ಬೆಂಗಳೂರು
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಮಳೆ ಮತ್ತು ಪ್ರವಾಹ ಉಂಟಾಗಿದೆ. ಪರಿಸ್ಥಿತಿಯ ಭೀಕರತೆ ಅರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಬೇಕು ಹಾಗೂ ರಾಜ್ಯಕ್ಕೆ ತುರ್ತಾಗಿ 5 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ನೆರೆ ಪ್ರದೇಶಗಳಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್ ಮತ್ತು ಅಮಿತ್ ಶಾ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸುವುದಕ್ಕಿಂತ ಹೆಚ್ಚಾಗಿ ಪ್ರಧಾನಿಗಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಸೋಮವಾರ ಅಥವಾ ಮಂಗಳವಾರವಾದರೂ ಪ್ರಧಾನಿ ನರೇಂದ್ರ ಮೋದಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿ ಎಂದು ಒತ್ತಾಯಿಸಿದರು.
ತಮ್ಮ ಅಧಿಕತ ನಿವಾಸ ಕಾವೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದ 6 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ನನ್ನ ಪ್ರಕಾರ 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಮನೆಗಳು, ಸೇತುವೆಗಳು ಕುಸಿದು ಬಿದ್ದಿವೆ. ಜನರ ಜೀವನವೇ ದಿಕ್ಕೆಟ್ಟು ಹೋಗಿದೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ. ನೆರವು ಘೋಷಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಿಂದ ವರದಿಗೆ ಕಾಯದೆ ಕೇಂದ್ರ ಸರ್ಕಾರ ನೆರವು ನೀಡಬೇಕು. ಈ ಹಿಂದೆ ನೆರೆ ಬಂದಾಗ ಆಗಿನ ಪ್ರಧಾನಿ ಮನಮೋಹನಸಿಂಗ್ ಮತ್ತು ಸೋನಿಯಾಗಾಂಧಿ ಅವರು ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ಸ್ಥಳದಲ್ಲೇ 1600 ಕೋಟಿ ರೂ. ನೆರವು ಘೋಷಿಸಿದ್ದನ್ನು ನೆನಪು ಮಾಡಿದ ಅವರು, ಪ್ರಧಾನ ಮಂತ್ರಿಗಳು ಪರಿಸ್ಥಿತಿ ಅವಲೋಕನ ನಡೆಸುವುದು ಸೂಕ್ತ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಕೇಂದ್ರದಿಂದ ಇದುವರೆಗೂ ಬಿಡಿಗಾಸು ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರ ನೆರವು ನೀಡದಿರುವುದು ಅಚ್ಚರಿ ತಂದಿದೆ ಎಂದರು.
ಈ ರೀತಿ ಮಲತಾಯಿ ಧೋರಣೆ ಸರಿಯಲ್ಲ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ. ರಾಜ್ಯಕ್ಕೆ ನೆರವು ನೀಡಿ ಇನ್ನೂ ಹೆಚ್ಚು ಹೆಲಿಕಾಪ್ಟರ್‍ಗಳನ್ನು ಕಳುಹಿಸಿ ಪ್ರವಾಹ ಪೀಡಿತರನ್ನು ರಕ್ಷಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿ, ಜನರ ಕಷ್ಟಗಳಿಗೆ ಸ್ಪಂದಿಸದೆ ಕೇವಲ ಭಾವೋದ್ವೇಗದ ವಿಚಾರಗಳ ಮೇಲೆ ಆಡಳಿತ ನಡೆಸುವುದು ಒಳ್ಳೆಯದಲ್ಲ. ಕೇಂದ್ರ ಸರ್ಕಾರ ಈಗಲಾದರೂ ರಾಜ್ಯಕ್ಕೆ ನೆರವು ನೀಡಲಿ.
ಏಕಪಾತ್ರಾಭಿನಯ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಅವರದು ಒನ್ ಮ್ಯಾನ್ ಶೋ ಎಂದು ಟೀಕಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಒಬ್ಬರೆ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ. ಮಂತ್ರಿ ಮಂಡಲ ರಚನೆಯಾಗಿದ್ದರೆ ಪರಿಣಾಮಕಾರಿಯಾಗಿ ಕೆಲಸಗಳಾಗುತ್ತಿದ್ದವು. ಶಾಸಕರೆ ಸಚಿವರು ಎಂದು ಯಡಿಯೂರಪ್ಪ ಹೇಳಿದ್ದಾರೆ. ಶಾಸಕರು ಸಚಿವರ ರೀತಿ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸರ್ಕಾರವನ್ನು ಬೀಳಿಸಲು ಇದ್ದ ಆತುರ ಸಂಪುಟ ರಚನೆಗೆ ಏಕೆ ಇಲ್ಲ ಎಂದು ಪ್ರಶ್ನಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿಗಳ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ಅವರನ್ನು ಕರೆಸಿ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆಯೂ ಅವರು ಒತ್ತಾಯಿಸಿದರು. ನೆರೆ ಪ್ರದೇಶಗಳಲ್ಲಿ ಯುದ್ಧೋಪಾದಿಯ ರಕ್ಷಣಾ ಕಾರ್ಯ ನಡೆಯಬೇಕು. ಪರಿಹಾರ ಕೇಂದ್ರಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಎಂಬ ಮಾಹಿತಿ ಇದೆ. ಸರ್ಕಾರ ಕೂಡಲೇ ಅಗತ್ಯ ಆಹಾರ, ಔಷಧ ಎಲ್ಲವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಕಣ್ಣಿನ ಸಮಸ್ಯೆ ಇರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಆದಷ್ಟು ಶೀಘ್ರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿ, ಜನರು, ಸಂಘ ಸಂಸ್ಥೆಗಳು ಸಹ ನೆರೆ ಸಂತ್ರಸ್ತರಿಗೆ ಉದಾರವಾಗಿ ಸಹಾಯ ಮಾಡುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








