಗೆ ಎಂದು ಪ್ರಶ್ನಿಸಿದ ಡಿ. ಬಸವರಾಜ್, ಮಾಜಿ ಕೇಂದ್ರ ಸಚಿವ ದಿ||  ಅನಂತಕುಮಾರ್ ಕುಟುಂಬಕ್ಕೆ ಅವಮಾನ ಮಾಡಲು ಸಂತೋಷ್‍ಗೆ ಡಿಎನ್‍ಎ ಅಂದ್ರೆ ವಂಶವಾಹಿನಿ ನೆನಪಾಗಿದೆ
     

        ಈ ಸಂತೋಷ್ ಸೇರಿದಂತೆ ಕೆಲವು ಕೋಮುವಾದಿಗಳ ಗುಂಪು ಜಾಗೃತವಾಗಿ ಕೋಮುಭಾವನೆ ಕೆರಳಿಸುವ ಯೋಜನೆ ರೂಪಿಸುತ್ತಿದ್ದಾರೆ. ನಮ್ಮ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈ ಹಿಂದೆ ಬಸ್‍ಶಲ್ಟರ್ ಕಟ್ಟುವಲ್ಲಿ ಅವ್ಯವಹಾರ ಮಾಡಿದ್ದರು. ಇವರ ಸಹೋದರ ಅದಿರು ನಾಪತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿದಿದ್ದರು. ಬಳ್ಳಾರಿ ರೆಡ್ಡಿಗಳಂತೆ ಇವರು ಕೂಡ ಜೈಲುವಾಸಿಗಳೇ ಆಗಿದ್ದರು, ಪ್ರಧಾನಿ ಮೋದಿ ಅವರ ಪ್ರಭಾವ ಬಲಸಿ ಬಜಾವ್ ಆಗಿರುವುದು ಜನತೆಗೆ ಗೊತ್ತಿದೆ ಎಂದು ಕುಟುಕಿದರು.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪರಿಶಿಷ್ಟಜಾತಿ ಮತ್ತು ವರ್ಗ ಉಪಯೋಜನೆ ರಾಷ್ಟ್ರದಲ್ಲೇ ಕ್ರಾಂತಿಕಾರಿಕ ಮಸೂದೆ ಮಂಡಿಸಿ ಜಾರಿಗೊಳಿಸಿದ್ದಾರೆ. ಇದರ ಫಲವಾಗಿ ಪರಿಶಿಷ್ಟರರಿಗೆ ನಾಲ್ಕೈದು ಸಾವಿರ ಕೋಟಿಗೆ ಇದ್ದ ಬಜೆಟ್ ಇದೀಗ 30 ಸಾವಿರ ಕೋಟಿಗೆ ಏರಿಕೆ ಆಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಒಂದು ಕೋಟಿ ಕಾಮಗಾರಿಗಳನ್ನು ಟೆಂಡರ್ ಇಲ್ಲದೇ ನೀಡಲು ಕಾಯ್ದೆ ರೂಪಿಸಲಾಗಿದೆ.

       ಭೋವಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿರುವ ಸಿದ್ದರಾಮಯ್ಯ ಸರ್ಕಾರದ ಆದೇಶದಿಂದ ಭೋವಿ ಸಮಾಜದ ಆರಾಧ್ಯ ದೈವ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಸರ್ಕಾರದಿಂದಲೇ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಭೋವಿ ಸಮಾಜವು ಆರ್ಥಿಕ ಸುಭದ್ರತೆಗೆ ಒತ್ತು ನೀಡಲಾಗಿದೆ. ಭೋವಿ ಸಮಾಜಕ್ಕೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪಾವಗಡ ಕ್ಷೇತ್ರದ ಶಾಸಕರಾದ ವೆಂಕಟರಮಪ್ಪ ಅವರನ್ನು ನೇಮಿಸಲಾಗಿದೆ.

ಒಟ್ಟಾರೆ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳಿಗೂ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ವಿಶೇಷ ಸ್ಥಾನಮಾನ ನೀಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಸಿದ್ದರಾಮಯ್ಯ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ನಗರ ಹಾಗೂ ಜಿಲ್ಲೆಗೆ ಕೈಗೊಂಡ ಅಭಿವೃದ್ಧಿ ಕಾರ್ಯಗಳು ನಮ್ಮ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ಗೆಲುವಿಗೆ ಶ್ರೀ ರಕ್ಷೆ ಆಗಲಿದೆ ಎಂದು ಡಿ. ಬಸವರಾಜ್ ಅಭಿಪ್ರಾಯಪಟ್ಟರು. ಅಲ್ಲಾವಲಿಘಾಜಿ ಖಾನ್, ಹೆಚ್. ಸುಭಾನ್‍ಸಾಬ್, ನವೀನ್‍ಬಾಷಾ, ಡಿ. ಶಿವಕುಮಾರ್, ಖಾಜಿ ಕಲೀಲ್, ಹೆಚ್. ಹರೀಶ್, ಲಿಯಾಖತ್ ಅಲಿ, ಎ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap