ಕಾರ್ಯಕರ್ತರ ಕ್ಷಮೆ ಕೇಳಿದ ಸಿದ್ಧರಾಮಯ್ಯ..!

ಬೆಂಗಳೂರು :

      ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿಎಲ್.ಪಿ ನಾಯಕ, ಮಾಜಿ ಸಿದ್ದರಾಮಯ್ಯ ಅವರಿಗೆ ಪಕ್ಷದ ಕಾರ್ಯಕರ್ತರು ಘೇರಾವ್ ಹಾಕಿದ ಪ್ರಸಂಗ ನಡೆದಿದೆ. ಈ ವೇಳೆ, ಪರಿಸ್ಥಿತಿ ಅರಿತ ಸಿದ್ದರಾಮಯ್ಯ ಕಾರ್ಯಕರ್ತರ ಕ್ಷಮೆಯಾಚಿಸಿದ ಘಟನೆಯೂ ನಡೆಯಿತು.

       ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆ.ಆರ್.ಪುರಂ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆಲಾಗಿತ್ತು. ಈ ವೇಳೆ, ಕಾರ್ಯಕರ್ತರು ಉಪಚುನಾವಣೆಗೆ ಎಂಎಲ್ಸಿ ನಾರಾಯಣ್ ಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಯಾದವ ಸಮುದಾಯದ ನಾಯಕರನ್ನು ತುಳಿಯಲಾಗಿದೆ. ಈ ಹಿಂದೆಯೂ ಈ ಕಾರ್ಯ ನಡೆದಿತ್ತು. ಭೈರತಿ ಸುರೇಶ್ ಕ್ಷೇತ್ರಕ್ಕೆ ಅನ್ಯಾಯ ಮಾಡಿದರು. ಈಗ ಡಿ.ಕೆ.ಮೋಹನ್ ಬಾಬು ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ, ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ ಎಂದು ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದು ಘೇರಾವ್ ಹಾಕಿದರು.

      ಈ ವೇಳೆ ಸಿದ್ದರಾಮಯ್ಯ ಕಾರ್ಯಕರ್ತರಿಗೆ ನೀವು ಡಿ.ಕೆ.ಮೋಹನ್ ಬಾಬು ಬೆಂಬಲಿಗರಾ ಎಂದು ಪ್ರಶ್ನಿಸಿದರು. ಇದರಿಂದ ಮತ್ತಷ್ಟು  ಕೆರಳಿದ ಕಾರ್ಯಕರ್ತರು ನಾವು ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಈ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಪರಿಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿಸಿದರು. ಇದನ್ನು ಮನಗಂಡ ಸಿದ್ದರಾಮಯ್ಯ ಕಾರ್ಯಕರ್ತರ ಕ್ಷಮೆ ಕೋರಿದರು. ಅಲ್ಲದೇ, ಡಿ.ಕೆ.ಮೋಹನ್ ಬಾಬುಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link