ಬೆಂಗಳೂರು
ಬಹುದಿನಗಳಿಂದ ಕಾವೇರಿ ನಿವಾಸದಲ್ಲಿಯೇ ಝಾಂಡಾ ಊರಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕೊನೆಗೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯನ್ನು ಬಿಟ್ಟುಕೊಡಲು ಮುಂದಾಗಿದ್ದು, ಹೊಸಬಾಡಿಗೆ ಮನೆಯ ಹುಡುಕಾಟದಲ್ಲಿದ್ದಾರೆ.
2013 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಇಲ್ಲಿಯವರೆಗೂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು.ಇದೀಗ ಕಾವೇರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಂಚಿಕೆಯಾಗಿದ್ದು ,ಕಾವೇರಿ ನಿವಾಸ ತೊರೆಯಲೇಬೇಕಿದೆ. ಹೀಗಾಗಿ ಸದಾಶಿವನಗರದಲ್ಲಿ ಹೊಸ ನಿವಾಸಕ್ಕಾಗಿ ಸಿದ್ದರಾಮಯ್ಯ ಹುಡುಕಾಟ ನಡೆಸಿದ್ದಾರೆ.
ವಿಜಯನಗರದಲ್ಲಿ ಸಿದ್ದರಾಮಯ್ಯಗೆ ಸ್ವಂತ ಮನೆಯಿದೆ. ಆದರೆ ವಿಧಾನಸೌಧ ಹಾಗೂ ಕೆಪಿಸಿಸಿ ಕಚೇರಿ ಸೇರಿದಂತೆ ಇತರೆ ರಾಜಕೀಯ ಚಟುವಟಿಕೆಗಳಿಗೆ ಸದಾಶಿವನಗರ ಸ್ಥಳ ಹತ್ತಿರವಾಗಿದೆ. ಹೀಗಾಗಿ ಎಲ್ಲಾ ರೀತಿಯಿಂದಲೂ ಅನುಕೂಲವಾಗುವಂತೆ ಶಾಸಕ ಬೈರತಿ ಸುರೇಶ್ ಸಿದ್ದರಾಮಯ್ಯಗೆ ವಾಸ್ತವ್ಯ ಹುಡುಕುತ್ತಿದ್ದಾರೆ.
2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅಧಿಕೃತ ನಿವಾಸ ಕಾವೇರಿಗೆ ಹೋಗಲು ಮನಸು ಮಾಡದೇ ಜೆ.ಪಿ.ನಗರದಲ್ಲಿರುವ ನಿವಾಸವನ್ನೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮಾಡಿಕೊಂಡಿದ್ದರು. ಮೈತ್ರಿ ಸರ್ಕಾರದಲ್ಲಿಯೂ ಸಿದ್ದರಾಮಯ್ಯ ಕಾವೇರಿಯಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೂ ಕಾವೇರಿಯ ಮೇಲೆ ಕಣ್ಣಿತ್ತು.ಮೈತ್ರಿ ಸರ್ಕಾರ ಪತನಗೊಂಡ ಬಳಿಕವೂ ಸಿದ್ದರಾಮಯ್ಯ ಕಾವೇರಿ ತೊರೆದಿರಲಿಲ್ಲ.
ಎರಡು ತಿಂಗಳ ಹಿಂದೆ ಬಿಜೆಪಿ ಸರ್ಕಾರ ನೂತನ ಸಚಿವರಿಗೆ ನಿವಾಸ ಹಂಚಿಕೆ ಮಾಡಿ ಕುಮಾರಕೃಪ ರಸ್ತೆಯಲ್ಲಿರುವ ಕಾವೇರಿ ನಿವಾಸ ಹೊರತುಪಡಿಸಿ ಉಳಿದ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡಿತ್ತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ