ಬೆಂಗಳೂರು :
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ವಿವಿಧ ಬಡಾವಣೆಯ ಇಂದಿರಾ ಕ್ಯಾಂಟೀನ್ ಗಳಿಗೆ ಇಂದು ಭೇಟಿ ನೀಡಿದ್ದರು.
ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ನೀಡುತ್ತಿದ್ದ ಊಟ ಮತ್ತು ತಿಂಡಿಗೆ ಸರ್ಕಾರ ಇತ್ತೀಚೆಗೆ ದರ ನಿಗದಿ ಮಾಡಿದೆ. ಉಚಿತವಾಗಿ ನೀಡಿದರೆ ದುರುಪಯೋಗವಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಸಂಬಂಧ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಮುಖ್ಯಮಂತ್ರಿಯವರೂ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಶೀಲಿಸುವ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ಮಾಡಿದರು. ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ಜೊತೆಗೆ ಮಾತುಕತೆ ನಡೆಸಿದರು. ಉಚಿತವಾಗಿ ನೀಡುತ್ತಿದ್ದ ಸಂದರ್ಭದಲ್ಲಿ ಕ್ಯಾಂಟೀನ್ ಗಳಲ್ಲಿ 700ಕ್ಕೂ ಅಧಿಕ ಮಂದಿ ಊಟ, ತಿಂಡಿ ಮಾಡುತ್ತಿದ್ದರು. ಅಷ್ಟು ಸಂಖ್ಯೆಯ ಪೊಟ್ಟಣಗಳು ವಿತರಣೆ ಆಗುತ್ತಿತ್ತು. ಈಗ ಅವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 100-150 ಮಂದಿ ಮಾತ್ರ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಉಚಿತವಾಗಿ ಊಟ, ತಿಂಡಿ ಪೂರೈಕೆ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಹೇಳಿದರು. ಈ ಹಿನ್ನೆಲೆಯಲ್ಲಿ ಉಚಿತವಾಗಿ ಊಟ, ತಿಂಡಿ ನೀಡುವ ಕುರಿತು ಪರಿಶೀಲಿಸುವಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರನ್ನು ಮತ್ತೆ ಒತ್ತಾಯಿಸಿದ್ದಾರೆ.
ವಸಂತನಗರ, ಹೆಬ್ಬಾಳ ಹಾಗೂ ಆರ್.ಟಿ. ನಗರ ಬಡಾವಣೆಯ ಇಂದಿರಾ ಕ್ಯಾಂಟೀನ್ ಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದರು. ಶಾಸಕರಾದ ಬೈರತಿ ಸುರೇಶ್ ಮತ್ತಿತರರು ಜೊತೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ